ದಾವೂದಿ ಬೋಹ್ರಾ ನಾಯಕತ್ವ ವಿವಾದ: ತೀರ್ಪು ಕಾಯ್ದಿರಿಸಿದ ಬಾಂಬೆ ಹೈಕೋರ್ಟ್

Prasthutha|

ಮುಂಬೈ: ಇಸ್ಲಾಂ ಧರ್ಮಕ್ಕೆ ಸೇರಿದ ಷಿಯಾ ಪಂಥದ ಪಂಗಡವಾದ ದಾವೂದಿ ಬೊಹ್ರಾ ಸಮುದಾಯದ ನಾಯಕತ್ವಕ್ಕೆ ಸಂಬಂಧಿಸಿದಂತೆ ಆರಂಭಿಸಲಾಗಿದ್ದ 9 ವರ್ಷಗಳ ಹಳೆಯ ದಾವೆ ಕುರಿತು ಬಾಂಬೆ ಹೈಕೋರ್ಟ್ ಅಂತಿಮವಾಗಿ ತನ್ನ ತೀರ್ಪು ಕಾಯ್ದಿರಿಸಿದೆ.

- Advertisement -


ತನ್ನ ಸಮುದಾಯದ 52ನೇ ಧಾರ್ಮಿಕ ನಾಯಕ ʼಸೈಯದ್ನಾʼ ಮುಹಮ್ಮದ್ ಬುರ್ಹಾನುದ್ದೀನ್ ಅವರ ನಿಧನಾನಂತರ ದಾವೂದಿ ಬೋಹ್ರಾ ಸಮುದಾಯ ದೊಡ್ಡಮಟ್ಟದಲ್ಲಿ ಅರಾಜಕತೆ ಎದುರಿಸಿತು.
ಬುರ್ಹಾನುದ್ದೀನ್ ಅವರ ನಿಧನದ ನಂತರ, ಅವರ ಮಗ ಮುಫದ್ದಲ್ ಸೈಫುದ್ದೀನ್ 53ನೇ ಧಾರ್ಮಿಕ ನಾಯಕರಾಗಿ ಅಧಿಕಾರ ವಹಿಸಿಕೊಂಡರು. ಇದನ್ನು ಮೃತ ಸೈಯದ್ನಾ ಅವರ ಮಲ ಸಹೋದರ ಖುಝೈಮಾ ಕುತುಬುದ್ದೀನ್ ಪ್ರಶ್ನಿಸಿದ್ದರು. ಸಮುದಾಯದ 52ನೇ ನಾಯಕರಾಗಿದ್ದ ಅವರು ತನಗೆ ನೀಡಿದ್ದ ರಹಸ್ಯ ʼನಾಸ್ʼ (ಉತ್ತರಾಧಿಕಾರ ಪ್ರದಾನ ವಿಧಿ) ಆಧಾರದ ಮೇಲೆ ತಾನು ‘ದಾಯ್-ಅಲ್-ಮುತ್ಲಾಕ್’ (ಸಮುದಾಯದ ನಾಯಕ) ಎಂದು ಹೇಳಿಕೊಂಡಿದ್ದರು. ವಿವಾದ ಇತ್ಯರ್ಥವಾಗದೇ ಇದ್ದಾಗ ಮೂಲ ಫಿರ್ಯಾದಿ ಕುತುಬುದ್ದೀನ್ ಅವರು 2014ರ ಮಾರ್ಚ್ 29ರಂದು ಹೈಕೋರ್ಟ್ನಲ್ಲಿ ದಾವೆ ಹೂಡಿ, ತನ್ನನ್ನು 53ನೇ ನಾಯಕನನ್ನಾಗಿ ಘೊಷಿಸುವಂತೆ ಮನವಿ ಮಾಡಿದರು.


