ದಕ್ಷಿಣ ಕನ್ನಡ ಲೋಕಸಭೆ: ಕಾಂಗ್ರೆಸ್ ಅಭ್ಯರ್ಥಿಯಾಗಲಿದ್ದಾರಾ ಇನಾಯತ್ ಅಲಿ?

Prasthutha|

►ಕೈ ಟಿಕೆಟ್ ರೇಸ್’ನಲ್ಲಿ ರಮಾನಾಥ ರೈ, ರಕ್ಷಿತ್ ಶಿವರಾಂ, ಪದ್ಮರಾಜ್, ವಿವೇಕ್ ರಾಜ್ ಪೂಜಾರಿ..?

- Advertisement -

ಮಂಗಳೂರು: 2024ರ ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದು, ಎಲ್ಲಾ ಪಕ್ಷಗಳು ಲೋಕಸಭಾ ಚುನಾವಣೆಗೆ ಅಣಿಯಾಗುತ್ತಿದೆ. ಕರ್ನಾಟಕದಲ್ಲಿ ಹೆಚ್ಚು ಸ್ಥಾನ ಗೆಲ್ಲುವ ಗುರಿ ಹೊಂದಿರುವ ಕಾಂಗ್ರೆಸ್ ಪಕ್ಷ ಅಭ್ಯರ್ಥಿಗಳ ಆಯ್ಕೆ ಬಗ್ಗೆ ಗಮನ ಹರಿಸಿದ್ದು, ಈಗಾಗಲೇ ಪ್ರತಿ ಲೋಕಸಭಾ ಕ್ಷೇತ್ರಗಳಿಗೂ ವೀಕ್ಷಕರನ್ನು ಕಳುಹಿಸಿ ಕೊಟ್ಟು ಅಭ್ಯರ್ಥಿ ಆಯ್ಕೆ ಪ್ರಕ್ರಿಯೆ ಆರಂಭಿಸಿದೆ. ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ವೀಕ್ಷಕರಾಗಿರುವ ಸಚಿವ ಮಧು ಬಂಗಾರಪ್ಪ ಈಗಾಗಲೇ ಒಂದು ಸುತ್ತಿನ ಸಭೆ ನಡೆಸಿ ಜಿಲ್ಲಾ ಮಟ್ಟದ ನಾಯಕರ ಅಭಿಪ್ರಾಯಗಳನ್ನು ಸಂಗ್ರಹಿಸಿದ್ದಾರೆ. ಮುಂದಿನ ದಿನಗಳಲ್ಲಿ ಪ್ರತಿ ವಿಧಾನಸಭಾ ಕ್ಷೇತ್ರಗಳು ಮತ್ತು ಬ್ಲಾಕ್ ಮಟ್ಟದ ನಾಯಕರು ಮತ್ತು ಕಾರ್ಯಕರ್ತರ ಸಭೆ ನಡೆಸಿ ಕೆಪಿಸಿಸಿಗೆ ವರದಿ ನೀಡಲಿದ್ದಾರೆ.


ಸದ್ಯ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಸಂಭಾವ್ಯ ಅಭ್ಯರ್ಥಿಯಾಗಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ ಹೆಸರು ಮುಂಚೂಣಿಯಲ್ಲಿದೆ. ಈ ಬಾರಿ ಮುಸ್ಲಿಮರಿಗೆ ಒಂದು ಅವಕಾಶ ನೀಡಬೇಕು ಎಂಬ ಆಗ್ರಹ ಜೋರಾಗಿ ಕೇಳಿಬರುತ್ತಿದೆ. ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಮುಸ್ಲಿಮರು ಅಧಿಕ ಸಂಖ್ಯೆಯಲ್ಲಿದ್ದು, ಸುಮಾರು 5 ಲಕ್ಷ ಮುಸ್ಲಿಂ ಮತದಾರರಿದ್ದಾರೆ. ಆದರೆ ಈವರೆಗೆ ಒಮ್ಮೆಯೂ ಈ ಕ್ಷೇತ್ರದಲ್ಲಿ ಮುಸ್ಲಿಮರಿಗೆ ಅವಕಾಶ ಸಿಕ್ಕಿಲ್ಲ. ಕ್ಷೇತ್ರದಲ್ಲಿ ಕಳೆದ ಮೂರು ದಶಕಗಳಿಂದ ಕಾಂಗ್ರೆಸ್ ಸತತವಾಗಿ ಸೋಲುತ್ತಲೇ ಬಂದಿದ್ದು, ಈ ಕಾರಣಕ್ಕೆ ಈ ಬಾರಿ ಮುಸ್ಲಿಮರಿಗೆ ಟಿಕೆಟ್ ಕೊಟ್ಟು ಹೊಸ ಪ್ರಯೋಗ ಮಾಡಬೇಕು ಎಂಬ ಆಗ್ರಹ ಕೇಳಿಬರುತ್ತಿದೆ.

