ದೇಶದ ಆತ್ಮಸಾಕ್ಷಿಯನ್ನು ಮುಟ್ಟಿ ನೋಡುವಂತೆ ಮಾಡಿದ ವಿದ್ಯಾರ್ಥಿನಿಯ ಡೆತ್ ನೋಟ್, ತಮಿಳು ನಾಡಿನಲ್ಲಿ ದಾರುಣ ಕೃತ್ಯ

Prasthutha|

ಚೆನ್ನೈ: ನಿರಂತರ ಲೈಂಗಿಕ ಕಿರುಕ್ಕೊಳಗಾದ ದ್ವಿತೀಯ ಪಿಯುಸಿ ವಿದ್ಯಾರ್ಥಿನಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದು, ಸಾವಿಗೆ ಮೊದಲು ಆಕೆಯ ಡೆತ್ ನೋಟ್ ನಲ್ಲಿರುವ ವಾಕ್ಯಗಳು ದೇಶದ ಆತ್ಮಸಾಕ್ಷಿಯನ್ನು ಮುಟ್ಟಿ ನೋಡುವಂತೆ ಮಾಡಿದೆ. ಅದರಲ್ಲಿರುವ ಒಂದೊಂದು ವಾಕ್ಯಗಳೂ ದೇಶದ ಆತ್ಮಸಾಕ್ಷಿಯನ್ನು ಪ್ರಶ್ನಿಸುವಂತಿದ್ದು, ಕರುಳು ಹಿಂಡುವಂತಿದೆ.

- Advertisement -

ತಮಿಳುನಾಡು ರಾಜಧಾನಿ ಚೆನ್ನೈನಲ್ಲಿ ಸರ್ಕಾರಿ ಕಾಲೇಜಿನಲ್ಲಿ ಪ್ರಥಮ ಪಿಯುಸಿ ಓದುತ್ತಿದ್ದ ವಿದ್ಯಾರ್ಥಿನಿ ತನ್ನ ತರಗತಿ ಪ್ರಾಧ್ಯಾಪಕನೊಬ್ಬನಿಂದ ನಿರಂತರ ಲೈಂಗಿಕ ಕಿರುಕುಳ ಅನುಭವಿಸಿ, ಮನನೊಂದು ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ತನಗೆ ಅನ್ಯಾಯವಾಗಿದೆ, ನ್ಯಾಯ ಕೊಡಿಸಿ ಎಂದು ಆಕೆ ಪತ್ರದಲ್ಲಿ ಬರೆದಿಟ್ಟಿದ್ದಾರೆ. ಆದರೆ, ತನ್ನ ಸಾವಿಗೆ ಯಾರು ಕಾರಣ ಎಂದು ಪತ್ರದಲ್ಲಿ ಉಲ್ಲೇಖಿಸಿಲ್ಲ. ಆಕೆ ಬರೆದ ವಾಕ್ಯಗಳು ಇಡೀ ದೇಶದ ಸಾಮಾಜಿಕ ವ್ಯವಸ್ಥೆಯನ್ನು ಆತ್ಮವಿಮರ್ಶೆ ಮಾಡುವಂತಿದ್ದು, ಕಾಲೇಜಿನ ವಿದ್ಯಾರ್ಥಿಗಳು ತೀವ್ರ ಆಕ್ರೋಶಿತರಾಗಿದ್ಧಾರೆ.

