ಡ್ರಗ್ಸ್ ದುಷ್ಪರಿಣಾಮಗಳ ರೀಲ್ಸ್, ಕಿರುಚಿತ್ರಗಳ ನಿರ್ಮಾಣಕ್ಕೆ ದ.ಕ. ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಸೂಚನೆ

Prasthutha|

ಮಂಗಳೂರು: ಡ್ರಗ್ಸ್ ಸೇವನೆಯ ದುಷ್ಪರಿಣಾಮಗಳ ಬಗ್ಗೆ ಕಾಲೇಜುಗಳಲ್ಲಿನ ಆಸಕ್ತ ವಿದ್ಯಾರ್ಥಿಗಳಿಂದ ರೀಲ್ಸ್ ಹಾಗೂ ಕಿರು ಚಿತ್ರಗಳನ್ನು ತಯಾರಿಸಲು ಅಗತ್ಯ ಕ್ರಮವಹಿಸುವಂತೆ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಎಂ.ಪಿ. ಅವರು ಕಾಲೇಜು ಶಿಕ್ಷಣ ಇಲಾಖೆಯ ವಿಶೇಷಾಧಿಕಾರಿಗೆ ಸೂಚನೆ ನೀಡಿದರು.

- Advertisement -

ಅವರು ನಗರದ ಜಿಲ್ಲಾಧಿಕಾರಿಯವರ ಕಚೇರಿ ಸಭಾಂಗಣದಲ್ಲಿ ಆ.3ರ ಗುರುವಾರ ಹಮ್ಮಿಕೊಳ್ಳಲಾಗಿದ್ದ ನಾರ್ಕೋ ಕೋ-ಆರ್ಡಿನೇಷನ್ ಸೆಂಟರ್ ನ ಜಿಲ್ಲಾ ಮಟ್ಟದ ಸಮಿತಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕಾಲೇಜುಗಳಲ್ಲಿ ಈಗಾಗಲೇ ಡ್ರಗ್ಸ್ ನಿರ್ಮೂಲನಾ ಸಮಿತಿಯನ್ನು ರಚಿಸಿ, ಸದಸ್ಯರನ್ನು ನೇಮಕ ಮಾಡಲಾಗಿದೆ ಅವರುಗಳು ಮಾದಕ ವಸ್ತುಗಳ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಜಾಥಾ ಸೇರಿದಂತೆ ವಿವಿಧ ರೀತಿಯ ಕಾರ್ಯಕ್ರಮಗಳನ್ನು ಆಯೋಜಿಸಿ ಜಾಗೃತಿ ಮೂಡಿಸಬೇಕು. ಅದೇ ರೀತಿ ಜಿಲ್ಲೆಯ ಕಾಲೇಜುಗಳಲ್ಲಿ ಮಾದಕ ದ್ರವ್ಯ ನಿರ್ಮೂಲನೆ ಕುರಿತಂತೆ ಉತ್ತಮ ಸ್ಕ್ರೀಪ್ಟ್ ರಚಿಸಿ ಒಂದು ನಿಮಿಷದೊಳಗೆ ರೀಲ್ಸ್, ಕಿರು ವಿಡಿಯೋಗಳನ್ನು ವಿದ್ಯಾರ್ಥಿಗಳೇ ನಿರ್ಮಿಸಿಕೊಡುವ ಬಗ್ಗೆ  ಕಾಲೇಜು ಶಿಕ್ಷಣ ಇಲಾಖೆಯ ವಿಶೇಷ ಅಧಿಕಾರಿ ದೇವಿ ಪ್ರಸಾದ್ ಅವರ ಮೇಲ್ವಿಚಾರಣೆಯಲ್ಲಿ ಕ್ರಮವಹಿಸಬೇಕು ಹಾಗೂ ತಯಾರಾದ ಅತ್ಯುತ್ತಮ ರೀಲ್ಸ್ ಹಾಗೂ ಕಿರು ಚಿತ್ರಗಳಿಗೆ ಆ.15ರ ಸ್ವಾತಂತ್ರ್ಯ ದಿನಾಚರಣೆಯಂದು ಜಿಲ್ಲಾ ಉಸ್ತುವಾರಿ ಸಚಿವರಿಂದ ಬಹುಮಾನ ಕೊಡಿಸಲಾಗುವುದು ಎಂದವರು ಹೇಳಿದರು.

