ಚೊಚ್ಚಲ ಖೊಖೊ ಲೀಗ್‌| ಒಡಿಶಾ ಜಗರ್‌ನಟ್ಸ್‌ ಚಾಂಪಿಯನ್ಸ್‌

Prasthutha|

ಅಲ್ಟಿಮೇಟ್‌ ಖೊಖೊ ಲೀಗ್‌ನ ಚೊಚ್ಚಲ ಆವೃತ್ತಿಯಲ್ಲಿ ಒಡಿಶಾ ಜಗರ್‌ನಟ್ಸ್‌ ಚಾಂಪಿಯನ್‌ ಆಗಿ ಹೊರಹೊಮ್ಮಿದೆ. ಪುಣೆಯ ಶಿವ ಛತ್ರಪತಿ ಸ್ಪೋರ್ಟ್ಸ್‌ ಕಾಂಪ್ಲೆಕ್ಸ್‌ನಲ್ಲಿ ನಡೆದ ಜಿದ್ದಾಜಿದ್ದಿನ ಫೈನಲ್‌ ಪಂದ್ಯದಲ್ಲಿ, ಒಡಿಶಾ, ಕೇವಲ ಒಂದು ಅಂಕಗಳ ಅಂತರದಲ್ಲಿ (46-45) ತೆಲುಗು ಯೋಧಾಸ್ ತಂಡವನ್ನು ಮಣಿಸಿ, ಪ್ರಶಸ್ತಿಯೊಂದಿಗೆ ಒಂದು ಕೋಟಿ ರುಪಾಯಿ ಬಹುಮಾನವನ್ನು ತನ್ನದಾಗಿಸಿಕೊಂಡಿತು.

- Advertisement -

ಪಂದ್ಯ ವೀಕ್ಷಿಸಲು ನೆರೆದಿದ್ದವರಿಗೆ ಭರಪೂರ ಮನರಂಜನೆ ನೀಡಿದ ಪಂದ್ಯ, ಅಂತಿಮ ಕ್ಷಣದವರೆಗೂ ಸಮಬಲದ ಹೋರಾಟಕ್ಕೆ ಸಾಕ್ಷಿಯಾಗಿತ್ತು. ಪಂದ್ಯ ಮುಗಿಯಲು ಇನ್ನೇನು ಕೇವಲ 14 ಸೆಕೆಂಡ್‌ಗಳಷ್ಠೇ ಬಾಕಿ ಇರುವಾಗ ಒಡಿಶಾದ ಸೂರಜ್‌ ಲಾಂಡೆ ಅದ್ಭುತ ಸ್ಕೈ ಡೈವ್ ಮಾಡುವ ಮೂಲಕ ಯೋಧಾಸ್‌ನ ಅವದೂತ್ ಪಾಟೀಲ್‌ರನ್ನು ಔಟ್‌ ಮಾಡಿದರು. ಆಮೂಲಕ 3 ಅಂಕಗಳನ್ನು ಗಳಿಸಿದರು. ಇದು ಪಂದ್ಯದ ಟರ್ನಿಂಗ್‌ ಪಾಯಿಂಟ್‌ ಆಗಿತ್ತು.

ಪಂದ್ಯದಲ್ಲಿ ಸ್ಕೈ ಡೈವ್ ಮೂಲಕ ಒಡಿಶಾ ಜಗರ್‌ನಟ್ಸ್ 21 ಅಂಕಗಳನ್ನು ಗಳಿಸಿದರೆ, ತೆಲುಗು ಯೋಧಾಸ್ 18 ಅಂಕಗಳನ್ನು ಕಲೆಹಾಕಿದರು. ಮೂರನೇ ಸುತ್ತಿನ ಅಂತ್ಯದಲ್ಲಿ ಯೋಧಾಸ್‌ ತಂಡ 14 ಅಂಕಗಳ ಮುನ್ನಡೆ ಸಾಧಿಸಿತ್ತು. ಆದರೆ ಡಿಫೆನ್ಸ್‌ನಲ್ಲಿ 3.03 ನಿಮಿಷಗಳ ಕಾಲ ಎದುರಾಳಿಗೆ ಸವಾಲಾಗಿ ನಿಂತ ಒಡಿಶಾದ ಸೂರಜ್‌ ಲಾಂಡೆ, ತಂಡಕ್ಕೆ ಮಹತ್ವದ ಅಂಕಗಳನ್ನು ಗಳಿಸಿಕೊಟ್ಟರು.

- Advertisement -

ಚೊಚ್ಚಲ ಆವೃತ್ತಿಯ ಅಲ್ಟಿಮೇಟ್ ಖೋ ಖೋ ಲೀಗ್‌ನಲ್ಲಿ ಚಾಂಪಿಯನ್‌ ಪಟ್ಟ ಅಲಂಕರಿಸಿದ ಒಡಿಶಾ ಜಗರ್‌ನಟ್ಸ್‌ ತಂಡವು 1 ಕೋಟಿ ರುಪಾಯಿ ನಗದು ಬಹುಮಾನ ಹಾಗೂ ಟ್ರೋಫಿಯನ್ನು ತನ್ನದಾಗಿಸಿಕೊಂಡಿತು. ರನ್ನರ್ ಅಪ್‌ ಸ್ಥಾನ ಪಡೆದ ತೆಲುಗು ಯೋಧಾಸ್ ತಂಡವು 50 ಲಕ್ಷ ರುಪಾಯಿ ನಗದು ಬಹುಮಾ ಮತ್ತು ಎರಡನೇ ಕ್ವಾಲಿಫೈಯರ್ ಪಂದ್ಯದಲ್ಲಿ ಮುಗ್ಗರಿಸಿದ ಗುಜರಾತ್ ಜೈಂಟ್ಸ್‌ ತಂಡವು 30 ಲಕ್ಷ ರುಪಾಯಿ ನಗದು ಬಹುಮಾನ ಪಡೆಯಿತು.

22 ದಿನಗಳ ಕಾಲ ನಡೆದ ಚೊಚ್ಚಲ ಆವೃತ್ತಿಯ ಅಲ್ಟಿಮೇಟ್ ಖೋ ಖೋ ಟೂರ್ನಿಯಲ್ಲಿ ಚೆನ್ನೈ ಕ್ವಿಕ್ ಗನ್ಸ್‌, ಗುಜರಾತ್ ಜೈಂಟ್ಸ್‌, ಮುಂಬೈ ಕಿಲಾಡೀಸ್, ಒಡಿಶಾ ಜುಗರ್‌ನಟ್ಸ್‌, ರಾಜಸ್ಥಾನ ವಾರಿಯರ್ಸ್‌ ಹಾಗೂ ತೆಲುಗು ಯೋಧಾಸ್ ಸೇರಿದಂತೆ ಒಟ್ಟು 6 ತಂಡಗಳು, ಪಾಲ್ಗೊಂಡಿದ್ದವು. ಈ ಅಲ್ಟಿಮೇಟ್ ಖೋ ಖೋ ಟೂರ್ನಿಯು ಕ್ರೀಡಾಭಿಮಾನಿಗಳಿಗೆ ಭರಪೂರ ಮನರಂಜನೆ ನೀಡಿತು.

Join Whatsapp