ಬದ್ರುದ್ದೀನ್ ಮಾಣಿ, ಹಂಝ ಮಲಾರ್ ಸಹಿತ 12 ಮಂದಿ ಪತ್ರಕರ್ತರಿಗೆ ದತ್ತಿನಿಧಿ ಪ್ರಶಸ್ತಿ

Prasthutha|

ಮಂಗಳೂರು: ಹಿರಿಯ ಪತ್ರಕರ್ತರಾದ ಬದ್ರುದ್ದೀನ್ ಕೆ. ಮಾಣಿ, ಹಂಝ ಮಲಾರ್ ಸಹಿತ 12 ಮಂದಿಗೆ ಕಾಸರಗೋಡು ಜಿಲ್ಲಾ ಕನ್ನಡ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘದ ದತ್ತಿನಿಧಿ ಪ್ರಶಸ್ತಿಯನ್ನು ಘೋಷಿಸಲಾಗಿದೆ.

- Advertisement -

ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕಾಸರಗೋಡು ಜಿಲ್ಲಾ ಕನ್ನಡ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಎ.ಆರ್.ಸುಬ್ಬಯ್ಯ ಕಟ್ಟೆ, ಏ.30 ರಂದು ಕೇರಳದ ಎರ್ನಾಕುಲಂ ನಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ ಎಂದು ತಿಳಿಸಿದರು.
ಡಾ.ವೆಂಕಟೇಶ್ ತುಪ್ಪಿಲ್ ಕೊಡ ಮಾಡುವ ದತ್ತಿನಿಧಿ ಪ್ರಶಸ್ತಿಗೆ ಬದ್ರುದ್ದೀನ್ ಕೆ.ಮಾಣಿ, ಹಾಸನದ ಜೆ.ಆರ್. ಕೆಂಚೇಗೌಡ ಅವರು ನೀಡುವ ‘ಪ್ರಚೋದಯ’ ದತ್ತಿನಿಧಿ ಪ್ರಶಸ್ತಿಗೆ ಹಂಝ ಮಲಾರ್ ಆಯ್ಕೆಯಾಗಿದ್ದಾರೆ ಎಂದು ಅವರು ಮಾಹಿತಿ ನೀಡಿದರು.

ಎಡನೀರು ಕೇಶವಾನಂದ ಭಾರತಿ ಸ್ವಾಮೀಜಿಯವರ ನೆನಪಿಗಾಗಿ ಶ್ರೀ ಮಠವು ನೀಡುವ ದತ್ತಿನಿಧಿ ಪ್ರಶಸ್ತಿಗೆ ಹಿರಿಯ ಪತ್ರಕರ್ತ ಮನೋಹರ್ ಪ್ರಸಾದ್, ಅವ್ವ ಸೇವಾ ಟ್ರಸ್ಟ್‌ನ ಸಂಸ್ಥಾಪಕ ಹಾಗೂ ಕರ್ನಾಟಕ ವಿಧಾನ ಪರಿಷತ್ತಿನ ಸಭಾಪತಿ ಬಸವರಾಜ್ ಹೊರಟ್ಟಿಯವರು ನೀಡುವ ದತ್ತಿನಿಧಿ ಪ್ರಶಸ್ತಿಗೆ ಹಿರಿಯ ಪತ್ರಕರ್ತ ಯು.ಕೆ.ಕುಮಾರನಾಥ್, ಹವ್ವಾ ಹಸನ್ ಫೌಂಡೇಶನ್ ಕುದ್ರೋಳಿ ಸಂಸ್ಥಾಪಕ ಹಾಗೂ ಹಿರಿಯ ಆರ್ಥಿಕ ತಜ್ಞ ಅಬ್ದುಲ್ಲ ಮಾದುಮೂಲೆ ಕೊಡ ಮಾಡುವ ದತ್ತಿನಿಧಿ ಪ್ರಶಸ್ತಿಗೆ ಹಿರಿಯ ಪತ್ರಕರ್ತೆ ಕೀರ್ತಿಶೇಖರ್ ಕಾಸರಗೋಡು ಅವರನ್ನು, ಕರ್ನಾಟಕ ಗಡಿಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಸಿ.ಸೋಮಶೇಖರ ಕೊಡ ಮಾಡುವ ದತ್ತಿನಿಧಿ ಪ್ರಶಸ್ತಿಗೆ ಪತ್ರಕರ್ತ ರಾಜೇಶ್ ರೈ ಚಟ್ಲ ಅವರನ್ನು ಆಯ್ಕೆ ಮಾಡಲಾಗಿದೆ.

