ಜೂನ್ 26 ಕ್ಕೆ ಸಮಾವೇಶ ನಡೆಸಲು ತೀರ್ಮಾನ
ದಾವಣಗೆರೆ: ಪ್ರವಾದಿ ಮುಹಮ್ಮದ್ ವಿರುದ್ಧ ಅವಹೇಳನಕಾರಿ ಹೇಳಿಕೆ ವಿರುದ್ಧ ದೇಶಾದ್ಯಂತ ಪ್ರತಿಭಟನೆಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ಜನಾಧಿಕಾರ ಸಮಾವೇಶವನ್ನು ಮುಂದೂಡುವಂತೆ ಜಿಲ್ಲಾಡಳಿತ ಮಾಡಿದ ಮನವಿಗೆ ಸ್ಪಂದಿಸಿದ ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ದಾವಣಗೆರೆಯಲ್ಲಿ (12-06-2022) ಭಾನುವಾರ ಹಮ್ಮಿಕೊಂಡಿದ್ದ ಜನಾಧಿಕಾರ ಸಮಾವೇಶವನ್ನು ಮುಂದೂಡಲು ತೀರ್ಮಾನ ಕೈಗೊಂಡಿದೆ ಎಂದು ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಅಪ್ಸರ್ ಕೊಡ್ಲಿಪೇಟೆ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದಾವಣಗೆರೆಯಲ್ಲಿ ನಾಳೆ ಸಂಜೆ 6ರಿಂದ ರಾತ್ರಿ 10ರವರೆಗೆ ನಿಷೇಧಾಜ್ಞೆ ಹೇರಲಾಗಿದ್ದು, ಸಮಾವೇಶವನ್ನು ಮುಂದೂಡುವಂತೆ ದಾವಣಗೆರೆ ಡಿ.ಸಿ. ಮಹಾತೇಂಶ್ ಬೀಳಗಿ SDPI ನಾಯಕರಲ್ಲಿ ವಿನಂತಿಸಿದ್ದಾರೆ. ಪ್ರವಾದಿ ಅವಹೇಳನದ ಕುರಿತು ದೇಶಾದ್ಯಂತ ಪ್ರತಿಭಟನೆಗಳು ಹೆಚ್ಚಾಗಿದ್ದು, ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಸಮಾವೇಶವನ್ನು ಮುಂದೂಡುವಂತೆ ಜಿಲ್ಲಾಡಳಿತ ಮನವಿ ಮಾಡಿದ ಹಿನ್ನೆಲೆಯಲ್ಲಿ ನಾಳೆ ನಡೆಯಬೇಕಿದ್ದ ಸಮಾವೇಶವನ್ನು ಮುಂದೂಡುವ ತೀರ್ಮಾನಕ್ಕೆ SDPI ಬಂದಿದ್ದು ಇದೇ ಬರುವ ಜೂನ್ 26 ಕ್ಕೆ ಸಮಾವೇಶ ನಡೆಸಲು ತೀರ್ಮಾನಿಸಲಾಗಿದೆ. ಆದ್ದರಿಂದ SDPI ಪಕ್ಷದ ಎಲ್ಲ ಹಿತೈಷಿಗಳು, ಕಾರ್ಯಕರ್ತರು, ಅಭಿಮಾನಿಗಳು, ಸದಸ್ಯರು ಹಾಗು ಬೆಂಬಲಿಗರು ಸಹಕರಿಸಬೇಕು ಎಂದು ಅವರು ಮನವಿ ಮಾಡಿದರು.
ಪತ್ರಿಕಾ ಗೋಷ್ಠಿಯಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ಬಿ. ಆರ್. ಭಾಸ್ಕರ್ ಪ್ರಸಾದ್, ಜಿಲ್ಲಾಧ್ಯಕ್ಷ ಇಸ್ಮಾಯಿಲ್ ಜಾಬಿಉಲ್ಲಾ, ಉಪಾಧ್ಯಕ್ಷ ರಿಯಾಝ್ ಅಹ್ಮದ್ ರಜ್ವಿ, ಚಿತ್ರದುರ್ಗ ಜಿಲ್ಲಾಧ್ಯಕ್ಷ ಬಾಳೆಕಾಯಿ ಶ್ರೀನಿವಾಸ್, ಜಿಲ್ಲಾ ಪ್ರದಾನ ಕಾರ್ಯದರ್ಶಿ ಸೈಯದ್ ಅಷ್ಷಾಕ್ ಉಪಸ್ಥಿತರಿದ್ದರು.