ದಲಿತ ವಿದ್ಯಾರ್ಥಿಯನ್ನು ಥಳಿಸಿದ ಶಿಕ್ಷಕ: ವಿದ್ಯಾರ್ಥಿ ಸಾವು

Prasthutha|

ಲಕ್ನೋ: ದಲಿತ ವಿದ್ಯಾರ್ಥಿಯನ್ನು ಶಿಕ್ಷಕರೊಬ್ಬರು ಥಳಿಸಿದ ಪರಿಣಾಮ ವಿದ್ಯಾರ್ಥಿ ಮೃತ ಪಟ್ಟಿರುವ ಘಟನೆ ಉತ್ತರ ಪ್ರದೇಶದ ಔರೈಯಾ ಜಿಲ್ಲೆಯಲ್ಲಿ ನಡೆದಿದೆ.

- Advertisement -

ಮೃತ ವಿದ್ಯಾರ್ಥಿ ನಿಖಿತ್ ದೋಹ್ರೆ ಔರೈಯ ವೈಶೋಲಿ ಗ್ರಾಮದವನಾಗಿದ್ದು, ಅಚಲ್ಡಾ ಪೊಲೀಸ್ ಠಾಣೆ ವ್ಯಾಪ್ತಿಯ ಫಾನ್ಫುಡ್ ರಸ್ತೆಯಲ್ಲಿರುವ ಆದರ್ಶ ಇಂಟರ್ ಕಾಲೇಜು ಸಂಸ್ಥೆಯ ಶಾಲೆಯಲ್ಲಿ 10ನೇ ತರಗತಿ ವ್ಯಾಸಂಗ ಮಾಡುತ್ತಿದ್ದ.

ಪರೀಕ್ಷೆಯಲ್ಲಿ ತಪ್ಪು ಮಾಡಿದ್ದ ಎಂಬ ಕಾರಣಕ್ಕೆ ಸೆಪ್ಟೆಂಬರ್ 13 ರಂದು ವಿದ್ಯಾರ್ಥಿ ನಿಖಿತ್ ಮೇಲೆ ಶಿಕ್ಷಕ ಅಶ್ವಿನಿ ಸಿಂಗ್ ತೀವ್ರವಾಗಿ ಹಲ್ಲೆ ಮಾಡಿದ್ದಾರೆ.  ಸೋಮವಾರ ಚಿಕಿತ್ಸೆಗಾಗಿ ಇಟಾವಾದ ಸೈಫೈನಲ್ಲಿರುವ ಸರಕಾರಿ ಆಸ್ಪತ್ರೆಗೆ ಸ್ಥಳಾಂತರಿಸುವಾಗ ವಿದ್ಯಾರ್ಥಿ ಆಂಬ್ಯುಲೆನ್ಸ್ ನಲ್ಲಿ ಮೃತಪಟ್ಟಿದ್ದಾನೆ.

- Advertisement -

ಆರೋಪಿ ಶಿಕ್ಷಕನ ವಿರುದ್ಧ ಪ್ರಕರಣ ದಾಖಲಾಗಿದ್ದು, ಶಿಕ್ಷಕನನ್ನು ಅಮಾನತುಗೊಳಿಸಿ, ಪ್ರಕರಣ ದಾಖಲಿಸಲಾಗಿದೆ. ಸದ್ಯ ಆರೋಪಿ ತಲೆಮರೆಸಿಕೊಂಡಿದ್ದಾನೆ ಎಂದು ತಿಳಿದು ಬಂದಿದೆ.

ಈ ಬಗ್ಗೆ  ವಿದ್ಯಾರ್ಥಿಯ ತಂದೆ ರಾಜು ದೊಹ್ರೆ ಶಿಕ್ಷಕ ಅಶ್ವಿನ್ ಸಿಂಗ್ ವಿರುದ್ಧ  ಪ್ರಕರಣ ದಾಖಲಿಸಿದ್ದಾರೆ. ನಿಖಿತ್ ಸಮಾಜ ವಿಜ್ಞಾನ ಪರೀಕ್ಷೆಯಲ್ಲಿ ಒಂದು ಪದವನ್ನು ತಪ್ಪಾಗಿ ಬರೆದಿದ್ದ. ಇದರಿಂದ ಕೆರಳಿರುವ ಅಶ್ವನಿ ಸಿಂಗ್, ನನ್ನ ಮಗನ ತಲೆಗೂದಲು ಹಿಡಿದು ನಿಷ್ಕರುಣೆಯಿಂದ ಥಳಿಸಿದ್ದಾರೆ. ಮೂರ್ಚೆ ತಪ್ಪಿ ನೆಲದ ಮೇಲೆ ಬೀಳುವವರೆಗೆ ಹೊಡೆದಿದ್ದಾರೆ.ಅಲ್ಲದೆ ನ್ಯಾಯ ಕೇಳಲು ಹೋದಾಗ ಶಿಕ್ಷಕ ನಮ್ಮೊಂದಿಗೆ ಅಸಭ್ಯವಾಗಿ ವರ್ತಿಸಿದ್ದರು. ಜಾತಿ ನಿಂದನೆ ಮಾಡಿದ್ದರು ಎಂದು  ರಾಜು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ತಲೆಮರೆಸಿಕೊಂಡಿರುವ ಶಿಕ್ಷಕನ ಬಂಧನಕ್ಕೆ ಮೂರು ತಂಡಗಳನ್ನು ರಚಿಸಲಾಗಿದೆ ಎಂದು ಔರೈಯ ಪೊಲೀಸ್ ವರಿಷ್ಠಾಧಿಕಾರಿ ಚಾರು ನಿಗಮ್ ತಿಳಿಸಿದ್ದಾರೆ.



Join Whatsapp