ಕೂದಲು ಕಸಿ ಚಿಕಿತ್ಸೆಗೆ ಒಳಗಾದ ಮರುದಿನವೇ ಹೃದಯಾಘಾತದಿಂದ ಪೊಲೀಸ್ ಪೇದೆ ಸಾವು !

Prasthutha|

ಪಾಟ್ನಾ: ಕೂದಲು ಕಸಿ ಚಿಕಿತ್ಸೆಗೆ ಒಳಗಾದ ಮರುದಿನವೇ ಆರೋಗ್ಯದಲ್ಲಿ ಏರುಪೇರು ಉಂಟಾಗಿ ಪೊಲೀಸ್ ಪೇದೆಯೊಬ್ಬರು ಮೃತಪಟ್ಟ ಘಟನೆ ಬಿಹಾರದ ಪಾಟ್ನಾದಿಂದ ವರದಿಯಾಗಿದೆ.
ಬಿಹಾರ ಮಿಲಿಟರಿ ಪೊಲೀಸ್ (BMP) ನಲ್ಲಿ ಪೇದೆಯಾಗಿದ್ದ ಮನೋರಂಜನ್ ಪಾಸ್ವಾನ್ ಮೃತಪಟ್ಟ ದುರ್ದೈವಿಯಾಗಿದ್ದಾರೆ. ಪಾಸ್ವಾನ್’ಗೆ ಮೇ 11ರಂದು ಮದುವೆ ನಿಶ್ಚಯವಾಗಿತ್ತು. ಈ ಹಿನ್ನೆಲೆಯಲ್ಲಿ ಬುಧವಾರ ಬೋರಿಂಗ್ ಕೆನಾಲ್ ರಸ್ತೆಯಲ್ಲಿರುವ ‘ಎನ್‌ಹಾನ್ಸ್’ ಎಂಬ ಖಾಸಗಿ ಕ್ಲಿನಿಕ್’ನಲ್ಲಿ ಪಾಸ್ವಾನ್ ಕೂದಲು ಕಸಿಗೆ ಒಳಗಾಗಿದ್ದರು. ಇದಾದ ಮರುದಿನವೇ ಔಷಧಗಳ ಪ್ರತಿಕ್ರಿಯೆಯಿಂದಾಗಿ ಅವರು ಮೃತಪಟ್ಟಿದ್ದಾರೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ಪಾಸ್ವಾನ್ ಸಾವೀಗೀಡಾದ ವಿಚಾರ ತಿಳಿಯುತ್ತಲೇ ಖಾಸಗಿ ಕ್ಲಿನಿಕ್‌ನ ವೈದ್ಯರು ಮತ್ತು ಸಿಬ್ಬಂದಿ ಪರಾರಿಯಾಗಿದ್ದಾರೆ.

- Advertisement -

ನಳಂದ ಜಿಲ್ಲೆಯ ರಾಜ್‌ಗೀರ್ ಪೊಲೀಸ್ ಠಾಣೆ ವ್ಯಾಪ್ತಿಯ ಕಮಲ್ ಬಿಘಾ ಗ್ರಾಮದವರಾದ ಮನೋರಂಜನ್ ಪಾಸ್ವಾನ್ ಗಯಾದಲ್ಲಿ ಸೇವೆ ಸಲ್ಲಿಸುತ್ತಿದ್ದರು. ಕೂದಲು ಕಸಿ ಮಾಡಿಸಿಕೊಳ್ಳುವ ಸಲುವಾಗಿ ಪಾಟ್ನಾಗೆ ಆಗಮಿಸಿದ್ದರು. ಕೂದಲು ಕಸಿಗೆ ಒಳಗಾದ ಬಳಿಕ ಮನೆಗೆ ಹಿಂತಿರುಗಿದ್ದ ಪಾಸ್ವಾನ್, ಚರ್ಮದ ತುರಿಕೆ ಸಮಸ್ಯೆ ಅನುಭವಿಸಿದ್ದು, ಈ ಕುರಿತು ಮನೆಯವರಲ್ಲಿ ಹೇಳಿಕೊಂಡಿದ್ದರು ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ಪಾಸ್ವಾನ್’ರನ್ನು ಸ್ಥಳೀಯ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ನೀಡಲಾಯಿತಾದರೂ, ಆರೋಗ್ಯ ಮತ್ತಷ್ಟು ಹದಗೆಟ್ಟಿದ್ದ ಕಾರಣ ನಗರದ ಆಸ್ಪತ್ರೆಯ ಐಸಿಯುನಲ್ಲಿ ದಾಖಲಿಸಲಾಗಿತ್ತು. ಅಲ್ಲಿ ಪ್ಲಾಸ್ಟಿಕ್ ಸರ್ಜನ್, ಕಾರ್ಡಿಯಾಕ್ ಸರ್ಜನ್, ಇಂಟರ್ನಲ್ ಮೆಡಿಸಿನ್ ಮತ್ತು ಐಸಿಯು ತಜ್ಞರು ಚಿಕಿತ್ಸೆ ನೀಡಿದ್ದಾರೆ. ಆದರೂ ಪಾಸ್ವಾನ್ ಜೀವ ಉಳಿಸಲು ಸಾಧ್ಯವಾಗಲಿಲ್ಲ.

“ಕೂದಲು ಕಸಿ ಚಿಕಿತ್ಸೆಯಿಂದ ಉಂಟಾದ ತೊಂದರೆಗಳಿಂದಾಗಿ ಪಾಸ್ವಾನ್ ಸಾವು ಕಂಡಿದ್ದಾರೆ. ಇದು ಕೂದಲು ಕಸಿ ಸಮಯದಲ್ಲಿ ನೀಡಲಾಗುವ ಔಷಧಿಗಳ ಪ್ರತಿಕ್ರಿಯೆಗೆ ಕಾರಣವಾಗುವ ಅಸಮರ್ಪಕ ಚಿಕಿತ್ಸೆಯ ಒಂದು ಪ್ರಕರಣವಾಗಿದೆ,” ಎಂದು ವೈದ್ಯರು ತಿಳಿಸಿದ್ದಾರೆ. ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಅವರು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.



Join Whatsapp