- Advertisement -

ಜಿಲ್ಲೆಯಲ್ಲಿರುವ ಡ್ರಗ್ಸ್ ವ್ಯಸನಿಗಳಿಗೆ ಕೌನ್ಸಲಿಂಗ್ ಮಾಡಲು ಜಿಲ್ಲಾ ಮಟ್ಟದಲ್ಲಿ ಗುರುತಿಸಲಾದ ಒಬ್ಬರು ಕೌನ್ಸಿಲರ್ ಅನ್ನು ನಿಯೋಜಿಸುವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಕಿಶೋರ್ ಕುಮಾರ್ ಅವರಿಗೆ ಸೂಚನೆ ನೀಡಿದ ಅವರು, ಜಿಲ್ಲೆಯಲ್ಲಿ ಡ್ರಗ್ಸ್ ಸೇವನೆ ಪ್ರಕರಣಗಳು ವರದಿಯಾದಾಗ ಸಂಬಂಧಿಸಿದವರು ಅವರ ಬಳಿ ಕೌನ್ಸೆಲಿಂಗ್‍ಗೆ ಕಳುಹಿಸಿಕೊಡಬೇಕು, ಮುಖ್ಯವಾಗಿ ಎಲ್ಲಾ ಖಾಸಗಿ ಕಾಲೇಜುಗಳಲ್ಲಿಯೂ ಕೌನ್ಸಿಲರ್ ಒಬ್ಬರ ನೇಮಕವಾಗಬೇಕು. ಈ ಸಭೆ ನಡೆಸಿ ಕಡ್ಡಾಯವಾಗಿ ಎಲ್ಲಾ ಕಾಲೇಜುಗಳಲ್ಲಿಯೂ ಕೌನ್ಸೆಲರ್ ನೇಮಕ ಮಾಡಿಕೊಳ್ಳುವಂತೆ ನಿರ್ದೇಶನ ನೀಡುವಂತೆ ತಿಳಿಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಿಷ್ಯಂತ್ ಸಿ.ಬಿ. ಅವರು ಮಾತನಾಡಿ ಜಿಲ್ಲೆಯಲ್ಲಿರುವ ಡ್ರಗ್ ಕೌನ್ಸಿಲಿಂಗ್ ಸೆಂಟರ್ ಗಳ ನಂಬರ್‍ಗಳನ್ನು ಪಟ್ಟಿ ಕೊಟ್ಟಲ್ಲಿ ಡ್ರಗ್ಸ್ ವ್ಯಸನಿಗಳು ಕಂಡುಬಂದ ಕೂಡಲೇ ಅವರನ್ನು ಕೌನ್ಸೆಲಿಂಗ್‍ಗೆ ಕಳುಹಿಸಲು ಅನುಕೂಲವಾಗಲಿದೆ ಎಂದರು.

ಬೆಳ್ತಂಗಡಿಯ ನೆರಿಯಾದಲ್ಲಿ ಗಾಂಜಾ ಬೆಳೆಯುವ ಪ್ರಕರಣಕ್ಕೆ ಸಂಬಂಧಿಸಿದಂತೆ ಅರಣ್ಯ ಇಲಾಖೆಯವರು ಪರಿಶೀಲಿಸಿ ಕೂಡಲೇ ವರದಿ ನೀಡಬೇಕು ಹಾಗೂ ಈ ಮಾಹಿತಿ ನೀಡಿದವರಿಗೆ ಬಹುಮಾನ ನೀಡುವ ಬಗ್ಗೆ ಘೋಷಿಸುವಂತೆ ಅವರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ತಿಳಿಸಿದರು.

ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಡಿಸಿಪಿ ಅನ್ಶು ಕುಮಾರ್, ಪುತ್ತೂರು ಡಿವೈಎಸ್‍ಪಿ ಡಾ. ಗಾನಾ ಪಿ. ಕುಮಾರ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಕಿಶೋರ್ ಕುಮಾರ್, ಕೃಷಿ ಇಲಾಖೆ ಜಂಟಿ ನಿರ್ದೇಶಕ ಕೆಂಪೇಗೌಡ ಸೇರಿದಂತೆ ಇತರೆ ಅಧಿಕಾರಿಗಳು ಸಭೆಯಲ್ಲಿದ್ದರು.

Join Whatsapp