ಎಪಿಕ್ ಕಾರ್ಡ್’ಗೆ ಆಧಾರ್ ಜೋಡಿಸಲು ರಾಜಕೀಯ ಪಕ್ಷಗಳ ಪ್ರತಿನಿಧಿಗಳಿಗೆ ಡಿ.ಸಿ.ಡಾ. ರಾಜೇಂದ್ರ ಸಲಹೆ

Prasthutha|

ಮಂಗಳೂರು: ಮತದಾರರ ಪಟ್ಟಿಯಲ್ಲಿರುವ ಮತದಾರರನ್ನು ದೃಢೀಕರಿಸಲು ಸ್ವಯಂ ಪ್ರೇರಿತ ಆಧಾರದ ಮೇಲೆ ವೋಟರ್ ಹೆಲ್ಪ್ ಲೈನ್ ಆಪ್ ಮೂಲಕ ಆನ್ ಲೈನ್ ನಲ್ಲಿ 6ಬಿ ನಮೂನೆ ಸಲ್ಲಿಸಿ ಆಧಾರ್ ಸಂಖ್ಯೆಯನ್ನು ಮತದಾರರ ಗುರುತಿನ ಚೀಟಿಗೆ ಜೋಡಣೆ ಮಾಡಲು ಕ್ರಮವಹಿಸುವಂತೆ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಅವರು ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳಿಗೆ ತಿಳಿಸಿದರು.
ಅವರು ಆ.16ರಂದು ನಗರದ ಜಿಲ್ಲಾಧಿಕಾರಿಯವರ ಕಚೇರಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.

- Advertisement -

ಎಲ್ಲಾ ರಾಜಕೀಯ ಪಕ್ಷದವರು ಪ್ರತಿಯೊಂದು ಮತಗಟ್ಟೆಗೆ ಬಿಎಲ್ ಎಗಳನ್ನು (ಮತಗಟ್ಟೆ ಏಜೆಂಟ್) ನೇಮಕ ಮಾಡಬೇಕು, ಬಿ.ಎಲ್.ಎ ಗಳು ಮತದಾರರ ಪಟ್ಟಿಯನ್ನು ಪರಿಶೀಲಿಸಬೇಕು, ಒಂದು ವೇಳೆ ಪಟ್ಟಿಯಲ್ಲಿರುವ ಮತದಾರರು ಮೃತರಾಗಿದ್ದರೆ ಅಥವಾ ವಲಸ ಹೋಗಿದ್ದರೆ, ಅಂತವರ ಮಾಹಿತಿಯನ್ನು ಬಿಎಲ್ ಒಗಳಿಗೆ ನೀಡಬೇಕು, 18 ವರ್ಷ ಮೇಲ್ಪಟ್ಟ ಅರ್ಹ ಮತದಾರರು ಮತದಾರರ ಪಟ್ಟಿಗೆ ಸೇಪರ್ಡೆಯಾಗಿರುವ ಬಗ್ಗೆ ಪರಿಶೀಲಿಸಬೇಕು, ಮತದಾರರ ಪಟ್ಟಿಯಲ್ಲಿ ಒಂದೇ ಕುಟುಂಬದ ಸದ್ಯಸರ ಹೆಸರು ಒಂದೇ ಕಡೆ ಬರುವಂತೆ ನೋಡಿಕೊಳ್ಳಬೇಕು, ಈ ಬಗ್ಗೆ ಏನಾದರು ಸಮಸ್ಯೆಗಳಿದ್ದರೆ ರಾಜಕೀಯ ಪಕ್ಷದಿಂದ ನೇಮಕವಾಗಿರುವ ಬಿ.ಎಲ್.ಎಗಳು ಬೂತ್ ಮಟ್ಟದ ಅಧಿಕಾರಿಗಳ ಸಮನ್ವಯದೊಂದಿಗೆ ಸರಿಪಡಿಸಿಕೊಳ್ಳಬೇಕು, ಎಲ್ಲಾ ಬಿ.ಎಲ್.ಎ ಗಳು ತಮ್ಮ ವ್ಯಾಪ್ತಿಗೆ ಬರುವ ಅರ್ಹ ವಿಕಲಚೇತನವನ್ನು ಕಡ್ಡಾಯವಾಗಿ ಮತದಾರರ ಪಟ್ಟಿಯಲ್ಲಿ ನೋಂದಾಯಿಸಿಕೊಳ್ಳುವ ಬಗ್ಗೆ ಪರಿಶೀಲಿಸಬೇಕು, ಮುಖ್ಯವಾಗಿ ಎಲ್ಲಾ ಮತದಾರರಿಗೆ ಎಪಿಕ್ ಕಾರ್ಡ್ ನೀಡಿರುವ ಬಗ್ಗೆ ಖಚಿತಪಡಿಸಿಕೊಳ್ಳಬೇಕು, ಅಂತೆಯೇ ತೃತೀಯ ಲಿಂಗದ ಮತದಾರರು ಮತದಾರರ ಪಟ್ಟಿಗೆ ಸೇರ್ಪಡೆಯಾಗಿರುವ ಬಗ್ಗೆ ಪರಿಶೀಲಿಸಿಕೊಳ್ಳಬೇಕು, ಮತಗಟ್ಟೆಗಳಿರುವ ಕಟ್ಟಡಗಳು ಶಿಥಿಲಗೊಂಡಿದ್ದರೆ ಅಥವಾ ಅಪಾಯಕಾರಿ ಹಂತದಲ್ಲಿದ್ದರೆ, ಆ ಬಗ್ಗೆ ವರದಿ ನೀಡಬೇಕು, 300ಕ್ಕಿಂತ ಕಡಿಮೆ ಮತದಾರರಿರುವ ಮತಗಟ್ಟೆಗಳಿದ್ದಲ್ಲಿ ಅಂತಹ ಮತಗಟ್ಟೆಗಳನ್ನು ಹತ್ತಿರದ ಮತಗಟ್ಟೆಗೆ ವಿಲೀನ ಮಾಡುವ ಬಗ್ಗೆ, 1500 ಕ್ಕಿಂತ ಹೆಚ್ಚು ಮತದಾರರಿರುವ ಮತಗಟ್ಟೆಗಳಿದ್ದಲ್ಲಿ ಅಂತಹ ಮತಗಟ್ಟೆಗಳನ್ನು ವಿಭಜನೆ ಮಾಡುವ ಬಗ್ಗೆ ಪ್ರಸ್ತಾವನೆಗಳಿದ್ದಲ್ಲಿ ತಹಶೀಲ್ದಾರ್ ಮುಖಾಂತರ ವರದಿ ಸಲ್ಲಿಸುವಂತೆ ಅವರು ಸೂಚಿಸಿದರು.

