ಮೈಸೂರು: 62 ತಾಲ್ಲೂಕುಗಳು ಮಾರ್ಗಸೂಚಿಯೊಳಗೆ ಗುರುತಿಸಲಾಗಿದೆ. 136 ತಾಲ್ಲೂಕು ಬರಪೀಡಿತ ಪರಿಸ್ಥಿತಿಯ ವರದಿ ಪಡೆಯಲಾಗುತ್ತಿದೆ. ಈ ವರದಿ ಬಂದ ನಂತರ ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಈ ತಾಲ್ಲೂಕುಗಳನ್ನು ಬರಪೀಡಿತ ಎಂದು ಘೋಷಣೆ ಮಾಡುವ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಅವರು ಇಂದು ಮೈಸೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡುತ್ತಿದ್ದರು.
ಸರ್ವಪಕ್ಷ ಸಭೆಯಲ್ಲಿ ಕಾವೇರಿ ವಿವಾದದ ಕುರಿತು ಬೆಂಬಲಿಸುವುದಾಗಿ ತಿಳಿಸಿದ ಬಿಜೆಪಿ ಈಗ KRS ನಲ್ಲಿ ಬಂದು ರೈತರ ಅಹವಾಲುಗಳನ್ನು ಸರ್ಕಾರ ಕಡೆಗಣಿಸುತ್ತಿದೆ ಎಂದಿರುವ ಬಗ್ಗೆ ಪ್ರತಿಕ್ರಿಯೆ ನೀಡಿ, ಮೇಕೆದಾಟು ಯೋಜನೆಗೆ ಅನುಮತಿ ನೀಡದಿರುವುದು ಕೇಂದ್ರ ಬಿಜೆಪಿ ಸರ್ಕಾರ, ಈ ಯೋಜನೆಗೆ ತಕರಾರು ಮಾಡಲು ತಮಿಳುನಾಡಿಗೆ ಯಾವುದೇ ವಿಚಾರವಿಲ್ಲ. ರಾಜ್ಯಕ್ಕೆ ನಿಗದಿಪಡಿಸಿರುವ 177.25 ಟಿಎಂಸಿ ಸಾಮಾನ್ಯ ವರ್ಷಗಳಲ್ಲಿ ನೀರು ಬಿಡಬೇಕು. ಸಂಕಷ್ಟದ ಸಮಯದಲ್ಲಿ ಸಂಕಷ್ಟದ ಸೂತ್ರ ಅನುಸರಿಸಬೇಕು ಎಂದಿದೆ. ಆದರೆ ತಮಿಳುನಾಡಿನವರು ಅನಗತ್ಯವಾಗಿ ಕ್ಯಾತೆ ತೆಗೆಯುತ್ತಿದ್ದಾರೆ. ಈ ಯೋಜನೆಗೆ ಸಂಬಂಧಿಸಿದ ಡಿಪಿಆರ್ ನೀಡಲಾಗಿದೆ ಎಂದರು.
ಕೇಂದ್ರ ಸರ್ಕಾರದ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರಕ್ಕೆ ಬಿಜೆಪಿಯವರು ಯೋಜನೆ ಅನುಮತಿ ದೊರಕಿಸಿಸಿಕೊಡಲು ಮನವಿ ಮಾಡಿಕೊಳ್ಳಬೇಕು. ಆದರೆ ರಾಜ್ಯ ಬಿಜೆಪಿಯವರು ಸರ್ವಪಕ್ಷ ಸಭೆಯಲ್ಲಿ ಕಾವೇರಿ ವಿಷಯದಲ್ಲಿ ರಾಜ್ಯಸರ್ಕಾರಕ್ಕೆ ಸಹಕರಿಸುವುದಾಗಿ ತಿಳಿಸಿ, ಇಲ್ಲಿ ಇದೇ ವಿಷಯದ ಬಗ್ಗೆ ರಾಜಕೀಯ ಮಾಡುತ್ತಿದ್ದಾರೆ. ಮೈಸೂರು, ಬೆಂಗಳೂರು ಜಿಲ್ಲೆಗಳ ಜನರಿಗೆ ಕುಡಿಯುವ ನೀರು ಒದಗಿಸುವುದು ನೀರು ನೀತಿಯಂತೆ ಮೊದಲ ಆದ್ಯತೆಯಾಗಿದೆ. ಈ ಮಧ್ಯೆ ರೈತರ ಹಿತ ಕಾಪಾಡಬೇಕು. ಸರ್ವೋಚ್ಛ ನ್ಯಾಯಾಲಯದಲ್ಲಿ ತಮಿಳುನಾಡು ಕೇಸು ದಾಖಲಿಸಿದ್ದು, ರಾಜ್ಯದ ನಿಲುವನ್ನು ಸರ್ಕಾರ ಸ್ಪಷ್ಟವಾಗಿ ತಿಳಿಸಲಿದೆ. ಯಾವುದೇ ಕಾರಣಕ್ಕೆ ರಾಜ್ಯದ ರೈತರ ಹಿತರಕ್ಷಣೆಯ ವಿಷಯದಲ್ಲಿ ರಾಜಕಾರಣ ಬೇಡ. ಈ ವಿಚಾರವಾಗಿ ಸರ್ವಪಕ್ಷ ನಿಯೋಗದ ಭೇಟಿಗೆ ಪ್ರಧಾನಮಂತ್ರಿಗಳ ಸಮಯ ಕೋರಿದ್ದು, ಯಾವುದೇ ಉತ್ತರ ಬಂದಿಲ್ಲವಾದ್ದರಿಂದ, ರಾಜ್ಯ ಬಿಜೆಪಿ ಸಂಸದರು , ಭೇಟಿಗೆ ಸಮಯ ನಿಗದಿಪಡಿಸಲಿ ಎಂದು ತಿಳಿಸಿದರು.
