ರಾಜ್ಯದ ಜನರಿಗೆ ಸರ್ಕಾರದಿಂದ ತ್ರಿವಿಧ ದಾಸೋಹ ಸಮರ್ಪಣೆ: ಮುಖ್ಯಮಂತ್ರಿ ಬೊಮ್ಮಾಯಿ

Prasthutha|

ತುಮಕೂರು: ರಾಜ್ಯದಲ್ಲಿ ಅವಶ್ಯಕತೆ ಇರುವ ಎಲ್ಲ ವರ್ಗದ ಜನರಿಗೆ ಹಾಗೂ ಬಡವರಿಗೆ ಅನ್ನ, ಅಕ್ಷರ, ಆಶ್ರಯದ ತ್ರಿವಿಧ ದಾಸೋಹವನ್ನು ಸಮರ್ಪಿಸುವ ಕೆಲಸವನ್ನು ಸರ್ಕಾರ ಮಾಡುತ್ತಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

- Advertisement -

ಅವರು ಇಂದು ದಾಸೋಹ ದಿನಾಚರಣೆಯ ಅಂಗವಾಗಿ ಶ್ರೀ ಸಿದ್ದಗಂಗಾ ಕ್ಷೇತ್ರಕ್ಕೆ ಭೇಟಿ ನೀಡಿ ದಾಸೋಹ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾಧ್ಯಮದವರೊಂದಿಗೆ ಮಾತನಾಡಿದರು.

ದಾಸೋಹ ಕರ್ನಾಟಕದ ಪರಂಪರೆ. ಅನ್ನ, ಅಕ್ಷರ, ಆಶ್ರಯ ದಾಸೋಹಕ್ಕೆ ಮಹತ್ವ ತಿಳಿಸುವ ದಿನವಾಗಿದೆ. ಅನ್ನ ದಾಸೋಹಕ್ಕಾಗಿ ಸರ್ಕಾರ 4 ಕೆಜಿ ನೀಡಲಾಗುತ್ತಿದ್ದ ಅಕ್ಕಿಯನ್ನು 5 ಕೆಜಿಗೆ ಹೆಚ್ಚಿಸಿದೆ. ಜಿಲ್ಲೆಗಳ ಆಹಾರ ಪದ್ಧತಿಗನುಗುಣವಾಗಿ ರಾಗಿ ಜೋಳ  ಇತ್ಯಾದಿ ಆಹಾರ ಧಾನ್ಯಗಳನ್ನು ವಿತರಿಸಲಾಗುತ್ತಿದೆ. ದಾಸೋಹ ನಡೆಸುವ ಮಠಮಾನ್ಯ ಸಂಸ್ಥೆಗಳಿಗೆ ಪಡಿತರ ಒದಗಿಸುವ ಕೆಲಸ ಮಾಡಲಾಗುತ್ತಿದೆ. ಮಕ್ಕಳಿಗೆ ಅಕ್ಷರ ದಾಸೋಹ ನೀಡಲು ರೈತ ವಿದ್ಯಾನಿಧಿ, ನಿನ್ನೆ ಕಾರ್ಮಿಕರ ಮಕ್ಕಳಿಗೆ ವಿದ್ಯೆ ಒದಗಿಸುವ 150 ಕೋಟಿ ರೂ. ಹೆಚ್ಚು ವಿದ್ಯಾರ್ಥಿ ವೇತನವನ್ನು  ನೇರವಾಗಿ ಪಾವತಿಸುವ ಕೆಲಸಕ್ಕೆ ಚಾಲನೆ ನೀಡಲಾಗಿದೆ. ಆಶ್ರಯ ದಾಸೋಹ ಕೈಂಕರ್ಯವನ್ನು ಸರ್ಕಾರ ಕೈಗೆತ್ತಿಕೊಂಡಿದ್ದು, ರಾಜ್ಯ ಹಾಗೂ ಕೇಂದ್ರ ಸರ್ಕಾರದ ವಸತಿ ಯೋಜನೆಯಡಿ 5 ಲಕ್ಷ ಮನೆಗಳ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ ಎಂದು ತಿಳಿಸಿದರು.