ಚುನಾವಣಾ ಆಯೋಗವು ಮತದಾರರ ಪಟ್ಟಿಯಲ್ಲಿರುವ ಮತದಾರರನ್ನು ದೃಢೀಕರಿಸಲು ಸ್ವಯಂಪ್ರೇರಿತ ಆಧಾರದ ಮೇಲೆ ಆಧಾರ್ ಸಂಖ್ಯೆಯನ್ನು ಮತದಾರರ ಗುರುತಿನ ಚೀಟಿಗೆ ಲಿಂಕ್ ಮಾಡುವಂತೆ ನಿರ್ದೇಶನ ನೀಡಿದೆ, ಕಾರಣ ಪ್ರತಿ ಮತದಾರರು ವೋಟರ್ ಹೆಲ್ಪ್ ಲೈನ್ ಆಪ್ ನಲ್ಲಿ ಆನ್ ಲೈನ್ ಮೂಲಕ 6ಬಿ ನಮೂನೆಯನ್ನು ಸಲ್ಲಿಸಿ ತಮ್ಮ ಆಧಾರ್ ಸಂಖ್ಯೆಯನ್ನು ಚುನಾವಣಾ ಗುರುತಿನ ಚೀಟಿಗೆ ಲಿಂಕ್ ಮಾಡಬಹುದಾಗಿದೆ, ಎಲ್ಲಾ ಬಿಎಲ್ ಒ ಗಳು ತಮ್ಮ ವ್ಯಾಪ್ತಿಗೆ ಬರುವ ಎಲ್ಲಾ ಮತದಾರರು ಸ್ವಯಂಪ್ರೇರಿತರಾಗಿ ಆಧಾರ್ ಸಂಖ್ಯೆಯನ್ನು ಜೋಡಣೆ ಮಾಡಲು ಅಗತ್ಯ ಕ್ರಮಗಳನ್ನು ವಹಿಸುವಂತೆ ಅವರು ತಿಳಿಸಿದರು.

