ನರಗುಂದ | ಮುಸ್ಲಿಮ್ ವಿದ್ಯಾರ್ಥಿಗಳ ಮೇಲೆ ಮಾರಣಾಂತಿಕ ಹಲ್ಲೆ: ಪೊಲೀಸ್ ಠಾಣೆ ಎದುರು ಪ್ರತಿಭಟನೆ

Prasthutha|

ನರಗುಂದ: ಸರ್ಕಾರಿ ಉರ್ದು ಪ್ರೌಢಶಾಲೆಯ ವಿದ್ಯಾರ್ಥಿಗಳ ಮೇಲೆ ಮೂರ್ನಾಲ್ಕು ದಿನಗಳಿಂದ ಸಂಘಪರಿವಾರದ ಕಾರ್ಯಕರ್ತರು ನಿರಂತರವಾಗಿ ಹಲ್ಲೆ ನಡೆಸಿದ ಘಟನೆ ಗದಗ ಜಿಲ್ಲೆಯ ನರಗುಂದ ತಾಲೂಕಿನಲ್ಲಿ ನಡೆದಿದೆ.

- Advertisement -

ಸರ್ಕಾರಿ ಉರ್ದು ಶಾಲೆಯ ಬೆಳಗ್ಗಿನ ರಾಷ್ಟ್ರಗೀತೆ ಸಮಯದಲ್ಲಿ 7 ಮತ್ತು 9ನೇ ತರಗತಿ ವಿದ್ಯಾರ್ಥಿಗಳ ಮೇಲೆ ಗೂಂಡಾಗಳು ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಈ ವೇಳೆ ಬಿಡಿಸಲು ಬಂದ ಇಬ್ಬರು ಶಿಕ್ಷಕರ ಮೇಲೆ ಹಲ್ಲೆ ನಡೆಸಿದ್ದಲ್ಲದೆ ಶಾಲೆಯ ಕ್ಯಾಂಪಸ್ ಒಳಗಡೆ ಕಲ್ಲು ತೂರಿದ್ದಾರೆ. ಇದರಿಂದ ಇಬ್ಬರು ವಿದ್ಯಾರ್ಥಿಗಳ ತಲೆಗೆ ಗಾಯಗಳಾಗಿವೆ. ಬಿಡಿಸಲು ಶಿಕ್ಷಕರು ಎಷ್ಟೇ ಪ್ರಯತ್ನಿಸಿದರೂ ಹೊಡೆಯುವುದನ್ನು ನಿಲ್ಲಿಸದ ದುಷ್ಕರ್ಮಿಗಳು ಪೊಲೀಸರು ಬಂದ ಮೇಲಷ್ಟೇ ಬಿಟ್ಟು ಪರಾರಿಯಾಗಿದ್ದಾರೆ ಎನ್ನಲಾಗಿದೆ.

ಈ ಬಗ್ಗೆ ಮಾಹಿತಿ ನೀಡಿದ ಉರ್ದು ಶಾಲೆಯ ಶಿಕ್ಷಕ,  ನಮ್ಮ ಶಾಲೆಯ ವಿದ್ಯಾರ್ಥಿಯನ್ನು ಏಳೆಂಟು ಹುಡುಗರು ಹೊಡೆಯುತ್ತಾ ಬಂದರು.  ಯಾಕೆ ಹೊಡೆಯುತ್ತಿದ್ದೀರಿ ಎಂದು ನಾವು ಬಿಡಿಸಲು ಹೋದೆವು. ಈ ವೇಳೆ ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿದರು. ಅವರು ಎಸೆದ ಕಲ್ಲು  ವಿದ್ಯಾರ್ಥಿಗಳ ತಲೆಗೆ ಬಿದ್ದಿದೆ. ಆದರೆ, ಅವರು ಯಾರು, ಎಲ್ಲಿಯವರು ಎಂದು ಗೊತ್ತಿಲ್ಲ ಎಂದು ತಿಳಿಸಿದರು.

- Advertisement -

ವಿದ್ಯಾರ್ಥಿಗಳ ಮೇಲೆ ಹಲ್ಲೆಯಾಗಿರುವ ಕುರಿತು ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಹಲ್ಲೆ ಮಾಡಿದವರು ಯಾರು ಎಂಬುವುದು ಗೊತ್ತಾಗಿಲ್ಲ. ಪ್ರಕರಣದ ಕುರಿತು ತನಿಖೆ ಕೈಗೊಳ್ಳಲಾಗಿದೆ ಎಂದು ಡಿವೈಎಸ್ಪಿ ಶಂಕರ್ ರಾಗಿ ಮಾಹಿತಿ ನೀಡಿದ್ದಾರೆ.

ವಿದ್ಯಾರ್ಥಿಗಳ ಮೇಲೆ ಹಲ್ಲೆ ಖಂಡಿಸಿ ಮುಸ್ಲಿಂ ಒಕ್ಕೂಟದ ನೇತೃತ್ವದಲ್ಲಿ ವಿದ್ಯಾರ್ಥಿಗಳ ಪಾಲಕರು ಬುಧವಾರ ಪಟ್ಟಣದ ಶಿವಾಜಿ ವೃತ್ತ ಹಾಗೂ ಪೊಲೀಸ್ ಠಾಣೆ ಎದುರು ಪ್ರತಿಭಟನೆ ನಡೆಸಿದರು.

ಪಟ್ಟಣದ ಕೆಲವು ಗೂಂಡಾಗಳು ಉರ್ದು ಪ್ರೌಢಶಾಲೆಯ ವಿದ್ಯಾರ್ಥಿಗಳು ಶಾಲೆಗೆ ಬರುವ ಸಂದರ್ಭದಲ್ಲಿ ದಾರಿ ಮಧ್ಯೆ ಕಾದುಕುಳಿತು  ಏಕಾಏಕಿ ಹಲ್ಲೆ ನಡೆಸುತ್ತಿದ್ದಾರೆ. ವಿದ್ಯಾರ್ಥಿನಿಯರಿಗೆ ಮೈಮೇಲಿನ ಬುರ್ಖಾ, ಮುಖದ ಮೇಲಿನ ನಕಾಬ್ ತೆಗೆಯಿರಿ ಎಂದು ಅಶ್ಲೀಲ ಪದ ಬಳಕೆ ಮಾಡಿ ಚುಡಾಯಿಸುತ್ತಿದ್ದಾರೆ ಎಂದು ವಿದ್ಯಾರ್ಥಿಗಳ ಪಾಲಕರು ಆರೋಪಿಸಿದರು.

ಬಳಿಕ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ನರಗುಂದ ಉಪವಿಭಾಗ ಪೊಲೀಸ್ ಉಪಾಧೀಕ್ಷಕರಿಗೆ ಅಂಜುಮನ್ ಇಸ್ಲಾಂ ಸಮಿತಿಯ ಸದಸ್ಯರು ಮನವಿ ಸಲ್ಲಿಸಿದರು.

Join Whatsapp