“ಹೆಣ್ಣಿಗೆ ತಾಯಿಯ ಗರ್ಭ ಮತ್ತು ಸಮಾಧಿ ಎರಡೇ ಸುರಕ್ಷಿತ ಸ್ಥಳವಾಗಿದೆ. ಈ ಎರಡು ಜಾಗವಲ್ಲದೆ ಬೇರೆ ಎಲ್ಲೂ ಆಕೆ ಸುರಕ್ಷಿತಳಲ್ಲ” ಎಂದು ಆಕೆ ಬರೆದಿದ್ದಾಳೆ. ಅಷ್ಟು ಮಾತ್ರವಲ್ಲದೆ, “ವಿದ್ಯೆ ಕಲಿಸುವ ಶಾಲೆಯೂ ಸುರಕ್ಷಿತವಲ್ಲ. ಶಿಕ್ಷಕರನ್ನೂ ನಂಬಲು ಸಾಧ್ಯವಿಲ್ಲ. ನನಗಾದ ಅನ್ಯಾಯ ಯಾರಿಗೂ ಆಗದಿರಲಿ, ಸಾಯುವುದು ಬಿಟ್ಟರೆ ಬೇರೇನೂ ನನಗೆ ಉಳಿದಿಲ್ಲ” ಎಂದು ಆಕೆಯ ಡೆತ್ ನೋಟಲ್ಲಿ ಬರೆಯಲಾಗಿದೆ.

- Advertisement -

ಮುಂದುವರೆದು, “ಶಾಲೆ ಸೇರಿದಂತೆ ಯಾವುದೇ ಸ್ಥಳವೂ ಹೆಣ್ಣಿಗೆ ಸುರಕ್ಷಿತವಲ್ಲ. ಶಿಕ್ಷಕರನ್ನೂ, ಸಂಬಂಧಿಗಳನ್ನೂ ನಂಬಬೇಡಿ. ಈ ಸಮಾಜವನ್ನೂ ನಂಬಬೇಡಿ. ನನಗೆ ಕೆಲವು ಘಟನೆಗಳು ದುಸ್ವಪ್ನದಂತೆ ಕಾಡುತ್ತಿವೆ. ನನಗೆ ನಿದ್ರೆ ಮಾಡುಲೂ ಆಗುತ್ತಿಲ್ಲ. ಓದಿನ ಮೇಲೆ ಗಮನವನ್ನು ಕೇಂದ್ರೀಕರಿಸಲೂ ಸಾಧ್ಯವಾಗುತ್ತಿಲ್ಲ. ತನ್ನ ಸಾವಿನ ನಂತರವಾದರೂ ಇಂಥಹ ಲೈಂಗಿಕ ಕಿರುಕುಳಗಳು ನಿಲ್ಲಲಿ” ಎಂದು ವಿದ್ಯಾರ್ಥಿನಿ ಬರೆದಿದ್ದಾರೆ. ತನ್ನ ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಡೆತ್ ನೋಟ್ ನಲ್ಲಿರುವ ವಾಕ್ಯಗಳು ದೇಶದ ಆತ್ಮಸಾಕ್ಷಿಯನ್ನು ಮುಟ್ಟಿ ನೋಡುವಂತೆ ಮಾಡುತ್ತಿದೆ ಎಂದು ನಾಗರಿಕರು ಹೇಳುತ್ತಿದ್ದಾರೆ. ಅದರಲ್ಲಿರುವ ಒಂದೊಂದು ವಾಕ್ಯಗಳೂ ದೇಶದ ಆತ್ಮಸಾಕ್ಷಿಯನ್ನು ಪ್ರಶ್ನಿಸುವಂತಿದ್ದು, ಕರುಳು ಹಿಂಡುವಂತಿದೆ ಎಂದು ಪೊಲೀಸರೂ ಹೇಳುತ್ತಿದ್ದಾರೆ.

ಆಕೆಯ ಡೆತ್ ನೋಟ್ ಪಡೆದುಕೊಂಡ ಮಂಗಾಡು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಈ ಸಮಯದಲ್ಲಿ ಕಾಲೇಜಿನ ಪ್ರಾಧ್ಯಾಪಕನೊಬ್ಬ ವಿದ್ಯಾರ್ಥಿನಿಯರೊಂದಿಗೆ ಅಸಭ್ಯವಾಗಿ ವರ್ತಿಸುತ್ತಿದ್ದುದು ಬೆಳಕಿಗೆ ಬಂದಿದೆ. ಆತನೇ ವಿದ್ಯಾರ್ಥಿನಿಯ ಸಾವಿಗೆ ಕಾರಣ ಎಂದು ಕಾಲೇಜಿನಲ್ಲಿ ಓದುತ್ತಿದ್ದ ಇತರ ವಿದ್ಯಾರ್ಥಿನಿಯರು ಆರೋಪಿಸಿದ್ದಾರೆ. . ಆಕೆಯ ಸಾವಿನ ನಂತರ, ಕಾಲೇಜಿನ ವಿದ್ಯಾರ್ಥಿಗಳು ಆರೋಪಿತ ಪ್ರಾಧ್ಯಾಪಕ ಅಬ್ರಹಾಂ ಅಲೆಕ್ಸ್ ಎಂಬುವವರ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ.

