ಅಭ್ಯಾಸದ ವೇಳೆ ಕೈ ಮುರಿತ| ವಿಶ್ವ ಕುಸ್ತಿ ಚಾಂಪಿಯನ್‌ಷಿಪ್‌ನಿಂದ ದೀಪಕ್ ಪೂನಿಯಾ ಔಟ್‌

Prasthutha|

ಸರ್ಬಿಯಾದ ಬೆಲ್‌ಗ್ರೇಡ್‌ನಲ್ಲಿ ಶನಿವಾರದಿಂದ  ಆರಂಭವಾಗಲಿರುವ ಸೀನಿಯರ್‌  ವಿಶ್ವ ಕುಸ್ತಿ ಚಾಂಪಿಯನ್‌ಷಿಪ್‌ ಕೂಟದಿಂದ ದೀಪಕ್ ಪೂನಿಯಾ ಹೊರಗುಳಿದಿದ್ದಾರೆ. ಅಮೆರಿಕದ ಮಿಚಿಗನ್‌ನಲ್ಲಿ ತರಬೇತಿ ಪಡೆಯುತ್ತಿದ್ದ ವೇಳೆ, ಪೂನಿಯಾ ಅವರು ಕೈ ಮುರಿತಕ್ಕೆ ಒಳಗಾಗಿದ್ದಾರೆ ಎಂದು ರೆಸ್ಲಿಂಗ್‌ ಫೆಡರೇಶನ್ ಆಫ್ ಇಂಡಿಯಾ, (ಡಬ್ಲ್ಯೂಎಫ್‌ಐ) ಸಹಾಯಕ ಕಾರ್ಯದರ್ಶಿ ವಿನೋದ್ ತೋಮರ್ ತಿಳಿಸಿದ್ದಾರೆ.

- Advertisement -

ಆಗಸ್ಟ್‌ ಆರಂಭದಲ್ಲಿ ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆದ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಪುನಿಯಾ ಚಿನ್ನದ ಪದಕ ಗೆದ್ದು ಸಂಭ್ರಮಿಸಿದ್ದರು.  ಹರಿಯಾಣದ ಛಾರಾ ಗ್ರಾಮದ 23ರ ಹರೆಯದ ಪೂನಿಯಾ, 2019ರ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ 86 ಕೆಜಿ ವಿಭಾಗದಲ್ಲಿ ಬೆಳ್ಳಿ ಪದಕ ಗೆದ್ದಿದ್ದರು. ಬೆಲ್‌ಗ್ರೇಡ್‌ ವಿಶ್ವ ಚಾಂಪಿಯನ್‌ಶಿಪ್‌ನಲ್ಲೂ ದೀಪಕ್ ಪೂನಿಯಾ, ಪದಕ ಗೆಲ್ಲುವ ನೆಚ್ಚಿನ ಸ್ಪರ್ಧಿಯಾಗಿದ್ದರು. ಪೂನಿಯಾ ಅವರ ಬದಲಿ ಕುಸ್ತಿ ಪಟುವಿಗಾಗಿ ನಡೆಸಲಾದ ಟ್ರಯಲ್ಸ್‌ನಲ್ಲಿ ಸಂಜೀತ್ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಡಬ್ಲ್ಯೂಎಫ್‌ಐ ತಿಳಿಸಿದೆ.

ಸೆಪ್ಟಂಬರ್‌ 10ರಿಂದ ಆರಂಭವಾಗುವ ಸೀನಿಯರ್‌ ವಿಶ್ವ ಕುಸ್ತಿ ಚಾಂಪಿಯನ್‌ಷಿಪ್‌, ಸೆಪ್ಟಂಬರ್‌18ರವರೆಗೆ ನಡೆಯಲಿದೆ. ಲಕ್ನೋ ಮತ್ತು ಹರಿಯಾಣದ ಸೋನಿಪಥ್‌ನ ಸಾಯ್‌ ಕೇಂದ್ರಗಳಲ್ಲಿ ಆಯ್ಕೆ ಟ್ರಯಲ್ಸ್‌ ನಡೆಸಿದ ಬಳಿಕ, ಕೂಟದಲ್ಲಿ ಭಾಗವಹಿಸುವ ಭಾರತೀಯ ತಂಡವನ್ನು ಆಗಸ್ಟ್‌ ಅಂತ್ಯದಲ್ಲಿ ಪ್ರಕಟಿಸಲಾಗಿತ್ತು.

- Advertisement -

ಬರ್ಮಿಂಗ್‌ಹ್ಯಾಮ್‌ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ʻಹ್ಯಾಟ್ರಿಕ್ʼ ಚಿನ್ನದ ಪದಕಗಳನ್ನು ಪೂರ್ಣಗೊಳಿಸಿದ್ದ ವಿನೇಶ್ ಪೊಗಾಟ್ ಮಹಿಳೆಯರ ತಂಡದ ಸಾರಥ್ಯ ವಹಿಸಲಿದ್ದಾರೆ. ಮತ್ತೊಂದೆಡೆ ಟೋಕಿಯೊ ಒಲಿಂಪಿಕ್ಸ್‌ ಕಂಚಿನ ಪದಕ ವಿಜೇತ ಬಜರಂಗ್ ಪೂನಿಯಾ ಪುರುಷರ ತಂಡವನ್ನು ಮುನ್ನಡೆಸಲಿದ್ದಾರೆ.

ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆದ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಪದಕ ವಿಜೇತರಾದ ಬಜರಂಗ್ ಪೂನಿಯಾ(65 ಕೆಜಿ),  ರವಿ ದಹಿಯಾ (57 ಕೆಜಿ) ಹಾಗೂ ದೀಪಕ್ ಪೂನಿಯಾಗೆ (86 ಕೆಜಿ) ಅರ್ಹತಾ ಸುತ್ತಿನ ಪಂದ್ಯಗಳಿಂದ ವಿನಾಯತಿ ನೀಡಲಾಗಿತ್ತು.

ಕನ್ನಡಿಗ ಅರ್ಜುನ್‌ ಆಯ್ಕೆ

ವಿಶ್ವ ಕುಸ್ತಿ ಚಾಂಪಿಯನ್‌ಷಿಪ್‌ನ ಗ್ರಿಕೊ ರೋಮನ್‌ ಸ್ಟೈಲ್‌ನ 55 ಕೆ.ಜಿ. ವಿಭಾಗದಲ್ಲಿ, ಬಾಗಲಕೋಟೆ ಜಿಲ್ಲೆಯ ಬೇವಿನಮಟ್ಟಿಯ ಅರ್ಜುನ್‌ ಹಲಕುರ್ಕಿ, ರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. ಅರ್ಹತಾ ಸುತ್ತಿನಲ್ಲಿ ಆಡಿದ ಮೂರು ಪಂದ್ಯಗಳಲ್ಲೂ ಎದುರಾಳಿಗಳನ್ನು ಮಣಿಸುವ ಮೂಲಕ ಅರ್ಜುನ್‌, ಇದೇ ಮೊದಲ ಬಾರಿಗೆ ಭಾರತ ತಂಡಕ್ಕೆ ಆಯ್ಕೆಯಾಗಿದ್ದಾರೆ.



Join Whatsapp