ಕಾಶಿ: ಉತ್ತರ ಕಾಶಿ ಜಿಲ್ಲೆಯ ಮೋರಿ ವಲಯದ ಸಲ್ರಾ ಗ್ರಾಮದಲ್ಲಿ ಪ್ರಾರ್ಥಿಸಲು ದೇವಾಲಯ ಪ್ರವೇಶಿಸಿದ ದಲಿತನೊಬ್ಬನನ್ನು ಮೇಲ್ಜಾತಿಯವರ ಒಂದು ಗುಂಪು ಥಳಿಸಿದ್ದಲ್ಲದೆ, ಉರಿಯುವ ಕೋಲಿನಿಂದ ಹೊಡೆದು ಬರೆ ಹಾಕಿರುವ ಆಘಾತಕಾರಿ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬೈನೋಲ್ ಗ್ರಾಮದ ಆಯುಶ್ ಎನ್ನುವ 22ರ ಹರೆಯದ ಯುವಕ ದೇವಾಲಯಕ್ಕೆ ಹೋದಾಗ ಈ ಘಟನೆಯು ಜನವರಿ 9ರಂದು ನಡೆದಿದೆ.
ಇಡೀ ರಾತ್ರಿ ನನ್ನನ್ನು ಕಂಬಕ್ಕೆ ಕಟ್ಟಿ ಹಾಕಿ ಹೊಡೆದು ಹಿಂಸಿಸಿದ ಮೇಲ್ಜಾತಿ ಜನರ ಗುಂಪು, ಉರಿಯುವ ಕೊಳ್ಳಿಯಿಂದ ದೇಹದ ಮೇಲೆ ಬರೆಗಳನ್ನು ಹಾಕಿದೆ ಎಂದು ಸಂತ್ರಸ್ತ ಯುವಕನು ಪೊಲೀಸರಿಗೆ ದೂರು ನೀಡಿದ್ದಾನೆ.
ಜನವರಿ 10ರಂದು ಆಯುಶ್ ನನ್ನು ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಒಯ್ಯಲಾಯಿತು. ಆಮೇಲೆ ಹೆಚ್ಚಿನ ಚಿಕಿತ್ಸೆಗಾಗಿ ದೊಡ್ಡ ಆಸ್ಪತ್ರೆಗೆ ಒಯ್ಯಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ದಲಿತನಾಗಿದ್ದೂ ದೇವಾಲಯದೊಳಕ್ಕೆ ಬಂದಿದ್ದೀಯಾ ಎಂದು ಸಿಟ್ಟಿನಿಂದ ಬಯ್ದು ನನ್ನ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಆಯುಶ್ ತಿಳಿಸಿದ್ದಾನೆ.
ಈ ದೂರಿನ ಮೇಲೆ ಊರಿನ ಕೆಲವು ಮಂದಿಯ ಮೇಲೆ ಎಸ್ ಸಿ/ಎಸ್ ಟಿ ದೌರ್ಜನ್ಯ ಕಾಯ್ದೆಯಡಿ ಮೊಕದ್ದಮೆ ಹೂಡಲಾಗಿದೆ ಎಂದು ಉತ್ತರಕಾಶಿಯ ಸೂಪರಿನ್ ಟೆಂಡೆಂಟ್ ಆಫ್ ಪೊಲೀಸ್ ಅರ್ಪಣ್ ಯದುವಂಶಿ ತಿಳಿಸಿದ್ದಾರೆ. ವಲಯ ಅಧಿಕಾರಿ ಪ್ರಶಾಂತ್ ಕುಮಾರ್ ಅವರನ್ನು ತನಿಖೆಗೆ ನೇಮಿಸಲಾಗಿದೆ ಎಂದೂ ಅವರು ಹೇಳಿದರು.