“ಐಕ್ಯತಾ ದಿನ” ಹಾಗೂ ಪೊಲೀಸ್ ಹುತಾತ್ಮರಿಗೆ ಸ್ವರ ಶ್ರದ್ಧಾಂಜಲಿ

Prasthutha|

ಬೆಂಗಳೂರು: ಭಾರತದ ಪ್ರಪ್ರಥಮ ಗೃಹ ಮಂತ್ರಿ, ಉಕ್ಕಿನ ಮನುಷ್ಯ ಎಂದೇ ಖ್ಯಾತರಾದ ಸರ್ದಾರ್ ವಲ್ಲಭಭಾಯ್ ಪಟೇಲ್ ಅವರ ದೂರದರ್ಶಿತ್ವದ ನಾಯಕತ್ವ ಇಲ್ಲದಿದ್ದರೆ ದೇಶದೊಳಗೆ ಇನ್ನೂ ಹಲವು ದೇಶಗಳು ಮಗ್ಗುಲ ಮುಳ್ಳಾಗಿ ಇರುತ್ತಿದ್ದವು, ಇದಕ್ಕಾಗಿ ಇಡೀ ದೇಶದ ಜನತೆ ಅವರಿಗೆ ಕೃತಜ್ಞವಾಗಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ.

- Advertisement -


ಸಚಿವರು ಇಂದು ಬೆಂಗಳೂರಿನ ಪುರಭವನದಲ್ಲಿ ಆಯೋಜಿಸಲಾದ ಸರ್ದಾರ್ ವಲ್ಲಭಭಾಯ್ ಪಟೇಲ್ ಜನ್ಮ ದಿನಾಚರಣೆ “ಐಕ್ಯತಾ ದಿನ” ಹಾಗೂ ಪೊಲೀಸ್ ಹುತಾತ್ಮರಿಗೆ ಸ್ವರ ಶ್ರದ್ಧಾಂಜಲಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.


ಪಟೇಲರ ದೂರದರ್ಶಿತ್ವದ ನಾಯಕತ್ವದಿಂದಾಗಿ ಹಾಗೂ ಚಾಣಾಕ್ಷ ನಡೆಯಿಂದಾಗಿ ದೇಶದ ಮಗ್ಗುಲು ಮುಳ್ಳುಗಳಾಗಿ ಕಾಡದಂತೆ, ಹೈದರಾಬಾದ್ ಸಂಸ್ಥಾನ ಹಾಗೂ ಜುನಾಗಡ್ ಸಂಸ್ಥಾನಗಳನ್ನು ಭಾರತದ ಒಕ್ಕೂಟ ವ್ಯವಸ್ಥೆಯ ಆವರಣದೊಳಗೆ ಸೇರ್ಪಡೆ ಗೊಳ್ಳುವಂತಾಯಿತು. ಈ ದೇಶ ಶಾಶ್ವತವಾಗಿ ಸರ್ದಾರ್ ವಲ್ಲಭಭಾಯ್ ಪಟೇಲ್ ಅವರನ್ನು ನೆನಪಿಸಿಕೊಳ್ಳುವುದು ಎಂದ ಸಚಿವರು, ಭಾರತ ದೇಶ ಜಗತ್ತಿನಲ್ಲಿಯೇ ಅತ್ಯಂತ ಹೆಮ್ಮೆಯ ದೇಶವಾಗಿ ಬೆಳಗಬೇಕು ಎಂಬ ಅವರ ಕನಸನ್ನು ನನಸು ಮಾಡಲು ಸಂಕಲ್ಪ ತೊಡಬೇಕು ಎಂದು ಸಚಿವರು ಹೇಳಿದರು.

- Advertisement -


“ಸರ್ದಾರ್ ಪಟೇಲ್ ಅವರಿಂದ ಪ್ರೇರಣೆ ಪಡೆದು ಪ್ರತಿಯೊಬ್ಬ ಪೊಲೀಸ್ ಸಿಬ್ಬಂದಿ ದೇಶದ ಸಮಗ್ರತೆ ಉಳಿಸಲು ಭದ್ರತೆಯನ್ನು ಕಾಪಾಡಲು ಸೇವಾ ಮನೋಭಾವನೆ ಹೊಂದಬೇಕು” ಎಂದು ಆಶಿಸಿದರು.
ರಾಜ್ಯದ ಪೊಲೀಸ್ ಮುಖ್ಯಸ್ಥ ಪ್ರವೀಣ್ ಸೂದ್ ಅವರೂ ಸೇರಿದಂತೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.



Join Whatsapp