ಮಧ್ಯಪ್ರದೇಶ: ದೇಶದಲ್ಲಿ ದಲಿತ ದೌರ್ಜನ್ಯ ಮತ್ತು ಅಲ್ಪಸಂಖ್ಯಾತರ ಮೇಲಿನ ಹಲ್ಲೆ ಕೊಲೆಗಳು ಹೆಚ್ಚಾಗುತ್ತಿದ್ದು, ಮಧ್ಯಪ್ರದೇಶದ ದಾಮೋಹ್ ಜಿಲ್ಲೆಯ ದೇವರಾನ್ ಎಂಬಲ್ಲ್ಲಿ ಮೇಲ್ಜಾತಿಯ ಮಹಿಳೆಯನ್ನು ದಿಟ್ಟಿಸಿದ ಎಂಬ ಕ್ಷುಲ್ಲಕ ಆರೋಪದ ಮೇಲೆ ದಲಿತ ಯುವಕನ ಕುಟುಂಬದ ಮೂವರು ಸದಸ್ಯರನ್ನು ಗುಂಡು ಹಾರಿಸಿ ಹತ್ಯೆ ಮಾಡಿರುವ ಆಘಾತಕಾರಿ ಘಟನೆ ಜರುಗಿದೆ.
ಮನಾಕ್ ಅಹಿರ್‌ವಾರ್ ಎಂಬ ದಲಿತ ಯುವಕ ತಮ್ಮ ನೆರಮನೆಯ ಸವರ್ಣೀಯ ಜಗದೀಶ್ ಪಾಟೀಲ್ ಎಂಬಾತನ ಪತ್ನಿಯನ್ನು ದಿಟ್ಟಿಸಿ ನೋಡಿದ ಎಂದು ಆರೋಪಿಸಿ ಸೋಮವಾರ ಸಂಜೆ ಎರಡೂ ಕುಟುಂಬದ ನಡುವೆ ಜಗಳ ನಡೆದಿತ್ತು. ಗ್ರಾಮಸ್ಥರು ಬಂದು ಎರಡೂ ಕುಟುಂಬಗಳನ್ನು ಸಮಾಧಾನಪಡಿಸಿದ್ದರು ಎನ್ನಲಾಗಿದೆ.ಆದರೆ ಮಂಗಳವಾರ ಬೆಳಿಗ್ಗೆ ಜಗದೀಶ್ ಪಾಟೀಲ್ ಮತ್ತು ಇತರ ಐವರು ಬಂದೂಕುಗಳ ಸಹಿತ ಮನಾಕ್ ಅಹಿರ್‌ವಾರ್ ಮನೆಗೆ ನುಗ್ಗಿ ದಾಂಧಲೆ ನಡೆಸಿದ್ದಾರೆ. ಜಗಳ ವಿಕೋಪಕ್ಕೆ ತಿರುಗಿದಾಗ ಮನಾಕ್ ಅಹಿರ್‌ವಾರ್, ಆತನ ತಮ್ಮ ಮಹೇಶ್ ಅಹಿರ್‌ವಾರ್ ಮತ್ತು ಅವರ ತಂದೆ-ತಾಯಿಗಳ ಮೇಲೆ ಗುಂಡು ಹಾರಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಮಹೇಶ್ ಅಹಿರ್‌ವಾರ್ ನೀಡಿದ ದೂರಿನ ಮೇರೆಗೆ ಪೊಲೀಸರು ಕೊಲೆ, ಕೊಲೆಯ ಯತ್ನ ಮತ್ತು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ದೌರ್ಜನ್ಯ ತಡೆ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿಲಾಗಿದೆ. ಜಗದೀಶ್ ಪಟೇಲ್‌ನನ್ನು ಬಂಧಿಸಲಾಗಿದೆ ಮತ್ತು ನಾಪತ್ತೆಯಾಗಿರುವ ಇನ್ನೂ ಐವರಿಗಾಗಿ ಶೋಧ ನಡೆಸಲಾಗುತ್ತಿದೆ ಎಂದು ದಾಮೋಹ್ ಪೊಲೀಸ್ ವರಿಷ್ಠಾಧಿಕಾರಿ ಡಿಆರ್ ತೆನಿವಾರ್ ಹೇಳಿದ್ದಾರೆ.