ಅಹಮದಾಬಾದ್ : ಸೈಕಲ್ ರಿಕ್ಷಾ ಚಲಾಯಿಸಲಿಲ್ಲ ಎಂದು ದಲಿತ ವ್ಯಕ್ತಿಯೊಬ್ಬರನ್ನು ಐವರು ದುಷ್ಕರ್ಮಿಗಳು ಅಪಹರಿಸಿ, ಚೂರಿ ಇರಿದು ಹತ್ಯೆ ಮಾಡಿರುವ ಘಟನೆ ಪ್ರಧಾನಿ ನರೇಂದ್ರ ಮೋದಿ ಅವರ ತವರು ರಾಜ್ಯ ಗುಜರಾತ್ ನಲ್ಲಿ ನಡೆದಿದೆ. ಆರೋಪಿಯೊಬ್ಬನ ಸಂಬಂಧಿಕರೊಬ್ಬರಿಗೆ ದಲಿತ ವ್ಯಕ್ತಿಯು ಸೈಕಲ್ ರಿಕ್ಷಾ ಚಲಾಯಿಸಲು ಒಪ್ಪದಿದ್ದುದಕ್ಕೆ ಈ ಕೃತ್ಯ ಎಸಗಲಾಗಿದೆ.
ಘಟನೆಗೆ ಸಂಬಂಧಿಸಿ ನಾಲ್ವರನ್ನು ಬಂಧಿಸಲಾಗಿದೆ. ಗುಜರಾತ್ ನ ಭಾವಾನಗರ ಜಿಲ್ಲೆಯಲ ಜೆಸಾರ್ ತಾಲೂಕಿನ ಮಟಲ್ ಪಾರ್ ಗ್ರಾಮದಲ್ಲಿ ಈ ಘಟನೆ ನಡೆದಿದೆ.
ಸುರೇಶ್ ರಾಥೋಡ್ (22) ಇತ್ತೀಚೆಗೆ ಒಬ್ಬರಿಗೆ ಆಟೊ ಚಲಾಯಿಸಲು ನಿರಾಕರಿಸಿದ್ದರು. ಇದರಿಂದ ಮೂವರು ಆರೋಪಿಗಳಿಗೆ ಇರಿಸುಮುರಿಸಾಗಿತ್ತು. ಇದರಿಂದ ಆಕ್ರೋಶಿತಗೊಂಡು, ಗುರುವಾರ ಆರೋಪಿಗಳು ಸುರೇಶ್ ರಾಥೋಡ್ ರನ್ನು ಅಪಹರಿಸಿ ಹತ್ಯೆ ಮಾಡಿದ್ದಾರೆ ಎನ್ನಲಾಗಿದೆ.
ಆರೋಪಿಗಳು ಒಬಿಸಿ ವರ್ಗಕ್ಕೆ ಸೇರಿದ ಕೋಲಿ ಸಮುದಾಯದವರಾಗಿದ್ದು, ಗುಜರಾತ್ ನ ಜಾತಿ ವ್ಯವಸ್ಥೆಯಲ್ಲಿ ದಲಿತರಿಗಿಂತ ಮೇಲಿನ ಹಂತದ ಸ್ಥಾನ ಹೊಂದಿದ್ದಾರೆ. ಆರೋಪಿಗಳನ್ನು ಹಿಮ್ಮತ್ ಚೂಡಸಮ, ಮುಖೇಶ್ ಬಲಿಯಾ, ಗೋಬರ್ ಬಲಿಯಾ ಎಂದು ಗುರುತಿಸಲಾಗಿದೆ.
ಸುರೇಶ್ ದಲಿತನಾಗಿರುವುದರಿಂದ, ತಾವು ಹೇಳಿದ ಕೆಲಸ ಮಾಡುವುದಕ್ಕೆ ನಿರಾಕರಿಸಿರುವ ಧೈರ್ಯ ತೋರಿದುದಕ್ಕೆ ಆರೋಪಿಗಳು ಈ ಕೃತ್ಯ ಎಸಗಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.