ವಿಟ್ಲ: ಸಿಡಿಲು ಬಡಿದು ಮನೆಗೆ ಹಾನಿಯಾಗಿ ಮೂವರು ಗಾಯಗೊಂಡ ಘಟನೆ ವೀರಕಂಬ ಗ್ರಾಮದ ಕಲ್ಮಲೆಯಲ್ಲಿ ವರದಿಯಾಗಿದೆ.
ಗಾಯಗೊಂಡವರನ್ನು ವೀರಕಂಬ ಕಲ್ಮಲೆ ಮೂಲದ ರಘುನಾಥ ಶೆಟ್ಟಿ ಮತ್ತು ಅವರ ಮಕ್ಕಳಾದ ಪ್ರಜೀತಾ(19) ಮತ್ತು ರಕ್ಷಿತಾ(24) ಎಂದು ಗುರುತಿಸಲಾಗಿದೆ. ಅವರನ್ನು ವಿಟ್ಲ ಸಮುದಾಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ಜಯಂತಿ ಮತ್ತು ರಘುನಾಥ ಶೆಟ್ಟಿ ದಂಪತಿಗಳ ಮನೆಗೆ ಸಂಜೆ ಭಾರೀ ಸಿಡಿಲು ಬಡಿದಿದ್ದು, ಇದರಿಂದ ಮನೆ ಭಾಗಶಃ ಹಾನಿಗೊಂಡಿದೆ. ಮನೆಯಲ್ಲಿದ್ದ ವಿದ್ಯುತ್ ಉಪಕರಣಗಳು ಸಂಪೂರ್ಣವಾಗಿ ನಾಶಗೊಂಡಿದೆ. ಮನೆಯ ಗೋಡೆಗಳು ಬಿರುಕುಬಿಟ್ಟಿವೆ. ಮಾಡಿನ ಹಂಚುಗಳು ಪುಡಿಯಾಗಿ ಬಿದ್ದಿವೆ.
ಘಟನಾ ಸ್ಥಳಕ್ಕೆ ವೀರಕಂಬ ಗ್ರಾಮಕರಣಿಕ ಕರಿಬಸಪ್ಪ ಭೇಟಿ ನೀಡಿದ್ದಾರೆ.