ಶವಾಗಾರದ ಫ್ರೀಝರ್ ನಲ್ಲಿ ಸತತ ಏಳು ಗಂಟೆಗಳನ್ನು ಕಳೆದ ಜೀವಂತ ವ್ಯಕ್ತಿ: ವೈದ್ಯರ ನಿರ್ಲಕ್ಷ್ಯಕ್ಕೆ ವ್ಯಾಪಕ ಆಕ್ರೋಶ

Prasthutha|

ಲಕ್ನೋ: ಜೀವಂತ ವ್ಯಕ್ತಿಯೊಬ್ಬನನ್ನು ಸತತ ಏಳು ಗಂಟೆಗಳ ಕಾಲ ಶವಾಗಾರದ ಫ್ರೀಝರ್ ನಲ್ಲಿಟ್ಟ ವಿಲಕ್ಷಣ ಘಟನೆ ಉತ್ತರ ಪ್ರದೇಶದ ಮೊರದಾಬಾದ್ ನಿಂದ ವರದಿಯಾಗಿದೆ.

- Advertisement -

ಶ್ರೀಕೇಶ್ ಕುಮಾರ್ ಎಂಬ ವ್ಯಕ್ತಿಯು ವೃತ್ತಿಯಲ್ಲಿ ಎಲೆಕ್ಟ್ರಿಷಿಯನ್ ಆಗಿದ್ದು, ಮೋಟಾರ್ ಬೈಕ್ ಡಿಕ್ಕಿಯಾಗಿ ಗಂಭೀರವಾಗಿ ಗಾಯಗೊಂಡ ಹಿನ್ನೆಲೆಯಲ್ಲಿ ಜಿಲ್ಲಾ ಆಸ್ಪತ್ರೆಗೆ ಸಾಗಿಸಲಾಗಿತ್ತು. ಈ ವೇಳೆ ಆತನ ಪರೀಕ್ಷಿಸಿದ ವೈದರು ಮೃತಪಟ್ಟಿರುವುದಾಗಿ ಘೋಷಿಸಿದರು.

ವಾರೀಸುದಾರರು ತಕ್ಷಣ ಬಾರದ ಕಾರಣ ಆತನ ಶವವನ್ನು ಆಸ್ಪತ್ರೆಯ ಸಿಬ್ಬಂದಿಗಳು ಫ್ರೀಝರ್ ನಲ್ಲಿರಿಸಿದ್ದರು.

- Advertisement -

ಸುಮಾರು ಏಳು ಗಂಟೆಗಳ ನಂತರ ಶವವನ್ನು ಗುರುತಿಸಿ ಪರೀಕ್ಷೆಗೆ ಒಪ್ಪಿಗೆ ಸೂಚಿಸಲು ಕುಟುಂಬಸ್ಥರು ಮುಂದಾದ ಸಂದರ್ಭದಲ್ಲಿ ಮೃತ ವ್ಯಕ್ತಿ ಉಸಿರಾಡುತ್ತಿರುವುದು ಗಮನಕ್ಕೆ ಬಂದಿದೆ.

ಈ ಮಧ್ಯೆ ವೈದ್ಯರ ಬೇಜವ್ದಾರಿ ಮತ್ತು ನಿರ್ಲಕ್ಷ್ಯದಿಂದಲೇ ಈ ರೀತಿಯ ಘಟನೆ ನಡೆದು ಗಾಯಗೊಂಡ ವ್ಯಕ್ತಿ ಸತತ ಏಳು ಗಂಟೆಗಳ ಕಾಲ ಶವಾಗಾರದ ಫ್ರೀಝರ್ ನಲ್ಲಿ ಕಳೆಯಬೇಕಾಗಿ ಬಂದಿದೆ ಎಂದು ಕುಟಂಬದ ಮೂಲಗಳು ಆರೋಪಿಸಿವೆ.

ಘಟನೆಯ ಕುರಿತು ಪ್ರತಿಕ್ರಿಯಿಸಿದ ಮೊರಾದಾಬಾದ್ ಮುಖ್ಯ ವೈದ್ಯಾಧಿಕಾರಿ ಡಾ. ಶಿವ ಸಿಂಗ್, ತುರ್ತು ಘಟಕದಲ್ಲಿ ವೈದ್ಯರು ರೋಗಿಯನ್ನು ಪರೀಕ್ಷೆ ನಡೆಸಿದ ವೇಳೆ ಆತನ ಹೃದಯ ಬಡಿತ ಸ್ಥಗಿತಗೊಂಡಿತ್ತು. ಈ ಹಿನ್ನೆಲೆಯಲ್ಲಿ ಆತ ಮೃತಪಟ್ಟಿದ್ದಾನೆ ಎಂದು ವೈದ್ಯರು ಘೋಷಿಸಿದ್ದರು. ಆದರೆ ಪೊಲೀಸರು, ಕುಟುಂಬದ ಸಮ್ಮುಖದಲ್ಲಿ ಮಹಜರು ನಡೆಸುವ ವೇಳೆ ಆತ ಜೀವಂತವಾಗಿರುವುದು ಕಂಡುಬಂದಿದೆ. ಘಟನೆಯ ಕುರಿತು ತನಿಖೆಗೆ ಆದೇಶಿಸಲಾಗಿದೆ. ಸದ್ಯ ಆತನ ಜೀವ ಉಳಿಸುವುದು ನಮ್ಮ ಮೊದಲ ಆದ್ಯತೆಯಾಗಿದೆ ಎಂದು ತಿಳಿಸಿದರು.

ಮಾತ್ರವಲ್ಲ ಇದೊಂದು ಅಪರೂಪದ ಪ್ರಕರಣ. ನಾವು ಅದನ್ನು ನಿರ್ಲಕ್ಷ್ಯ ಎಂದು ಕರೆಯಲು ಸಾಧ್ಯವಿಲ್ಲ ಎಂದು ಡಾ. ಸಿಂಗ್ ತಿಳಿಸಿದ್ದಾರೆ.

ಪ್ರಸ್ತಕ್ತ ಶ್ರೀಕೇಶ್ ಕುಮಾರ್ ಮೀರತ್ ನ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಆತನ ಆರೋಗ್ಯ ಸ್ಥಿತಿ ಸುಧಾರಿಸುತ್ತಿದೆ. ಆದರೆ ಇದುವರೆಗೂ ಪ್ರಜ್ಞೆ ಬಂದಿಲ್ಲವೆಂದು ಕುಟುಂಬದ ಮೂಲಗಳು ತಿಳಿಸಿವೆ.

ಶ್ರೀಕೇಶ್ ಅವರನ್ನು ಶವಾಗಾರದ ಫ್ರೀಝರ್ ನಲ್ಲಿರಿಸಿ ಕರ್ತವ್ಯಲೋಪವೆಸಗಿದ ವೈದ್ಯರ ವಿರುದ್ಧ ದೂರು ದಾಖಲಿಸುವುದಾಗಿ ಕುಟುಂಬದ ಮೂಲಗಳು ತಿಳಿಸಿವೆ.



Join Whatsapp