ಕೊಚ್ಚಿ: ಕೇರಳದ ಕಲಮಸ್ಸೆರಿಯ ಕ್ರಿಶ್ಚಿಯನ್ ಧಾರ್ಮಿಕ ಸಭೆಯೊಂದರಲ್ಲಿ ಸಂಭವಿಸಿದ ಸರಣಿ ಸ್ಫೋಟದಲ್ಲಿ ಗಾಯಗೊಂಡ 50 ಜನರ ಪೈಕಿ 12 ವರ್ಷದ ಬಾಲಕಿ ಕಲಮಸ್ಸೆರಿ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾಳೆ. ಇದರಿಂದಾಗಿ ಮೃತಪಟ್ಟವರ ಸಂಖ್ಯೆ ಮೂರಕ್ಕೆ ಏರಿದಂತಾಗಿದೆ.
ನಿನ್ನೆ ನಡೆದ ಸ್ಫೋಟದಲ್ಲಿ ಬಾಲಕಿ ಕೇರಳದ ಎರ್ನಾಕುಲಂ ಜಿಲ್ಲೆಯ ಲಿಬಿನಾ ತೀವ್ರವಾಗಿ ಗಾಯಗೊಂಡಿದ್ದಳು. ಆಕೆಯ ದೇಹದ ಶೇಕಡ 95 ರಷ್ಟು ಭಾಗ ತೀವ್ರವಾಗಿ ಸುಟ್ಟು ಹೋಗಿತ್ತು. ಆಸ್ಪತ್ರೆಗೆ ದಾಖಲಿಸಿ ವೆಂಟಿಲೇಟರ್ ಬೆಂಬಲದಲ್ಲಿ ಇರಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಬಾಲಕಿ ಸಾವನ್ನಪ್ಪಿದ್ದಾಳೆ.
ಇದಕ್ಕೂ ಮೊದಲು ಸ್ಫೋಟಗಳಲ್ಲಿ ಇಬ್ಬರು ಮಹಿಳೆಯರು ಸಾವನ್ನಪ್ಪಿದ್ದರು ಮತ್ತು 50 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು.
ಮೂರು ದಿನಗಳ ಪ್ರಾರ್ಥನಾ ಸಭೆಯ ಮುಕ್ತಾಯದ ದಿನದಂದು ಕ್ರಿಶ್ಚಿಯನ್ ಗುಂಪೊಂದರ ನೂರಾರು ಅನುಯಾಯಿಗಳು ಯೆಹೋವನ ಪ್ರಾರ್ಥನೆಗಾಗಿ ಒಟ್ಟುಗೂಡಿದಾಗ ಸ್ಫೋಟಗಳು ಸಂಭವಿಸಿತ್ತು.