ಮಂಗಳೂರು (ಸೋಮವಾರ 11/11/24) : ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ಮದರಸಗಳ ಮಾಹಿತಿ ಸಂಗ್ರಹ ಕಾರ್ಯವನ್ನು ಸ್ಥಗಿತಗೊಳಿಸಲಾಗಿದ್ದು, ಯಾರಿಗೂ ಯಾವುದೇ ಆತಂಕ, ಗೊಂದಲ ಬೇಡ ಎಂದು ಪೊಲೀಸ್ ಆಯುಕ್ತ ಅನುಪಮ್ ಅಗರ್‌ವಾಲ್ ಅವರು ಮುಸ್ಲಿಂ ಮುಖಂಡರ ನಿಯೋಗಕ್ಕೆ ಮನವರಿಕೆ ಮಾಡಿಕೊಟ್ಟಿರುವುದಾಗಿ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಕೆ.ಕೆ ಶಾಹುಲ್ ಹಮೀದ್ ಪ್ರಸ್ತುತ ನ್ಯೂಸ್‌ಗೆ ತಿಳಿಸಿದರು.
ರಾಜ್ಯ ಗುಪ್ತಚರ ಸಂಸ್ಥೆಯ ಸೂಚನೆಯಂತೆ ರಾಜ್ಯದಾದ್ಯಂತ ಗೌಪ್ಯವಾಗಿ ಮದರಸಗಳ ಮಾಹಿತಿ ಸಂಗ್ರಹ ಕಾರ್ಯಕ್ಕೆ ಪೊಲೀಸ್ ಇಲಾಖೆ ಮುಂದಾಗಿರುವುದು ಬೆಳಕಿಗೆ ಬಂದಿತ್ತು. ಮಂಗಳೂರು ಕಮಿಷನರೇಟ್ ಪೊಲೀಸರು ಕೂಡ ಮದರಸಗಳ ಮಾಹಿತಿ ಸಂಗ್ರಹಕ್ಕೆ ಮುಂದಾಗಿದ್ದರು. ಇದರಿಂದ ಮುಸ್ಲಿಂ ಸಮುದಾಯದಲ್ಲಿ ಆತಂಕ ಮತ್ತು ಗೊಂದಲ ಮನೆ ಮಾಡಿತ್ತು. ಈ ಬಗ್ಗೆ ಮಾಹಿತಿ ಪಡೆಯಲು ಕೆ.ಕೆ ಶಾಹುಲ್ ಹಮೀದ್ ನೇತೃತ್ವದ ಮುಸ್ಲಿಂ ಮುಖಂಡರ ನಿಯೋಗ ಇಂದು ಬೆಳಗ್ಗೆ ನಗರ ಪೊಲೀಸ್ ಆಯುಕ್ತರನ್ನು ಭೇಟಿಯಾಗಿ ಚರ್ಚೆ ನಡೆಸಿದೆ.
ಈ ವೇಳೆ ನಿಯೋಗಕ್ಕೆ ಮಾಹಿತಿ ನೀಡಿರುವ ಪೊಲೀಸ್ ಆಯುಕ್ತರು, ಮದರಸಗಳ ಮಾಹಿತಿ ಸಂಗ್ರಹ ಪ್ರಕ್ರಿಯೆ ಸ್ಥಗಿತಗೊಳಿಸುವಂತೆ ರಾಜ್ಯ ಗುಪ್ತಚರ ನಿರ್ದೇಶಕರಿಂದ ನಮಗೆ ಸೂಚನೆ ಬಂದಿದೆ, ಪೂರ್ತಿ ರಾಜ್ಯದಲ್ಲಿ ಈ ಪ್ರಕ್ರಿಯೆ ಸ್ಥಗಿತಗೊಳಿಸಲಾಗಿದೆ, ಈ ಕಾರ್ಯದಲ್ಲಿ ನಾವು ಮುಂದುವರಿಯುವುದಿಲ್ಲ ಎಂಬ ಭರವಸೆ ನೀಡಿದ್ದಾರೆ ಎಂದು ಕೆ.ಕೆ ಶಾಹಿಲ್ ಹಮೀದ್ ತಿಳಿಸಿದರು.
ಗುಪ್ತಚರ ಇಲಾಖೆ ಮೂಲಕ ಮದರಸಗಳ ಮಾಹಿತಿ ಪಡೆಯಲು ಮುಂದಾಗಿದ್ದು ಮುಸ್ಲಿಮರಲ್ಲಿ ಆತಂಕ ಮತ್ತು ಗೊಂದಲ ಸೃಷ್ಟಿಸಿತ್ತು ಎಂದ ಶಾಹುಲ್‌ಹಮೀದ್, ಮದರಸಗಳ ಬಗ್ಗೆ ಮಾಹಿತಿ ಬೇಕಿದ್ದರೆ ಸರ್ಕಾರ ಅಧಿಕೃತವಾಗಿ ವಕ್ಫ್ ಇಲಾಖೆಯಿಂದ ನೇರವಾಗಿ ಪಡೆದುಕೊಳ್ಳಬಹುದು, ನೋಂದಾಯಿತ ಮದರಸಗಳ ಬಗ್ಗೆ ವಕ್ಫ್ ಇಲಾಖೆಯಲ್ಲಿ ಸಂಪೂರ್ಣ ಮಾಹಿತಿಗಳಿವೆ, ಎಲ್ಲಾ ಮಾಹಿತಿ ನೀಡಲು ಮಸೀದಿ ಮದರಸ ಆಡಳಿತ ಸಮಿತಿ ಬದ್ಧವಿದೆ ಎಂದರು.
ನಿಯೋಗದಲ್ಲಿ ಪಾಲಿಕೆ ಸದಸ್ಯರಾದ ಅಬ್ದುಲ್ ರವೂಫ್ ಮತ್ತು ಲತೀಫ್ ಕಂದಕ್, ಮುಖಂಡರಾದ ಹನೀಫ್ ಹಾಜಿ ಗೋಳ್ತಮಜಲು, ಮುಹಮ್ಮದ್ ಬಪ್ಪಳಿಗೆ, ರಫೀಕ್ ಕಣ್ಣೂರು, ಹೈದರ್ ಬೋಳಾರ, ಹಬೀಬುಲ್ಲಾ ಕಣ್ಣೂರು ಮತ್ತು ಸಮೀರ್ ಕಾಟಿಪಳ್ಳ ಉಪಸ್ಥಿತರಿದ್ದರು.