- Advertisement -

ಮುಖ್ಯವಾಗಿ ಆ.21ರ ಭಾನುವಾರ ಬೆಳಿಗ್ಗೆ 10 ರಿಂದ ಸಂಜೆ 5 ಗಂಟೆಯ ವರೆಗೆ ಎಲ್ಲಾ ಬಿಎಲ್ ಎ ಗಳು ಮತಗಟ್ಟೆಯಲ್ಲಿ ಹಾಜರಿದ್ದು, ಬಿಎಲ್ ಒಗಳ ಸಮನ್ವಯದೊಂದಿಗೆ ಮತದಾರರ ಪಟ್ಟಿಯನ್ನು ಪರಿಶೀಲಿಸಬೇಕು ಹಾಗೂ ಮತದಾರರ ಆಧಾರ್ ಸಂಖ್ಯೆಯನ್ನು ಸ್ಥಳದಲ್ಲೇ ಹೆಚ್ಚಿನ ಸಂಖ್ಯೆಯಲ್ಲಿ ಜೋಡಣೆ ಮಾಡಬೇಕು, ಆಧಾರ್ ಕಾರ್ಡ್ ಇಲ್ಲದಿರುವ ಪಕ್ಷದಲ್ಲಿ ನರೇಗಾ ಜಾಬ್ ಕಾರ್ಡ್, ಬ್ಯಾಂಕ್ ಅಥವಾ ಅಂಚೆ ಕಚೇರಿಯ ಪಾಸ್ ಬುಕ್, ಆರೋಗ್ಯ ವಿಮೆ, ಚಾಲನಾ ಪರವಾನಗಿ, ಪಾನ್ ಕಾರ್ಡ್, ಎನ್ ಪಿಆರ್ ನಡಿ ನೀಡಲಾದ ಸ್ಮಾರ್ಟ್ ಕಾರ್ಡ್, ಪಾಸ್ ಪೋರ್ಟ್, ಪಿಂಚಣಿ ದಾಖಲಾತಿಗಳು, ಕೇಂದ್ರ ಅಥವಾ ರಾಜ್ಯ ಸರ್ಕಾರ ಅಥವಾ ಸಾರ್ವಜನಿಕ ವಲಯದಲ್ಲಿ ಸೇವೆ ಸಲ್ಲಿಸಿದ ನೌಕರರ ಗುರುತಿನ ಚೀಟಿ, ಸಂಸದರು, ಶಾಸಕರು, ವಿಧಾನ ಪರಿಷತ್ ಸದಸ್ಯರು ನೀಡಿದ ಅಧಿಕೃತ ಗುರುತಿನ ಚೀಟಿ ನೀಡಿ ಮತದಾರರ ಗುರುತಿನ ಚೀಟಿಗೆ ಲಿಂಕ್ ಮಾಡಬಹುದಾಗಿದೆ ಎಂದರು.

ಜಿಲ್ಲೆಯ ಪ್ರತಿ ಕಾಲೇಜಿನಲ್ಲೂ ಕ್ಯಾಂಪಸ್ ಅಂಬಾಸಿಡರ್ ಅನ್ನು ನೇಮಕ ಮಾಡಬೇಕು, ಅವರ ಮೂಲಕ ಎಲ್ಲಾ ವಿದ್ಯಾರ್ಥಿಗಳಿಗೆ ಮುಂಚಿತವಾಗಿ ಅವರ ಹಾಗೂ ಅವರ ಕುಟುಂಬದವರ ಆಧಾರ್ ಹಾಗೂ ಗುರುತಿನ ಚೀಟಿ ತರುವಂತೆ ತಿಳಿಸಿ, ಕಾಲೇಜು ಹಂತದಲ್ಲಿಯೇ ಆಧಾರ್ ಸಂಖ್ಯೆಯನ್ನು ಮತದಾರರ ಗುರುತಿನ ಚೀಟಿಗೆ ವೋಟರ್ ಹೆಲ್ಪ್ ಲೈನ್ ಆಪ್ ಮೂಲಕ ಜೋಡಣೆ ಮಾಡಿ ವಿಶೇಷ ಪ್ರಗತಿ ಸಾಧಿಸುವಂತೆ ಕಾಲೇಜು ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕರಿಗೆ ತಿಳಿಸಿದರು.

ಅಪರ ಜಿಲ್ಲಾಧಿಕಾರಿ ಡಾ. ಕೃಷ್ಣಮೂರ್ತಿ, ಚುನಾವಣಾ ತಹಶೀಲ್ದಾರ್ ದಯಾನಂದ್, ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳು, ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿದ್ದರು.



Join Whatsapp