ಹೊಸದಿಲ್ಲಿ : ‘ಜೈ ಶ್ರೀ ರಾಮ್’ ಘೋಷಣೆ ಕೂಗಲು ನಿರಾಕರಿಸಿದ ಮುಅಝ್ಝಿನ್ (ಆಝಾನ್ ಕರೆ ಕೊಡುವವರು) ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ಪಶ್ಚಿಮ ಬಂಗಾಳದ ಹೂಗ್ಲಿ ಜಿಲ್ಲೆಯ ಚಿನ್ಸುರಾ ಗ್ರಾಮದಲ್ಲಿ ನಡೆದಿದೆ.
ಚಕ್ಬಝಾರ್ ನಿವಾಸಿಯಾದ ಮೊಹಮ್ಮದ್ ಸೂಫಿಯುದ್ದೀನ್ (54) ಬೈಸಿಕಲ್ನಲ್ಲಿ ಮಸೀದಿಗೆ ತೆರಳುತ್ತಿದ್ದಾಗ ಬೈಕ್ನಲ್ಲಿ ಬಂದ ಮೂರು ಜನರ ತಂಡ ತಡೆದು ನಿಲ್ಲಿಸಿ ಜೈ ಶ್ರೀರಾಮ್ಗೆ ಘೋಷಣೆ ಕೂಗಲು ಒತ್ತಾಯಿಸಿದೆ. “ನಾನು ಮುಸ್ಲಿಮನಾಗಿದ್ದು, ‘ಜೈ ಶ್ರೀರಾಮ್’ ಘೋಷಣೆ ಕೂಗಲು ನನ್ನನ್ನು ಒತ್ತಾಯಿಸಬೇಡಿ ಎಂದು ಅವರಲ್ಲಿ ಕೇಳಿಕೊಂಡೆ. ಆ ವೇಳೆ ಒಬ್ಬ ಯುವಕ ನನಗೆ ತೀವ್ರವಾಗಿ ಹಲ್ಲೆ ನಡೆಸಿದನು. ನಾನು ಬೈಸಿಕಲ್ನೊಂದಿಗೆ ಕೆಳಗೆ ಬಿದ್ದಾಗ ನನ್ನ ಮೇಲೆ ಮೂವರೂ ಸೇರಿ ತೀವ್ರ ತರದ ಹಲ್ಲೆ ನಡೆಸಿದರು. ನಾನು ನೋವಿನಿಂದ ಕಿರುಚಿದಾಗ ದಾಳಿಕೋರರು ಸ್ಥಳದಿಂದ ಪರಾರಿಯಾಗಿದ್ದಾರೆ” ಎಂದು ಸೂಫಿಯುದ್ದೀನ್ ಹೇಳಿರುವುದಾಗಿ ಟೆಲಿಗ್ರಾಫ್ ವರದಿ ಮಾಡಿದೆ.
ನಂತರ ಸೂಫಿಯುದ್ದೀನ್ ಚಿನ್ಸುರಾ ಪೊಲೀಸ್ ಠಾಣೆಗೆ ತೆರಳಿ ಹಲ್ಲೆ ನಡೆಸಿದವರ ವಿರುದ್ಧ ದೂರು ದಾಖಲಿಸಿದ್ದಾರೆ. ಹಲ್ಲೆ ನಡೆಸಿದವರ ವಿರುದ್ಧ ದೂರು ದಾಖಲಿಸಿದ್ದು, ತನಿಖೆಯನ್ನು ಪ್ರಾರಂಭಿಸಲಾಗಿದೆ ಎಂದು ಚಂದರ್ ನಗೂರು ಪೊಲೀಸ್ ಆಯುಕ್ತ ಗೌರವ್ ಶರ್ಮಾ ಟೆಲಿಗ್ರಾಫ್ ಗೆ ತಿಳಿಸಿದ್ದಾರೆ.