ದೇವರ ಪಲ್ಲಕ್ಕಿ ಹೊರಲು ಅವಕಾಶ ನೀಡಬೇಕೆಂದು ದಲಿತರ ಪಟ್ಟು
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಗೌಡ ಸಾರಸ್ವತ ಬ್ರಾಹ್ಮಣ ಸಮುದಾಯ (ಜಿ.ಎಸ್.ಬಿ)ದ ಲಾಯಿಲ ವೆಂಕಟರಮಣ ದೇವಸ್ಥಾನದ ದೇವರ ಪಲ್ಲಕ್ಕಿಯನ್ನು ಸಂಪ್ರದಾಯ ಮುರಿದು ಹೊತ್ತ ಶಾಸಕ ಹರೀಶ್ ಪೂಂಜಾ ನಡೆಗೆ ವ್ಯಾಪಕ ಟೀಕೆ ವ್ಯಕ್ತವಾಗಿದೆ. ಮಾತ್ರವಲ್ಲ ದೇವಸ್ಥಾನದ ಆಡಳಿತ ಮಂಡಳಿಯ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
ಹಿಂದುಳಿದ ಬಂಟ ಸಮುದಾಯದವರಿಗೆ ದೇವರ ಪಲ್ಲಕ್ಕಿಯನ್ನು ಹೊರಲು ಅವಕಾಶ ನೀಡಿದ ಕ್ರಮವನ್ನು ಖಂಡಿಸಿರುವ ದಲಿತರು ತಮಗೂ ಪಲ್ಲಕ್ಕಿಯನ್ನು ಹೊತ್ತು ಸಾಗಲು ಅವಕಾಶ ನೀಡಬೇಕೆಂದು ಪಟ್ಟು ಹಿಡಿದಿದ್ದಾರೆ.
ಪ್ರಸಕ್ತ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ದೇವರ ಪಲ್ಲಕ್ಕಿಯನ್ನು ಹೊತ್ತು ಸಾಗುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ದೇವಸ್ಥಾನದ ಈ ಕ್ರಮದ ವಿರುದ್ಧ ಗೌಡ ಸಾರಸ್ವತ ಬ್ರಾಹ್ಮಣ ಸಮುದಾಯದ ಆಲ್ ಟೆಂಪರ್ ಅಸೋಸಿಯೇಷನ್ ತಗಾದೆ ಎತ್ತಿದೆ ಎಂದು ಹೇಳಲಾಗಿದೆ. ಮಾತ್ರವಲ್ಲ ಈ ಬಗ್ಗೆ ದೇವಸ್ಥಾನ ಸಮಿತಿಯಲ್ಲಿ ಮಾಹಿತಿ ನೀಡಬೇಕೆಂದು ಒತ್ತಾಯಿಸಿದೆ.
ಬಂಟ ಸಮುದಾಯದ ಹರೀಶ್ ಪೂಂಜಾ ಅವರಿಗೆ ಪಲ್ಲಕ್ಕಿ ಹೊರಲು ಅನುವು ಮಾಡಿದ ಜಿ.ಎಸ್.ಬಿ ಯುವಕರಿಬ್ಬರ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾಗುತ್ತಿರುವ ಬಗ್ಗೆ ಮಾಹಿತಿ ಲಭಿಸಿದೆ ಎಂದು ಮೂಲಗಳು ತಿಳಿಸಿವೆ. ಮಾತ್ರವಲ್ಲ ಈ ಸಂಬಂಧ ಗೌಡ ಸಾರಸ್ವತ ಬ್ರಾಹ್ಮಣ ಸಮಾಜದ ಕಾಶಿ ಮಠದ ಸ್ವಾಮಿಗೂ ದೂರು ನೀಡಲಾಗಿದೆ ಎಂಬ ಸಂದೇಶವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಈ ನಡುವೆ ದೇವಸ್ಥಾನದ ಈ ಕ್ರಮವನ್ನು, ದಲಿತ ಹಕ್ಕುಗಳ ಹೋರಾಟದ ರಾಜ್ಯ ಸಮಿತಿ ಸದಸ್ಯರಾಗಿರುವ ಶೇಖರ್ ಲಾಯಿಲ ಅವರು ಸ್ವಾಗತಿಸಿದ್ದಾರೆ. ಘಟನೆಗೆ ಕುರಿತು ಮಾಧ್ಯಮದೊಂದಿಗೆ ಮಾತನಾಡಿದ ಅವರು, ಶಾಸಕರಿಗೆ ದೇವರ ಪಲ್ಲಕ್ಕಿ ಹೊರಲು ಅವಕಾಶ ಕೊಟ್ಟಿದ್ದು ಒಳ್ಳೆಯ ಬೆಳವಣಿಗೆಯಾಗಿದೆ. ಈ ಕ್ರಮವನ್ನು ದಲಿತ ಸಮುದಾಯಕ್ಕೂ ವಿಸ್ತರಿಸಬೇಕು. ಮುಂದಿನ 24 ರ ಬುಧವಾರದಂದು ‘ಪಂಚಮಿ ಉತ್ಸವ’ ನಡೆಯಲಿದ್ದು, ಅಂದು ದಲಿತರಿಗೆ ದೇವರ ಪಲ್ಲಕ್ಕಿ ಹೊರಲು ಅವಕಾಶ ನೀಡಬೇಕು” ಎಂದು ಆಗ್ರಹಿಸಿದ್ದಾರೆ.
