ಬೆಂಗಳೂರು: ಕೊಪ್ಪಳದಲ್ಲಿ ದಲಿತ ಮಹಿಳೆಯ ಹಸು ತನ್ನ ತೋಟಕ್ಕೆ ಪ್ರವೇಶಿಸಿತು ಎಂದು ಆಕೆಯನ್ನು ಮೇಲ್ಜಾತಿಯ ವ್ಯಕ್ತಿ ಚಪ್ಪಲಿಯಿಂದ ಹೊಡೆದಿರುವುದು ಅತ್ಯಂತ ಅಮಾನವೀಯ ಕೃತ್ಯ. ಜಾತಿ ಪೋಷಿಸುವ ರಾಜಕೀಯ ಪಕ್ಷಗಳೇ ಇಂತಹ ಘಟನೆಗಳಿಗೆ ಹೊಣೆ ಎಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್’ಡಿಪಿಐ) ಪಕ್ಷದ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಮೈಸೂರು ಹೇಳಿದ್ದಾರೆ.
ಈ ಬಗ್ಗೆ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, ದೇಶಕ್ಕೆ ಸ್ವಾತಂತ್ರ್ಯ ದೊರೆತು 75 ವರ್ಷ ಕಳೆದಿದ್ದರೂ ಜಾತಿಯೆಂಬ ಅನಿಷ್ಠ ಮನಸ್ಥಿತಿ ಇನ್ನೂ ಹಾಗೆಯೇ ಉಳಿದಿರುವುದು ನಮ್ಮ ದೇಶದ ದುರಂತ. ಕೊಪ್ಪಳ ಜಿಲ್ಲೆಯಲ್ಲಿ ದಲಿತ ಮಹಿಳೆಯ ಹಸು ತನ್ನ ತೋಟಕ್ಕೆ ಪ್ರವೇಶಿಸಿತು ಎಂದು ಆಕೆಯನ್ನು ಜಾತಿ ಹೆಸರಿಸಿ ಅವಾಚ್ಯ ಶಬ್ದಗಳಿಂದ ನಿಂದಿಸಿ, ಚಪ್ಪಲಿಯಿಂದ ಹೊಡೆದಿರುವ ಘಟನೆ ಆತ್ಯಂತ ಖಂಡನೀಯ. ನಾವೆಲ್ಲರೂ ತಲೆತಗ್ಗಿಸುವಂಥದ್ದು. ಜಾತಿ ವ್ಯವಸ್ಥೆಯನ್ನು ತಮ್ಮ ರಾಜಕೀಯ ಲಾಭಗಳಿಗೆ ಪೋಷಿಸಿಕೊಂಡು ಬಂದಿರುವ ರಾಜಕೀಯ ಪಕ್ಷಗಳು, ಅದರಲ್ಲೂ ಬಿಜೆಪಿಯಂತಹ ಮನುವಾದಿ ಪಕ್ಷಗಳೇ ಇಂತಹ ಘಟನೆಗಳಿಗೆ ಹೊಣೆ ಎಂದು ಹೇಳಿದ್ದಾರೆ.
ಕೊಪ್ಪಳ ಜಿಲ್ಲೆಯ ರಾಂಪುರ ಗ್ರಾಮದಲ್ಲಿ 30 ವರ್ಷದ ದಲಿತ ಮಹಿಳೆ ಶೋಭಮ್ಮ ಹರಿಜನ್ ಅವರ ಮೇಲೆ ಜಾತಿವಾದಿ ಅಮರೇಶ್ ಕುಂಬಾರ್ ಈ ಅಮಾನವೀಯ ಕ್ರೌರ್ಯ ಮೆರೆದಿದ್ದಾನೆ. ರಾಜ್ಯದಲ್ಲಿ ಸರ್ಕಾರ ಇದ್ದೂ ಇಲ್ಲದಂತ ಸ್ಥಿತಿ ನಿರ್ಮಾಣವಾಗಿದೆ. ಬೊಮ್ಮಾಯಿ ಅವರ ಸರ್ಕಾರ ಕಮಿಷನ್, ದ್ವೇಷ ಬಿತ್ತನೆ, ರಾಜಕೀಯ ವಿರೋಧಿಗಳ ವಿರುದ್ಧ ಷಡ್ಯಂತ್ರ ರೂಪಿಸುವುದರಲ್ಲಿ ವ್ಯಸ್ತವಾಗಿದ್ದು, ಎಲ್ಲೋ ಕೇಳಿದ್ದ ‘ಜಂಗಲ್ ರಾಜ್’ ನಮ್ಮ ರಾಜ್ಯದಲ್ಲಿ ನೋಡಬೇಕಾದ ದುರ್ವಿಧಿ ನಮಗೆಲ್ಲ ಒದಗಿ ಬಂದಿದೆ ಎಂದು ಅವರು ಹೇಳಿದ್ದಾರೆ.
ಭಾರತದಲ್ಲಿ ಪ್ರತಿದಿನ ಸುಮಾರು 140 ದಲಿತ ದೌರ್ಜನ್ಯ ಪ್ರಕರಣಗಳು ಅಧಿಕೃತವಾಗಿಯೇ ದಾಖಲಾಗುತ್ತವೆ. ಮೋದಿ ನೇತೃತ್ವದ ಮನುವಾದಿ ಬಿಜೆಪಿ ಸರ್ಕಾರ ಆಡಳಿತ ಹಿಡಿದ ಮೇಲೆ ಆ ಸಂಖ್ಯೆ ದಿನದಿಂದ ದಿನಕ್ಕೆ ಏರುತ್ತಲೇ ಇದೆ. ಆದರೆ ಅವುಗಳಲ್ಲಿ ಶಿಕ್ಷೆಗೆ ಒಳಗಾಗುವ ಪ್ರಮಾಣ ಕೇವಲ 7% ಮಾತ್ರ. ಈ ಅಂಕಿಗಳೇ ಕ್ರೌರ್ಯ ಮೆರೆಯುವವರಿಗೆ ಧೈರ್ಯ ತುಂಬುತ್ತಿವೆ. ಈ ಪ್ರಕರಣವು ಕೂಡ ಅದೇ ಹಾದಿ ಹಿಡಿಯದೆ ನೊಂದ ಮಹಿಳೆಗೆ ಸೂಕ್ತ ನ್ಯಾಯ ಸಿಗಬೇಕು ಮತ್ತು ಇಂತಹ ನೀಚ ಕೃತ್ಯ ಎಸಗಿದ ವ್ಯಕ್ತಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಮಜೀದ್ ಅವರು ಪ್ರಕಟಣೆಯ ಮೂಲಕ ಆಗ್ರಹಿಸಿದ್ದಾರೆ.