ನವದೆಹಲಿ: ಸೂಕ್ತ ರೀತಿಯಲ್ಲಿ ತರಬೇತಿ ಪಡೆಯದಿರುವ ಕಾರಣಕ್ಕೆ ಸ್ಪೈಸ್ ಜೆಟ್ ವಿಮಾನ ಸಂಸ್ಥೆಯ 90 ಪೈಲಟ್ಗಳನ್ನು ಬೋಯಿಂಗ್ 737 ಮ್ಯಾಕ್ಸ್ ವಿಮಾನ ಚಲಾಯಿಸದಂತೆ ಭಾರತದ ವಿಮಾನಯಾನ ನಿಯಂತ್ರಕ ಡಿಜಿಸಿಎ ನಿರ್ಬಂಧ ಹೇರಿದೆ. ಅಲ್ಲದೇ ಪೈಲಟ್ ಗಳು ವಿಮಾನ ಚಲಾಯಿಸಲು ಯಶಸ್ವಿಯಾಗಿ ಮರು ತರಬೇತಿ ಪಡೆಯುವಂತೆ ಸೂಚನೆ ನೀಡಿದೆ.
ಪೈಲೆಟ್ ಗಳು ಸೂಕ್ತ ರೀತಿಯಲ್ಲಿ ತರಬೇತಿ ಪಡೆಯದೆ ಇರುವುದರಿಂದ ಈ ಕ್ರಮ ಕೈಗೊಳ್ಳಲಾಗಿದ್ದು, ಅಚರು ಮ್ಯಾಕ್ಸ್ ಹಾರಿಸುವುದನ್ನು ನಿಷೇಧಿಸಿದ್ದೇವೆ ಎಂದು ಡಿಜಿಸಿಎ ಮುಖ್ಯಸ್ಥ ಅರುಣ್ ಕುಮಾರ್ ತಿಳಿಸಿದ್ದಾರೆ. ಈ ಲೋಪದ ಹೊಣೆಗಾರರ ವಿರುದ್ಧವೂ ಡಿಜಿಸಿಎ ಕಠಿಣ ಕ್ರಮ ಕೈಗೊಳ್ಳಲಿದೆ ಎಂದು ಹೇಳಿದ್ದಾರೆ.
ಒಟ್ಟು 650 ಪೈಲಟ್ಗಳಿಗೆ “ಬೋಯಿಂಗ್ 737 ಮ್ಯಾಕ್ಸ್ ವಿಮಾನದ ಚಾಲನೆಗೆ ಸ್ಪೈಸ್ಜೆಟ್ ತರಬೇತಿ ನೀಡಿದೆ. 90 ಪೈಲಟ್ಗಳಿಗೆ ನೀಡಿದ ತರಬೇತಿ ವಿವರಗಳನ್ನು ಡಿಜಿಸಿಎ ಪರಿಶೀಲಿಸಿ ನಿರ್ಬಂಧ ಹೇರಿದೆ. ಪೈಲಟ್ಗಳು ಮರು ತರಬೇತಿ ಪಡೆಯುವವರೆಗೂ 90 ಪೈಲಟ್ಗಳು ಮ್ಯಾಕ್ಸ್ ವಿಮಾನ ಚಲಾಯಿಸದಂತೆ ಸ್ಪೈಸ್ಜೆಟ್ ನಿರ್ಬಂಧಿಸಿದೆ ಅಲ್ಲದೇ ಇವರು ಇತರೆ ಬೋಯಿಂಗ್ 737 ವಿಮಾನಗಳ ಚಾಲನೆಗೆ ಲಭ್ಯ ಇರುತ್ತಾರೆ” ಎಂದು ಅರುಣ್ ಹೇಳಿದ್ದಾರೆ.