ಈ ಬಗ್ಗೆ ದೇವಾಲಯದ ಆಡಳಿತ ಮೊಕ್ತೇಸರರಾಗಿರುವ ಸುಧೀರ್ ಪ್ರಭು ಪ್ರತಿಕ್ರಿಯಿಸಿ, ದೇವಾಲಯದ ಆಡಳಿತ ಸಮಿತಿಯ ಗಮನಕ್ಕೆ ತರದೆ ಶಾಸಕ ಹರೀಶ್ ಪೂಂಜಾ ಅವರ ಕೈಯ್ಯಲ್ಲಿ ಪಲ್ಲಕ್ಕಿ ಹೊರಿಸಲಾಗಿದೆ. ಆದರೆ ಸೋಷಿಯಲ್ ಮಿಡಿಯಾದಲ್ಲಿ ಹರಿದಾಡುತ್ತಿರುವಂತೆ, ಆಲ್ ಟೆಂಪಲ್ ಅಸೋಷಿಯೇಷನ್ ಕಡೆಯಿಂದ ನಮಗೆ ಯಾವುದೇ ಸಂದೇಶ ಬಂದಿಲ್ಲ. ಹೀಗೊಂದು ಘಟನೆ ನಡೆದಿದೆ ಎಂದಷ್ಟೇ ಈಗ ತಿಳಿದುಬಂದಿದೆ. ಜೊತೆಗೆ ಉತ್ಸವ ಇನ್ನೂ ಮುಗಿದಿಲ್ಲ, ಎಲ್ಲವೂ ಮುಗಿದ ನಂತರ ನಡೆಯುವ ಸಭೆಯಲ್ಲಿ ಪಲ್ಲಕ್ಕಿ ಹೊರಿಸಿದ ವಿಷಯವೂ ಚರ್ಚೆಗೆ ಬರಬಹುದು. ಆದ್ದರಿಂದ ಈ ಬಗ್ಗೆ ಯಾವುದೆ ಪ್ರತಿಕ್ರಿಯೆ ನೀಡಲು ಸಾಧ್ಯವಿಲ್ಲ” ಎಂದು ಹೇಳಿದ್ದಾರೆ.
ದಲಿತರಿಗೂ ದೇವರ ಪಲ್ಲಕ್ಕಿ ಹೊರಲು ಅವಕಾಶ ನೀಡುವ ಬಗ್ಗೆ ಪ್ರತಿಕ್ರಿಯಿಸಿದ ಅವರು, “ಶಾಸಕರಿಗೆ ಪಲ್ಲಕ್ಕಿ ಹೊರಲು ಅವಕಾಶವನ್ನು ಆಡಳಿತ ಮಂಡಳಿ ನೀಡಿಲ್ಲ. ಆ ಸಂದರ್ಭದಲ್ಲಿ ಶಾಸಕರು ಇದ್ದರು, ಆಗ ಅವರಿಗೆ ಪಲ್ಲಕ್ಕಿ ಹೊರಲು ಅವಕಾಶ ನೀಡಲಾಗಿದೆ. ನಮ್ಮ ಜಿಎಸ್ ಬಿ ಸಮುದಾಯದ ಕೆಲವು ಸಂಪ್ರದಾಯವಿದೆ. ದಲಿತರಿಗೆ ನೀಡುವ ಬಗ್ಗೆ ಮುಂದಿನ ದಿನಗಳಲ್ಲಿ ಹಿರಿಯರು ಚರ್ಚೆ ಮಾಡಿ ತೀರ್ಮಾನ ತೆಗೆದುಕೊಳ್ಳುತ್ತಾರೆ” ಎಂದು ಹೇಳಿದ್ದಾರೆ.
ಈ ಬಗ್ಗೆ ಪತ್ರಕರ್ತರು ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಅವರಿಗೆ ಸಂಪರ್ಕಿಸಲು ಪ್ರಯತ್ನಿಸಿದ್ದು ಅವರ ಸಂಪರ್ಕ ಲಭ್ಯವಾಗಿಲ್ಲ. ಘಟನೆಯ ಹೆಚ್ಚಿನ ಮಾಹಿತಿ ಇನ್ನಷ್ಟೇ ಲಭ್ಯವಾಗಬೇಕಾಗಿದೆ.