ನ್ಯಾಯಾಲಯದಲ್ಲಿ ಸಾಕ್ಷ್ಯ ದಾಖಲೀಕರಣ ಪ್ರಕ್ರಿಯೆ ನಡೆಯುತ್ತಿದ್ದಾಗಲೇ 2016ರಲ್ಲಿ, ಮೂಲ ಫಿರ್ಯಾದಿ ಕುತುಬುದ್ದೀನ್ ನಿಧನರಾದರು. ಬಳಿಕ ಅವರ ಮಗ ತಾಹೆರ್ ಫಕ್ರುದ್ದೀನ್ ಅವರು ತಮ್ಮ ತಂದೆಯ ಬದಲು ಪ್ರಕರಣದ ಫಿರ್ಯಾದಿಯಾದರು. 9 ವರ್ಷ ಮತ್ತು 8 ದಿನಗಳ ಕಾಲ ನಡೆದ ವಿಚಾರಣೆಯ ಬಳಿಕ ಏಪ್ರಿಲ್ 5, 2023ರಂದು ನ್ಯಾ. ಜಿ ಎಸ್ ಪಟೇಲ್ ಅವರಿದ್ದ ಏಕಸದಸ್ಯ ಪೀಠ ತೀರ್ಪನ್ನು ಕಾಯ್ದಿರಿಸಿತು.

- Advertisement -


ತನ್ನನ್ನು ಉತ್ತರಾಧಿಕಾರಿಯಾಗಿ ನೇಮಿಸಿದ 52ನೇ ನಾಯಕರು ವಿಷಯವನ್ನು ಗೌಪ್ಯವಾಗಿಡುವಂತೆ ಕೇಳಿಕೊಂಡರು. ಅವರ ನಿಧನಾನಂತರ ಅವರ ಮಗ ಸೈಫುದ್ದೀನ್ ವಂಚನೆಯಿಂದ ಹುದ್ದೆ ಅಲಂಕರಿಸಿದ್ದು ಇದರಿಂದ ಕಾನೂನು ಹಕ್ಕು ಚಲಾಯಿಸುವಂತಾಯಿತು ಎಂದು ಮೂಲ ದಾವೆದಾರರಾದ ದಿ. ಕುತುಬುದ್ದೀನ್ ಮೊಕದ್ದಮೆಯಲ್ಲಿ ತಿಳಿಸಿದ್ದರು.
ಲಂಡನ್ನ ಆಸ್ಪತ್ರೆಯಲ್ಲಿ ಸಾಕ್ಷಿಗಳ ಸಮ್ಮುಖದಲ್ಲಿ ನನ್ನ ತಂದೆಯಾದ ದಿವಂಗತ 52ನೇ ನಾಯಕರು ನನಗೇ ನಾಸ್ ಪ್ರದಾನ ಮಾಡಿದ್ದರು. ಜೂನ್ 20, 2011ರಂದು ಮುಂಬೈನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಇದನ್ನು ಸಾರ್ವಜನಿಕವಾಗಿ ‘ಮರು-ದೃಢೀಕರಿಸಲಾಯಿತು’ ಎಂದು ಪ್ರಕರಣದ ಪ್ರತಿವಾದಿ ವಾದಿಸಿದ್ದರು.

ಪ್ರಕರಣಕ್ಕೆ ಸಂಬಂಧಿಸಿದಂತೆ ತೀರ್ಪು ನೀಡಲು ನ್ಯಾ. ಪಟೇಲ್ ಅವರನ್ನು ವಿಶೇಷವಾಗಿ ನಿಯೋಜಿಸಲಾಗಿತ್ತು. 46 ದಿನಗಳ ಅಂತಿಮ ವಿಚಾರಣೆಯ ಬಳಿಕ ನ್ಯಾ. ಪಟೇಲ್ ಮೊಕದ್ದಮೆಯನ್ನು ಕಾಯ್ದಿರಿಸಿದರು. ಪ್ರಕರಣದಲ್ಲಿ ಸಾಕಷ್ಟು ವಕೀಲರು ವಾದ ಮಂಡಿಸಿದ್ದಾರೆ ಎಂಬುದನ್ನು ನ್ಯಾಯಮೂರ್ತಿಗಳು ಆದೇಶವೊಂದರಲ್ಲಿ ದಾಖಲಿಸಿದ್ದಾರೆ.
(ಕೃಪೆ: ಬಾರ್ & ಬೆಂಚ್)



Join Whatsapp