‘ಹಿಂದೂ ಧರ್ಮ ರಕ್ಷಕ’ ಮೋದಿ ಆಡಳಿತದಲ್ಲಿ ದಲಿತರು, ಶೋಷಿತರ ಅಭಿವೃದ್ಧಿ ಸಾಧ್ಯವಿಲ್ಲ: ಬೌದ್ಧ ಧರ್ಮಕ್ಕೆ ಮತಾಂತರಗೊಂಡ ದಲಿತ ನಾಯಕ

Prasthutha|

►’ರೋಮ್ ಹೊತ್ತಿ ಉರಿಯುವಾಗ ಪಿಟೀಲು ಬಾರಿಸಿದ ರಾಜನಂತೆ ಮೋದಿ’

- Advertisement -

►’ಹಿಂದೂ ಧರ್ಮದಲ್ಲಿ ಅಸ್ಪೃಶ್ಯತೆ ಆಚರಣೆಯಿಂದ ಮಾನಸಿಕವಾಗಿ ನೊಂದಿದ್ದೆ’

ಮಂಗಳೂರು: “ನರೇಂದ್ರ ಮೋದಿ ಸರ್ಕಾರದಿಂದ ದಲಿತರು ಮತ್ತು ಇತರ ಯಾವುದೆ ಶೋಷಿತರ ಉದ್ಧಾರ  ಸಾಧ್ಯವಿಲ್ಲ. ಶೋಷಿತ ಸಮುದಾಯಗಳ ಮೇಲೆ ದಾಳಿಗಳೂ ಹೆಚ್ಚಿವೆ. ಮೋದಿ ಅಡಳಿತವನ್ನು ಗಮನಿಸುವಾಗ ಮುಂದೆ ಕೆಲವು ಸಮಯದ ಬಳಿಕ ಹಿಂದೂ ಧರ್ಮವನ್ನು ಹೊರತು ಪಡಿಸಿ ಭಾರತದಲ್ಲಿ ಇತರ ಯಾವುದೇ ಧರ್ಮ ಉಳಿಯುವಂತೆ ಕಾಣುತ್ತಿಲ್ಲ. ರೋಮ್ ನಲ್ಲಿ ಜನರು ಹೊಟ್ಟೆಗೆ ಹಿಟ್ಟು ಕೊಡಿ ಎಂದು ಕೇಳುತ್ತಿದ್ದಾಗ ಅಲ್ಲಿನ ರಾಜ ಪಿಟೀಲು ಬಾರಿಸುತ್ತಿದ್ದನಂತೆ. ನಮ್ಮ ದೇಶದಲ್ಲಿ ಜನರು ಸಂಕಷ್ಟದಲ್ಲಿರುವ ಸಂದರ್ಭದಲ್ಲಿ ನರೇಂದ್ರ ಮೋದಿಯವರು ಏನೇನನೋ ವಿಷಯಗಳನ್ನು ಮುನ್ನೆಲೆಗೆ ತಂದು ಜನರ ಗಮನವನ್ನು ಬೇರೆಡೆಗೆ ತಿರುಗಿಸುತ್ತಿದ್ದಾರೆ” ಎಂದು ಉಡುಪಿಯಲ್ಲಿ ನಿನ್ನೆ ಬೌದ್ಧ ಧರ್ಮ ಸ್ವೀಕರಿಸಿದ ದಲಿತರಲ್ಲೊಬ್ಬರಾದ ಶೇಖರ್ ಹಾವಂಜೆ ‘ಪ್ರಸ್ತುತ’ ನ್ಯೂಸ್ ಪೋರ್ಟಲ್ ಗೆ ತಿಳಿಸಿದ್ದಾರೆ.

