ಮಂಗಳೂರು: ಕಾರಿನಲ್ಲಿ ಮಾರಕಾಯುಧಗಳೊಂದಿಗೆ ಸಂಚರಿಸುತ್ತಿದ್ದ ಆರು ಮಂದಿಯನ್ನು ಕಾಪು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಶನಿವಾರ ಸಂಜೆ ವೇಳೆ ಕಾಪು ಸಮೀಪದ ಕೋತಲಕಟ್ಟೆ ಎಂಬಲ್ಲಿ ವಶಕ್ಕೆ ಪಡೆದುಕೊಂಡಿದ್ದಾರೆ.
ಮುಲ್ಕಿಯ ಅಮಿತ್ ರಾಜ್, ಕಾಟಿಪಳ್ಳದ ಪ್ರಕಾಶ್, ವಾಮಂಜೂರು ನೀರುಮಾರ್ಗದ ವರುಣ್, ಸುರತ್ಕಲ್ ನ ಕಾರ್ತಿಕ್ ಶೆಟ್ಟಿ, ಕಾಟಿಪಳ್ಳದ ಅಭಿಷೇಕ್, ಫರಂಗಿಪೇಟೆಯ ಶ್ರೀಕಾಂತ್ ಶ್ರೀಪತಿ ಬಂಧಿತರು. ಬಂಧಿತರಿಂದ ಕಾರು, ಮಾರಕಾಯುಧಗಳು ಸೇರಿದಂತೆ ಇತರ ವಸ್ತುಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಬಂಧಿತರಲ್ಲಿ ಅಭಿಷೇಕ್ ಎಂಬಾತ ಸುರತ್ಕಲ್‌ನಲ್ಲಿ ಕೊಲೆಯಾದ ಫಾಝಿಲ್ ಕೊಲೆ ಪ್ರಕರಣದ ಆರೋಪಿಯಾಗಿದ್ದಾನೆ. ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದನು.
ಉದ್ಯಾವರದ ಬಳಿ ಕಾರಿನಲ್ಲಿ ಮಾರಕಾಸ್ತ್ರಗಳೊಂದಿಗೆ ಮಾರಕಾಸ್ತ್ರಗಳೊಂದಿಗೆ ಇವರು ಹೋಗುತ್ತಿದ್ದ ಬಗ್ಗೆ ಅನುಮಾನಗೊಂಡ ಕಾಪು ಪೊಲೀಸ್ ವೃತ್ತ ನಿರೀಕ್ಷಕಿ ಜಯಶ್ರೀ ಮಾನೆ ಕಾರನ್ನು ನಿಲ್ಲಿಸುವಂತೆ ಸೂಚಿಸಿದರೂ ಕಾರನ್ನು ನಿಲ್ಲಿಸದೆ ಕಾಪು ಕಡೆ ಪರಾರಿ ಯಾಗಿದ್ದಾರೆ. ಬಳಿಕ ಈ ಬಗ್ಗೆ ಕಾಪು ಠಾಣೆಗೆ ಮಾಹಿತಿ ನೀಡಿದ ಜಯಶ್ರೀ ಮಾನೆ, ಆರೋಪಿಗಳ ವಾಹನವನ್ನು ಬೆನ್ನಟ್ಟಿದ್ದಾರೆ.
ಇನ್ನೊಂದು ವಾಹನದಲ್ಲಿ ಕಾಪು ಠಾಣೆಯ ಎಸ್ ಐ ಅಬ್ದುಲ್ ಆರೋಪಿಗಳ ವಾಹನವನ್ನು ಬೆನ್ನಟ್ಟಿದ್ದಾರೆ. ಕೊನೆಗೆ ಕಾಪುವಿನ ಕೋತಲ್ ಕಟ್ಟೆ ಬಳಿ ಆರೋಪಿಗಳ ವಾಹನವನ್ನು ತಡೆದು ನಿಲ್ಲಿಸಿದ್ದಾರೆ.
ವಾಹನವನ್ನು ತಪಾಸಣೆ ಮಾಡಿದ ಪೊಲೀಸರಿಗೆ ಅದರೊಳಗೆ ಮಾರಕಾಯುಧಗಳು ಹಾಗೂ ಇತರ ವಸ್ತುಗಳು ಸಿಕ್ಕಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.