- Advertisement -

ಕೆ.ವಿ.ಆರ್ ಠ್ಯಾಗೋರ್ ಸ್ಮರಣಾರ್ಥ ನಿವೃತ್ತ ಅಧಿಕಾರಿ ಟಿ.ತಿಮ್ಮೆಗೌಡ ಹಾಗೂ ಹೇರಂಭ ಇಂಡಸ್ಟ್ರೀಸ್ ಆಡಳಿತ ನಿರ್ದೇಶಕ ಕುಳೂರು ಕನ್ಯಾನ ಸದಾಶಿವ ಶೆಟ್ಟಿಯವರು ನೀಡುವ ದತ್ತಿನಿಧಿ ಪ್ರಶಸ್ತಿಗೆ ವಿಕ್ರಂ ಕಾಂತಿಕೆರೆ ಅವರನ್ನು ಆಯ್ಕೆ ಮಾಡಲಾಗಿದೆ.

ನ್ಯಾಯವಾದಿ ಮೊಹಮ್ಮದ್ ಇಬ್ರಾಹಿಂ ಪಾರ ಸ್ಮರಣಾರ್ಥ ನ್ಯಾಯವಾದಿ ಇಬ್ರಾಹಿಂ ಖಲೀಲ್ ಅರಿಮಲ ದುಬೈ ನೀಡುವ ದತ್ತಿನಿಧಿ ಪ್ರಶಸ್ತಿಗೆ ಪತ್ರಕರ್ತ ರೋನ್ಸ್ ಬಂಟ್ವಾಳ್ ಅವರನ್ನು ಆಯ್ಕೆ ಮಾಡಲಾಗಿದೆ.

ಹಿರಿಯ ಸಾಹಿತಿ ಸಂಘಟಕ ಪ್ರಭಾಕರ ಕಲ್ಲೂರಾಯ ಬನದಗದ್ದೆಯವರು ನೀಡುವ ದತ್ತಿನಿಧಿ ಪ್ರಶಸ್ತಿಗೆ ಹಿರಿಯ ಪತ್ರಕರ್ತ ಅಜ್ಜಮಾಡ ರಮೇಶ್ ಕುಟ್ಟಪ್ಪ ಅವರನ್ನು, ಮೊಗರೋಡಿ ಗೋಪಾಲಕೃಷ್ಣ ಮೇಲಾಂಟ ಸ್ಮರಣಾರ್ಥ ಹರ್ಷ ಮೇಲಾಂಟ ಹಾಗೂ ಕುಟುಂಬ ನೀಡುವ ದತ್ತಿನಿಧಿ ಪ್ರಶಸ್ತಿಗೆ ದಯಾಸಾಗರ್ ಚೌಟ ಅವರನ್ನು ಆಯ್ಕೆ ಮಾಡಲಾಗಿದೆ.

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಬೆಂಗಳೂರು ನೀಡುವ ದತ್ತಿನಿಧಿ ಪ್ರಶಸ್ತಿಗೆ ಪತ್ರಕರ್ತ ಪ್ರದೀಪ್ ಕುಮಾರ್ ಬೇಕಲ್, ಹಿರಿಯ ಪತ್ರಕರ್ತ ದೇವದಾಸ ಪಾರೆಕಟ್ಟೆ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಎ.ಆರ್.ಸುಬ್ಬಯ್ಯ ಕಟ್ಟೆ ತಿಳಿಸಿದರು.

ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಕೇರಳದ ಕೈಗಾರಿಕಾ ಸಚಿವ ಪಿ.ರಾಜೀವ್ ಹಾಗೂ ಗಡಿನಾಡ ಪ್ರಾಧಿಕಾರದ ಸಿ.ಸೋಮಶೇಖರ್ ಉಪಸ್ಥಿತಿಯಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಅವರು ಮಾಹಿತಿ ನೀಡಿದರು.

Join Whatsapp