- Advertisement -

‘ಪ್ರಸ್ತುತ ದೇಶದಲ್ಲಿ ‘ಹಿಂದೂ ರಕ್ಷಕ’ನಾಗಿ ಬಿಂಬಿಸಲ್ಪಡುವ ನರೇಂದ್ರ ಮೋದಿ ಅಧಿಕಾರದಲ್ಲಿರುವಾಗ ಹಿಂದೂ ಧರ್ಮ ತೊರೆದು ಬೌದ್ಧ ಧರ್ಮವನ್ನು ಅಪ್ಪಿಕೊಳ್ಳಲು ಕಾರಣವೇನು?’ ಎಂದು ಕೇಳಲಾದಾಗ ಅವರು ಈ ರೀತಿಯಲ್ಲಿ ಉತ್ತರಿಸಿದ್ದಾರೆ.

ಕರ್ನಾಟಕ ದಲಿತ ಸಂಘರ್ಷ ಸಮಿತಿ, ಭೀಮವಾದ ಇದರ ರಾಜ್ಯ ಸಂಘಟನಾ ಸಂಚಾಲಕರಾಗಿರುವ ಶೇಖರ್ ಹಾವಂಜೆ, ಅ.19ರಂದು ಉಡುಪಿಯ ಬೌದ್ಧ ಮಹಾಸಭಾ ಆಯೋಜಿಸಿದ್ದ ಅಂಬೇಡ್ಕರ್ ಚಕ್ರ ಪ್ರವರ್ತನಾ ದಿನ ಕಾರ್ಯಕ್ರಮದಲ್ಲಿ ಪತ್ನಿ ಮತ್ತು ಇಬ್ಬರು ಮಕ್ಕಳೊಂದಿಗೆ ಬೌದ್ಧ ಧರ್ಮಕ್ಕೆ ಮತಾಂತರಗೊಂಡಿದ್ದರು. ಈ ಕಾರ್ಯಕ್ರಮದಲ್ಲಿ ಒಟ್ಟು 50 ಮಂದಿ ದಲಿತರು ಹಿಂದೂ ಧರ್ಮ ತೊರೆದು  ಬೌದ್ಧ ಸ್ವೀಕರಿಸಿದ್ದರು.

“ನಾವು ಹಿಂದೂ ಧರ್ಮದಲ್ಲಿ ಅಸ್ಪೃಶ್ಯರಾಗಿದ್ದೆವು. ಯಾರೂ ನಮ್ಮನ್ನು ಮುಟ್ಟುತ್ತಿರಲಿಲ್ಲ ಮತ್ತು ನಾವು ಯಾರನ್ನೂ ಮುಟ್ಟುವಂತಿಲ್ಲ. ಈ ರೀತಿಯ ಅಸ್ಪೃಶ್ಯತೆಯ ಆಚರಣೆಯಿಂದ ನಾವು ಮಾನಸಿಕವಾಗಿ ಕುಂದಿದ್ದೆವು. ಕಳೆದ ಹದಿನೈದು ವರ್ಷಗಳಿಂದ ಹಿಂದೂ ಧರ್ಮದ ಯಾವುದೇ ಆಚರಣೆಯನ್ನು ನಮ್ಮ ಮನೆಯಲ್ಲಿ ನಡೆಸುವುದನ್ನು ನಾನು ಬಿಟ್ಟುಬಿಟ್ಟಿದ್ದೆ ಮತ್ತು ಅಂಬೇಡ್ಕರ್ ವಿಚಾರಗಳನ್ನು ಅನುಸರಿಸುತ್ತಿದ್ದೆ” ಎಂದು ಅವರು ಹೇಳಿದರು.

ಬೌದ್ಧ ಧರ್ಮದಲ್ಲಿರುವ ಸಮಾನತೆ ಮತ್ತು ಕ್ಷಮಾ ಗುಣವು ತನ್ನನ್ನು ಆ ಧರ್ಮದತ್ತ ಸೆಳೆಯಿತು ಎಂದು ಅವರು ಹೇಳಿದ್ದಾರೆ.



Join Whatsapp