“ಆತನ ಅಸಭ್ಯ ವರ್ತನಗಳ ಬಗ್ಗೆ ಈ ಹಿಂದೆಯೇ ದೂರು ನೀಡಿದ್ದರೂ ಕಾಲೇಜು ಆಡಳಿತ ಮಂಡಳಿ ಆತನ ವಿರುದ್ದ ಕ್ರಮ ಕೈಗೊಳ್ಳಲಿಲ್ಲ. ಆತನ್ನು ಬಂಧಿಸಬೇಕು. ಆತನಿಗೆ ಶಿಕ್ಷೆಯಾಗಬೇಕು” ಎಂದು ವಿದ್ಯಾರ್ಥಿಗಳು ಪಟ್ಟು ಹಿಡಿದಿದ್ದಾರೆ. ಪೊಲೀಸರು ಪ್ರಾಧ್ಯಾಪಕನನ್ನು ಪೊಲೀಸರು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಲೈಂಗಿಕ ದೌರ್ಜನ್ಯ ಎನ್ನುವುದು ಅತಿ ಕ್ರೂರ ಅಪರಾಧವಾಗಿದೆ. ಅದಕ್ಕೆ ಅತಿ ಕಠಿಣವಾದ ಶಿಕ್ಷೆ ನಮ್ಮ ಕಾನೂನುನಲ್ಲಿದೆ. ಆದರೆ ಈ ಕಾನೂನುಗಳನ್ನು ಸಮರ್ಪಕವಾಗಿ ಜಾರಿಗೊಳಿಸುವುದರಲ್ಲಿ ನಾವು ಸೋಲುತ್ತಿದ್ದೇವೆ. ದೀರ್ಘವಾಗುವ ನ್ಯಾಯ ಪ್ರಕ್ರಿಯೆ, ಕಠಿಣ ಶಿಕ್ಷೆ ಜಾರಿಯಾದರೂ ಅದನ್ನು ವಜಾ ಮಾಡಲು ಅಪರಾಧಿಗಳಿಗೆ ಮತ್ತೆ ಮತ್ತೆ ಅವಕಾಶಗಳು ನಮ್ಮ ಕಾನೂನು ವ್ಯವಸ್ಥೆಯ ನ್ಯೂನತೆಯಾಗಿದೆ. ಇಉ ಬದಲಾಗಬೇಕಿದ್ದು, ಅತ್ಯಾಚಾರಕ್ಕೆ ತೀವ್ರ ಶಿಕ್ಷೆಯಿದೆಯೆಂದು ಸರ್ಕಾರ ಎಲ್ಲೆಡೆ ಪ್ರಚಾರ ಮಾಡಬೇಕಿದೆ. ಜೊತೆಗೆ ಮಹಿಳಾ ಸಮಾನತೆ, ರಕ್ಷಣೆ ಮತ್ತು ಪ್ರೋತ್ಸಾಹದಾಯಕ ಕ್ರಮಗಳನ್ನು ಕೈಗೊಳ್ಳಬೇಕಿದೆ. ಆ ಮೂಲಕ ಅತ್ಯಾಚಾರಗಳೆಂಬ ಹೀನ ಕೃತ್ಯಗಳನ್ನು ತಡೆಯಲು ಸಾಧ್ಯ ಎಂಬ ಅಭಿಪ್ರಾಯಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿವೆ.

Join Whatsapp