ವಯನಾಡು: ವಯನಾಡಿನಲ್ಲಿ ಸಂಭವಿಸಿದ ಬೃಹತ್ ಭೂಕುಸಿತದಲ್ಲಿ ಮೃತಪಟ್ಟವರ ಸಂಖ್ಯೆ ಏರುತ್ತಲೇ ಇದೆ. ಸಾವಿನ ಸಂಖ್ಯೆ ಶನಿವಾರ ಬೆಳಗ್ಗೆ ಹೊತ್ತಿಗೆ 358ಕ್ಕೆ ಏರಿಕೆಯಾಗಿದ್ದು, ಇನ್ನೂ ಮಣ್ಣಿನಡಿ ಹಾಗೂ ಕಟ್ಟಡಗಳಲ್ಲಿ ಸಿಲುಕಿರುವ ಹಾಗೂ ಬದುಕುಳಿದಿರುವವರ ಪತ್ತೆಗಾಗಿ ನಿರಂತರವಾಗಿ ರಕ್ಷಣಾ ಕಾರ್ಯ ನಡೆಯುತ್ತಲೇ ಇದೆ.
ರಕ್ಷಣಾ ಪಡೆಗಳು ತಮ್ಮ ಶಕ್ತಿ ಮೀರಿ ಕೆಲಸ ಮಾಡುತ್ತಿದ್ದು, ಅವಶೇಷಗಳ ಅಡಿಯಲ್ಲಿ ಮತ್ತು ಕುಸಿದ ಮನೆಗಳಲ್ಲಿ ಸಿಲುಕಿರುವ ಬದುಕುಳಿದವರನ್ನು ಹುಡುಕುವ ಪ್ರಯತ್ನದಲ್ಲಿ ರಾಡಾರ್ ಗಳನ್ನು ಬಳಸುತ್ತಿದ್ದಾರೆ. ರಕ್ಷಣಾ ಕಾರ್ಯಾಚರಣೆಗೆ ನೆರವಾಗಲು ಡೀಪ್ ಸರ್ಚ್ ರಾಡಾರ್ ಗಳನ್ನು ಕಳುಹಿಸುವಂತೆ ಕೇರಳ ಸರ್ಕಾರ ಕೇಂದ್ರಕ್ಕೆ ಮನವಿ ಮಾಡಿತ್ತು. ನಾರ್ತ್ ಕಮಾಂಡ್ ನಿಂದ ಒಂದು ಕ್ಸೇವರ್ ರಾಡಾರ್ ಮತ್ತು ದೆಹಲಿಯ ತಿರಂಗಾ ಮೌಂಟೇನ್ ರೆಸ್ಕ್ಯೂ ಆರ್ಗನೈಸೇಶನ್ ನಿಂದ ನಾಲ್ಕು ರೀಕೋ ರಾಡಾರ್ ಗಳನ್ನು ವಾಯುಪಡೆಯ ವಿಮಾನದಲ್ಲಿ ಶನಿವಾರ ವಯನಾಡಿಗೆ ತರಲಾಯಿತು.
ಭಾರತೀಯ ಸೇನೆ, ಕೇರಳ ಪೊಲೀಸ್ ಮತ್ತು ತುರ್ತು ಸೇವಾ ಘಟಕಗಳ ನೇತೃತ್ವದಲ್ಲಿ ನಡೆಯುತ್ತಿರುವ ರಕ್ಷಣಾ ಕಾರ್ಯಾಚರನೆ ಐದನೇ ದಿನಕ್ಕೆ ಕಾಲಿಟ್ಟಿದ್ದು, ಶೋಧ ಮತ್ತು ಪಾರುಗಾಣಿಕಾ ಕ್ಷೇತ್ರದಲ್ಲಿ ಪರಿಣತಿ ಹೊಂದಿರುವ ಖಾಸಗಿ ಕಂಪನಿಗಳು ಮತ್ತು ಸ್ವಯಂಸೇವಕರು ಕೂಡ ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಈವರೆಗೆ ಸುಮಾರು 200 ಕ್ಕೂ ಹೆಚ್ಚು ಮಂದಿ ಕಾಣೆಯಾಗಿದ್ದು, ತೀವ್ರ ಹುಡುಕಾಟ ನಡೆಸಲಾಗುತ್ತಿದೆ.