ನವದೆಹಲಿ: ಅಪಾರ್ಟ್ ಮೆಂಟ್ ವೊಂದರಲ್ಲಿ ವಿಷಾನಿಲ ಸೇವನೆ ನಡೆಸಿ ಮೂವರು ಮಹಿಳೆಯರು ಆತ್ಮಹತ್ಯೆಗೈದ ಹೃದಯ ವಿದ್ರಾವಕ ಘಟನೆ ಭಾನುವಾರ ದೆಹಲಿಯಿಂದ ವರದಿಯಾಗಿದೆ.
ಮೃತರನ್ನು ವಸಂತ್ ವಿಹಾರ್ ಅಪಾರ್ಟ್ ಮೆಂಟ್ ನಿವಾಸಿಗಳಾದ ಮಂಜುಳ, ಪುತ್ರಿಯರಾದ ಅಸ್ಮಿಕಾ ಮತ್ತು ಅಂಜು ಎಂದು ಗುರುತಿಸಲಾಗಿದೆ. ಮೃತದೇಹಗಳ ಸಮೀಪದಲ್ಲಿ ಡೆಟ್ ನೋಟ್ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸ್ವಂತ ಫ್ಲಾಟ್ ಹೊಂದಿದ್ದ ಮಂಜುಳ ಎಂಬವರ ಪತಿ ಕಳೆದ ವರ್ಷ ಕೊರೋನಾದಿಂದಾಗಿ ಸಾವನ್ನಪ್ಪಿದ್ದರು. ಇದರಿಂದ ಈ ಮೂವರು ಖಿನ್ನತೆಗೊಳಗಾಗಿದ್ದರು ಎಂದು ನೆರೆ ಹೊರೆಯವರು ಮಾಹಿತಿ ನೀಡಿದ್ದಾರೆ. ಅಲ್ಲದೆ ಮಂಜುಳು ಎರಡು ತಿಂಗಳಿನಿಂದ ಹಾಸಿಗೆ ಹಿಡಿದಿದ್ದರು ಎಂದು ಮೂಲಗಳಿಂದ ತಿಳಿದು ಬಂದಿವೆ.
ಈ ಮಧ್ಯೆ ಆತ್ಮಹತ್ಯೆ ಮಾಡಿಕೊಳ್ಳಲು ಅವರು ಸಿಲಿಂಡರಿನ ಗ್ಯಾಸ್ ತೆರೆದಿಟ್ಟಿದ್ದು, ಕಿಟಕಿ, ಬಾಗಿಲುಗಳ ಮೂಲಕ ಗ್ಯಾಸ್ ಹೊರ ಹೋಗದಂತೆ ಟೇಪ್ ಅಂಟಿಸಿದ್ದರು. ಮನೆಯನ್ನು ಆವರಿಸಿದ್ದ ಕಾರ್ಬನ್ ಮಾನಾಕ್ಸೈಡ್ ಸೇವಿಸಿ ಈ ಮೂವರು ಮೃತಪಟ್ಟಿದ್ದಾರೆ. ಸದ್ಯ ಇವರ ಮೃತದೇಹಗಳು ಒಂದೇ ಕೊಠಡಿಯಲ್ಲಿ ಪತ್ತೆಯಾಗಿದ್ದು, ಅಲ್ಲಿ ಅಗ್ನಿಕುಂಡ, ಕ್ಯಾಂಡಲ್ ಕಂಡುಬಂದಿದೆ.
ಆತ್ಮಹತ್ಯೆ ನಡೆಸುವ ಸಲುವಾಗಿ ಆನ್ ಲೈನ್ ಮೂಲಕ ಅಗ್ನಿಕುಂಡ ಮತ್ತು ಕಲ್ಲಿದ್ದಲನ್ನು ತರಿಸಿಕೊಂಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆಯ ಕುರಿತು ದೂರು ದಾಖಲಿಸಿಕೊಂಡ ದೆಹಲಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.