ಒಂದು ರಾಷ್ಟ್ರ , ಒಂದು ಚುನಾವಣೆ ಕಾರ್ಯತ ಅಸಾಧ್ಯ
ದೇಶದಲ್ಲಿ ಒಂದು ರಾಷ್ಟ್ರ ,ಒಂದು ಚುನಾವಣೆ ಯ ಅಗತ್ಯವಿದೆಯೇ ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿ, ಒಂದು ರಾಷ್ಟ್ರ , ಒಂದು ಚುನಾವಣೆ ಜಾರಿಗೊಳಿಸುವುದು ಕಾರ್ಯತ ಸಾಧ್ಯವಿಲ್ಲ. ಕೆಲವು ರಾಜ್ಯಗಳಲ್ಲಿ ಇತ್ತೀಚೆಗಷ್ಟೇ ಚುನಾವಣೆ ನಡೆದಿದೆ, ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಈ ಎಲ್ಲ ರಾಜ್ಯ ವಿಧಾನಸಭೆಗಳನ್ನು ವಿಸರ್ಜಿಸಲು ಸಾಧ್ಯವಿದೆಯೇ , ಅಥವಾ ಚುನಾವಣೆ ನಡೆಯುವವರೆಗೂ ರಾಷ್ಟ್ರಪತಿ ಅಧಿಕಾರ ಹೇರಲು ಸಾಧ್ಯವಿದೆಯೇ , ಇಂತಹ ಸಂದರ್ಭಗಳು ಉದ್ಭವಿಸುವ ಸಾಧ್ಯತೆಯಿಂದಾಗಿ ಒಂದು ರಾಷ್ಟ್ರ, ಒಂದು ಚುನಾವಣೆ ಜಾರಿಗೊಳಿಸುವುದು ಕಾರ್ಯತ: ಸಾಧ್ಯವಿಲ್ಲ. ಕರ್ನಾಟಕದ ರಾಜ್ಯದಲ್ಲಿ ಕಾಂಗ್ರೆಸ್ ಗೆಲುವಿನಿಂದಾಗಿ ಪ್ರಧಾನಿಗಳು ಹತಾಶರಾಗಿದ್ದು, ನಾಲ್ಕೈದು ತಿಂಗಳು ಕಳೆದರೂ ವಿರೋಧಪಕ್ಷದ ನಾಯಕರನ್ನು ಆಯ್ಕೆ ಮಾಡಿರುವುದಿಲ್ಲ ಎಂದರು.
ಕೋಮುವಾದಿಗಳ ಜೊತೆ ರಾಜಿ ಇಲ್ಲ :
ಸಿದ್ದರಾಮಯ್ಯನವರು ಹಿಂದೆ ಬಿಜೆಪಿ ಪಕ್ಷಕ್ಕೆ ಹೋಗಲು ಪ್ರಯತ್ನಿಸಿದ್ದರು ಎಂಬ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರ ಆರೋಪಕ್ಕೆ ಪ್ರತಿಕ್ರಿಯೆ ನೀಡಿ, ನನ್ನ ರಾಜಕೀಯ ಜೀವನದಲ್ಲಿ ಕೋಮುವಾದಿ ಪಕ್ಷಗಳ ವಿರುದ್ಧ ಹೋರಾಟ ಮಾಡುತ್ತಿದ್ದೇನೆ. ಅವರು ಕುಟುಂಬ ರಾಜಕಾರಣಕ್ಕಾಗಿ ಬಿಜೆಪಿಯವರೊಂದಿಗೆ ಒಪ್ಪಂದ ಮಾಡಿಕೊಂಡಿದ್ದಾರೆ. ಯಾವುದೇ ಕಾರಣಕ್ಕೂ ಕೋಮುವಾದಿಗಳ ಜೊತೆ ರಾಜಿ ಮಾಡಿಕೊಳ್ಳುವುದಿಲ್ಲ ಎಂದು ತಿಳಿಸಿದರು.
ಬೆಂಗಳೂರಿನ ಖಾಸಗಿ ಸಾರಿಗೆಯವರು ನಡೆಸುತ್ತಿರುವ ಮುಷ್ಕರದ ಬಗ್ಗೆ ಮಾತನಾಡಿ, ಪ್ರಜಾಪ್ರಭುತ್ವದಲ್ಲಿ ಮುಷ್ಕರ ಮಾಡುವವರಿಗೆ ಕಡಿವಾಣ ಹಾಕಲು ಸಾಧ್ಯವಿಲ್ಲ. ಖಾಸಗಿ ಸಾರಿಗೆಯವರ ಅಹವಾಲುಗಳನ್ನು ಸರ್ಕಾರ ಆಲಿಸಿದೆ. ಶಕ್ತಿಯೋಜನೆಯಿಂದ ಖಾಸಗಿ ಸಾರಿಗೆಯವರಿಗೆ ನಷ್ಟವುಂಟಾಗುತ್ತಿದ್ದು, ಆ ನಷ್ಟವನ್ನು ಭರಿಸಿಕೊಡಬೇಕು ಎಂಬಂತಹ ಅಸಾಧ್ಯ ಬೇಡಿಕೆಗಳನ್ನು ಈಡೇರಿಸಲು ಸಾಧ್ಯವಿಲ್ಲ. ಹೆಣ್ಣುಮಕ್ಕಳಿಗೆ ಅನುಕೂಲ ಕಲ್ಪಿಸಲು ಶಕ್ತಿ ಯೋಜನೆ ಜಾರಿಗೊಳಿಸಲಾಗಿದೆ ಎಂದರು.