ಡೆನ್ಮಾರ್ಕ್: ಪ್ರವಾದಿ ಮುಹಮ್ಮದ್ (ಸ) ರವರ ವ್ಯಂಗ್ಯ ಚಿತ್ರ ರಚಿಸಿ ಪ್ರಪಂಚದಾದ್ಯಂತ ಮುಸ್ಲಿಮರ ಆಕ್ರೋಶಕ್ಕೆ ಕಾರಣವಾಗಿದ್ದ ಹಾಗೂ ಈ ಸಂಬಂಧ ನಡೆದ ಹಿಂಸಾಚಾರದಲ್ಲಿ 17 ಜನರ ಸಾವಿಗೆ ಕಾರಣನಾಗಿದ್ದ ಕುಖ್ಯಾತ ವ್ಯಂಗ್ಯಚಿತ್ರಕಾರ ಕರ್ಟ್ ವೆಸ್ಟರ್ ಗಾರ್ಡ್ ಸೋಮವಾರ ಸಾವನ್ನಪ್ಪಿದ್ದಾರೆ ಎಂದು ಡ್ಯಾನಿಶ್ ಪತ್ರಿಕೆ ಬರ್ಲಿಂಗ್ಸ್ ಕೆ ವರದಿ ಮಾಡಿದೆ.
ಅವರಿಗೆ 86 ವರ್ಷ ವಯಸ್ಸಾಗಿತ್ತು.
ಕರ್ಟ್ ವೆಸ್ಟರ್ ಗಾರ್ಡ್ ರಚಿಸಿದ್ದ 12 ಕಾರ್ಟೂನ್ ಗಳನ್ನು ತೀವ್ರ ಬಲಪಂಥೀಯ ಸಿದ್ಧಾಂತವನ್ನು ಪ್ರೋತ್ಸಾಹಿಸುವ ಜಿಲ್ಲ್ಯಾಂಡ್ಸ್-ಪೋಸ್ಟನ್ ಎಂಬ ದಿನಪತ್ರಿಕೆಯು “ದಿ ಫೇಸ್ ಆಫ್ ಮುಹಮ್ಮದ್” ಎಂಬ ಶೀರ್ಷಿಕೆಯಡಿಯಲ್ಲಿ ಪ್ರಕಟಿಸಿತ್ತು. ಇದು ಪ್ರಪಂಚದಾದ್ಯಂತ ಮುಸ್ಲಿಮರ ಆಕ್ರೋಶಕ್ಕೆ ಕಾರಣವಾಗಿತ್ತು.
ವ್ಯಂಗ್ಯಚಿತ್ರ ವಿರೋಧಿಸಿ ಫೆಬ್ರವರಿ 2006 ರಲ್ಲಿ ಜಗತ್ತಿನಾದ್ಯಂತ ಪ್ರತಿಭಟನೆಗಳು ನಡೆದಿದ್ದವು. 2012ರಲ್ಲಿ ಕಾರ್ಟೂನ್ ಗಳನ್ನು ಮರು ಮುದ್ರಿಸಿದ್ದ ಪ್ಯಾರಿಸ್ ನ ಚಾರ್ಲಿ ಹೆಬ್ಡೊ ವಾರಪತ್ರಿಕೆಯ ಮೇಲೆ 2015 ರಲ್ಲಿ ನಡೆದ ದಾಳಿಯಲ್ಲಿ 12 ಜನರು ಸಾವನ್ನಪ್ಪಿದ್ದರು.
ಫ್ರಾನ್ಸ್ ಅನ್ನು ಭಯಭೀತಗೊಳಿಸಿದ್ದ ಸರಣಿ ದಾಳಿಯಲ್ಲಿ ಮೂರು ದಿನಗಳಲ್ಲಿ ಒಟ್ಟು 17 ಜನರ ಹತ್ಯೆಯಾಗಿತ್ತು. ಮೂವರು ಹಲ್ಲೆಕೋರರು ಪೊಲೀಸರೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲಿ ಕೊಲ್ಲಲ್ಪಟ್ಟಿದ್ದರು.