- Advertisement -

ದಾಸೋಹ ದಿನಾಚರಣೆಯನ್ನು ಸರ್ಕಾರಿ ಕಾರ್ಯಕ್ರಮವಾಗಿ ಆಚರಣೆ:

ದಾಸೋಹ ದಿನಾಚರಣೆಯನ್ನು ಸರ್ಕಾರಿ ಕಾರ್ಯಕ್ರಮವಾಗಿ ಇನ್ನಷ್ಟು ವ್ಯವಸ್ಥಿತವಾಗಿ ನಡೆಸಲಾಗುವುದು. ರಾಜ್ಯಾದ್ಯಂತ ಸಾಧ್ಯವಾಗುವ ಕಡೆ ದಾಸೋಹ ಪರಂಪರೆ ಮಾಡಲು ಸರ್ಕಾರ ಬದ್ಧವಾಗಿದೆ. ದಾಸೋಹ ಪರಂಪರೆಗೆ ನಾಂದಿ ಹಾಡಿದ ಶ್ರೀಗಳ ಹೆಜ್ಜೆ ಗುರುತಿನಲ್ಲಿ ನಡೆಯುವ ಸಂಕಲ್ಪದಿಂದ ಇಂದಿನ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದು, ಎಲ್ಲರಿಗೂ ಅನ್ನ, ಅಕ್ಷರ, ಸೂರು ಒಡಗಿಸುವ ಧ್ಯೇಯ ಸರ್ಕಾರ ಹೊಂದಿದೆ ಎಂದು ತಿಳಿಸಿದರು.

ಶ್ರೀ ಶ್ರೀ ಡಾ|| ಶಿವಕುಮಾರ್ ಸ್ವಾಮೀಜಿಯವರಿಗೆ ಭಾರತ ರತ್ನ ಪ್ರಶಸ್ತಿ ನೀಡುವ ಬಗ್ಗೆ ಪ್ರತಿಕ್ರಯಿಸಿ, ಕೇಂದ್ರಕ್ಕೆ ಶಿಫಾರಸ್ಸು ಮಾಡುವ ಬಗ್ಗೆ ವರಿಷ್ಠರೊಂದಿಗೆ ಚರ್ಚಿಸಿ ತೀರ್ಮಾನಿಸಲಾಗುವುದು ಎಂದರು.

ವಾರಾಂತ್ಯದ ಕರ್ಫ್ಯೂ  ಮುಂದುವರೆಸುವ ಬಗ್ಗೆ ಪ್ರತಿಕ್ರಿಯೆ ನೀಡಿ, ಕೋವಿಡ್ ಇಂದಿನ ಸ್ಥಿತಿಗತಿ, ವೀಕೆಂಡ್ ಮತ್ತು ರಾತ್ರಿ ಕರ್ಫ್ಯೂ ಫಲಶ್ರುತಿ ಹಾಗೂ ಕೋವಿಡ್ ನಿಯಂತ್ರಣ ಕ್ರಮಗಳ ಬಗ್ಗೆ ಇಂದು 1 ಗಂಟೆಗೆ ಕರೆಯಲಾಗಿರುವ ಸಭೆ ಕರೆಯಲಾಗಿದ್ದು, ತಜ್ಞರೊಂದಿಗೆ  ಚರ್ಚಿಸಿ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಶಾಲಾ ಮಕ್ಕಳ ಮೇಲೆ  ಕೋವಿಡ್ ನ  ಪರಿಣಾಮ,ವಿವಿಧ ಜಿಲ್ಲೆಗಳಲ್ಲಿನ  ಶಾಲೆಗಳು, ವಸತಿ ಶಾಲೆಗಳಲ್ಲಿ ಕೋವಿಡ್ ಸ್ಥಿತಿಗತಿ ಬಗ್ಗೆ ಇಂದಿನ ಸಭೆಯಲ್ಲಿ ಚರ್ಚಿಸಲಾಗುವುದು ಎಂದು ತಿಳಿಸಿದರು.



Join Whatsapp