ಟೋಕಿಯೋ ಒಲಿಂಪಿಕ್ಸ್| ಆರ್ಚರಿ : ಪ್ರೀ-ಕ್ವಾರ್ಟರ್ ಫೈನಲ್’ಗೆ ದೀಪಿಕಾ

Prasthutha|

ಟೋಕಿಯೋ, ಜು-28: ವಿಶ್ವದ ನಂ.1 ರ‍್ಯಾಂಕ್‌ನ ದೀಪಿಕಾ ಕುಮಾರಿ ಟೋಕಿಯೊ ಒಲಿಂಪಿಕ್ಸ್ ಆರ್ಚರಿ ಮಹಿಳಾ ವೈಯಕ್ತಿಕ ವಿಭಾಗದಲ್ಲಿ ಪ್ರಿ-ಕ್ವಾರ್ಟರ್‌ಫೈನಲ್‌ಗೆ ಲಗ್ಗೆಯಿಟ್ಟಿದ್ದಾರೆ.

- Advertisement -

ಅಮೆರಿಕದ 18ರ ಹರೆಯದ ಯುವ ಬಿಲ್ಲುಗಾರ್ತಿ ಜೆನ್ನಿಫರ್ ಮಚಿನೊ ಫರ್ನಾಂಡೀಸ್ ದೀಪಿಕಾಗೆ ನಿಕಟ ಪೈಪೋಟಿ ನೀಡಿದ್ದರು.
ಆದರೆ ನಿರ್ಣಾಯಕ ಹಂತದಲ್ಲಿ ನಿಖರ ಗುರಿ ಸಾಧಿಸುವ ಮೂಲಕ 6-4ರ ಅಂತರದಲ್ಲಿ ದೀಪಿಕಾ ಪಂದ್ಯ ಗೆದ್ದರು. ಮೊದಲ ಸೆಟ್ ಅನ್ನು ಕೇವಲ ಒಂದು ಪಾಯಿಂಟ್ ಅಂತರದಲ್ಲಿ ಕಳೆದುಕೊಂಡ ದೀಪಿಕಾ, ನಂತರ ಮೂರು ಸೆಟ್‌ಗಳಲ್ಲಿ ಹ್ಯಾಟ್ರಿಕ್ ‘ಫರ್ಫೆಟ್ 10’ ಗುರಿಯಿಡುವ ಮೂಲಕ 4-2ರ ಅಂತರದ ಮುನ್ನಡೆ ಕಾಯ್ದುಕೊಂಡರು. ಬಳಿಕ ಲಯ ಕಳೆದುಕೊಂಡ ಪರಿಣಾಮ ಎದುರಾಳಿ 4-4ರ ಸಮಬಲ ಸಾಧಿಸಿದರು.

ಅತಿ ಒತ್ತಡದ ಸನ್ನಿವೇಶದಲ್ಲಿ ತಮ್ಮ ಅನುಭವ ಸಂಪತ್ತನ್ನು ಧಾರೆಯೆರೆದ ದೀಪಿಕಾ ರೋಚಕ ಗೆಲುವು ದಾಖಲಿಸುವಲ್ಲಿ ಯಶಸ್ವಿಯಾದರು.

- Advertisement -

ಮೊದಲ ಸುತ್ತಿನ ಹೋರಾಟದಲ್ಲಿ ದೀಪಿಕಾ ಕುಮಾರಿ, ಭೂತಾನ್‌ನ ಕರ್ಮ ವಿರುದ್ಧ 6-0 ಅಂತರದ ನಿರಾಯಾಸ ಗೆಲುವು ದಾಖಲಿಸಿದ್ದರು. ಏತನ್ಮಧ್ಯೆ ದೀಪಿಕಾ ಪತಿ ಅತನು ದಾಸ್‌, ಪುರುಷರ ವೈಯಕ್ತಿಕ ವಿಭಾಗದಲ್ಲಿ ನಾಳೆ ಕಣಕ್ಕಿಳಿಯಲಿದ್ದಾರೆ.
ಮತ್ತೊಂದೆಡೆ ತರುಣ್‌ದೀಪ್ ರಾಯ್ ಹಾಗೂ ಪ್ರವೀಣ್ ಜಾಧವ್ ಎರಡನೇ ಸುತ್ತಿನಿಂದಲೇ ನಿರ್ಗಮಿಸಿದ್ದಾರೆ.

ಇದರೊಂದಿಗೆ ಆರ್ಚರಿ ವಿಭಾಗದಲ್ಲಿ ಸಾಲು ಸಾಲು ಸೋಲುಗಳನ್ನು ಅನುಭವಿಸಿರುವ ಭಾರತದ ಆರ್ಚರಿ ಪಟುಗಳ ನಡುವೆ ದೀಪಿಕಾ ಆಶಾಕಿರಣವಾಗಿ ಹೊರಹೊಮ್ಮಿದ್ದು, ಪದಕದ ಆಸೆ ಜೀವಂತವಾಗಿದೆ.



Join Whatsapp