ಲಖ್ನೋ: ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ಸರ್ಕಾರ ಜನಸಂಖ್ಯೆ ನಿಯಂತ್ರಣಕ್ಕಾಗಿ ಹೊಸ ಮಸೂದೆಯನ್ನು ಜಾರಿಗೊಳಿಸಲು ನಿರ್ಧರಿಸಿದೆ.
ಇನ್ನು ಮುಂದೆ ರಾಜ್ಯದಲ್ಲಿ 2 ಕ್ಕಿಂತ ಹೆಚ್ಚು ಮಕ್ಕಳಿದ್ದರೆ ಸ್ಥಳೀಯ ಮಟ್ಟದಲ್ಲಿ ಚುನಾವಣೆಗೆ ಸ್ಪರ್ಧಿಸುವುದು, ಸರ್ಕಾರಿ ಉದ್ಯೋಗಕ್ಕೆ ಅರ್ಜಿ ಹಾಕುವುದು ಹಾಗೂ ಈಗಾಗಲೇ ಸರ್ಕಾರಿ ಉದ್ಯೋಗದಲ್ಲಿದ್ದರೆ ಮುಂಬಡ್ತಿಗೆ, ಸರ್ಕಾರದಿಂದ ಸಿಗುವ ಸಬ್ಸಿಡಿಗಳಿಗೆ ಅನರ್ಹರಾಗುತ್ತಾರೆ ಎಂದು ಉತ್ತರ ಪ್ರದೇಶ ರಾಜ್ಯ ಕಾನೂನು ಆಯೋಗ (ಯುಪಿಎಸ್ಎಲ್ ಸಿ) ಈ ಬಗ್ಗೆ ವೆಬ್ ಸೈಟ್ ನಲ್ಲಿ ಮಾಹಿತಿ ಪ್ರಕಟಿಸಿದೆ.
ಎರಡು ಮಕ್ಕಳ ನೀತಿಯನ್ನು ಅಳವಡಿಸಿಕೊಂಡ ಸರ್ಕಾರಿ ಸೇವೆಯಲ್ಲಿರುವ ನೌಕರರಿಗೆ ಸೇವಾವಧಿಯಲ್ಲಿ ಹೆಚ್ಚುವರಿಯಾಗಿ ಎರಡು ಇನ್ ಕ್ರಿಮೆಂಟ್ ಗಳು, ವೇತನ, ಭತ್ಯೆಗಳ ಸಹಿತ 12 ಪೋಷಕರ ರಜೆ (ಮಾತೃತ್ವ ಅಥವ ಪಿತೃತ್ವ ರಜೆ) ರಾಷ್ಟ್ರೀಯ ಪಿಂಚಣಿ ಯೋಜನೆಯಡಿಯಲ್ಲಿ ಉದ್ಯೋಗಿಗಳ ಕೊಡುಗೆಯಲ್ಲಿ ಶೇ.3 ರಷ್ಟು ಏರಿಕೆಯ ಸೌಲಭ್ಯಗಳನ್ನು ಪಡೆಯಬಹುದಾಗಿದೆ.
ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಮೆಟರ್ನಿಟಿ ಕೇಂದ್ರ (ಮಾತೃತ್ವ ಕೇಂದ್ರ)ಗಳನ್ನು ಸ್ಥಾಪನೆ ಮಾಡುವುದರ ಬಗ್ಗೆ ಕರಡು ಮಸೂದೆಯಲ್ಲಿ ಉಲ್ಲೇಖಿಸಲಾಗಿದೆ.
ಈ ಕೇಂದ್ರಗಳಲ್ಲಿ ಹಾಗೂ ಎನ್ ಜಿಒಗಳಲ್ಲಿ ಕುಟುಂಬ ಯೋಜನೆ ವಿಧಾನಗಳಿಗೆ ಅಗತ್ಯವಿರುವ ಗರ್ಭನಿರೋಧಕ ಮಾತ್ರೆಗಳು, ಕಾಂಡೋಮ್ ಗಳನ್ನು ವಿತರಣೆ ಮಾಡಲಾಗುತ್ತದೆ. ಹಾಗೂ ಸಮುದಾಯ ಆರೋಗ್ಯ ಕಾರ್ಯಕರ್ತರ ಮೂಲಕ ಗರ್ಭಧಾರಣೆ, ಹೆರಿಗೆ, ಜನನ ಮತ್ತು ಮರಣಗಳ ನೋಂದಣಿಯನ್ನು ರಾಜ್ಯಾದ್ಯಂತ ಮಾಡಲಾಗುತ್ತದೆ ಎಂದು ಮಸೂದೆಯಲ್ಲಿ ಹೇಳಲಾಗಿದೆ.