- Advertisement -


ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸೋತರೂ ಇನಾಯತ್ ಅಲಿ ಅವರು ಜಿಲ್ಲೆಯ ಪ್ರಭಾವಿ ನಾಯಕರಾಗಿ ಹೊರಹೊಮ್ಮಿದ್ದಾರೆ. ತಮ್ಮ ಸೇವಾ ಕಾರ್ಯಗಳು ಮತ್ತು ನಡತೆಯಿಂದ ಅವರು ಎಲ್ಲ ಸಮುದಾಯಗಳ ಪ್ರೀತಿಗೆ ಪಾತ್ರರಾಗಿದ್ದಾರೆ. ಕೇವಲ ಮುಸ್ಲಿಂ ಸಮುದಾಯಕ್ಕೆ ಸೀಮಿತರಾಗದೆ ಎಲ್ಲಾ ವರ್ಗದ ಜನರ ಬೆಂಬಲ ಪಡೆಯುತ್ತಿದ್ದು, ಜನರಲ್ಲಿ ಅವರ ಬಗ್ಗೆ ಉತ್ತಮ ಅಭಿಪ್ರಾಯ ಇದೆ. ಈ ಕಾರಣಕ್ಕೆ ಇನಾಯತ್ ಅಲಿ ಅವರಿಗೆ ಲೋಕಸಭಾ ಟಿಕೆಟ್ ಸಿಗಬೇಕು ಎಂಬ ಆಗ್ರಹ ಕೇಳಿಬರುತ್ತಿದೆ. ಇನಾಯತ್ ಅಲಿ ಅವರಿಗೆ ಹೈಕಮಾಂಡ್ ಮಟ್ಟದ ಉನ್ನತ ನಾಯಕರ ಜೊತೆ ಸಂಪರ್ಕ ಮತ್ತು ಉತ್ತಮ ಒಡನಾಟ ಇರುವುದರಿಂದ ಕಾಂಗ್ರೆಸ್ ಪಕ್ಷ ಈ ಬಾರಿ ಅವರಿಗೆ ಮಣೆ ಹಾಕುವ ಸಾಧ್ಯತೆ ಇದೆ.


ಕಾಂಗ್ರೆಸ್ ಟಿಕೆಟ್ ರೇಸ್’ನಲ್ಲಿ ಬಿಲ್ಲವ ಸಮುದಾಯದ ರಕ್ಷಿತ್ ಶಿವರಾಂ, ಪದ್ಮರಾಜ್ ಮತ್ತು ವಿವೇಕ್ ರಾಜ್ ಪೂಜಾರಿ ಹೆಸರು ಕೂಡ ಕೇಳಿಬರ್ತಿದೆ. ಬಿಲ್ಲವ ಸಮುದಾಯದ ಸಜ್ಜನ ರಾಜಕಾರಣಿ ರಕ್ಷಿತ್ ಶಿವರಾಂ ಅವರನ್ನು ಕಾಂಗ್ರೆಸ್ ಕಣಕ್ಕಿಳಿಸಿದರೆ ಗೆಲ್ಲುವ ಅವಕಾಶ ಇದೆ ಎಂಬ ಮಾತುಗಳು ಕೇಳಿಬರ್ತಿವೆ.


ರಕ್ಷಿತ್ ಶಿವರಾಂ ಅವರು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಗಳಾಗಿದ್ದು ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬೆಳ್ತಂಗಡಿ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದರು. ಚುನಾವಣೆಯಲ್ಲಿ ಸೋತರೂ ಪ್ರಬಲ ಪೈಪೋಟಿ ನೀಡಿದ್ದಾರೆ. ಕ್ಷೇತ್ರ ಮತ್ತು ಕಾರ್ಯಕರ್ತರ ಜೊತೆ ನಿರಂತರ ಸಂಪರ್ಕದಲ್ಲಿದ್ದಾರೆ. ಕಾಂಗ್ರೆಸ್’ನಿಂದ ದೂರವಾಗಿ ಬಿಜೆಪಿಗೆ ಬೆಂಬಲಿಸುತ್ತಿರುವ ಬಹುಸಂಖ್ಯಾತ ಬಿಲ್ಲವರ ಮತಗಳನ್ನು ಮರಳಿ ಕಾಂಗ್ರೆಸ್ ಕಡೆಗೆ ಸೆಳೆಯಲು ರಕ್ಷಿತ್ ಶಿವರಾಂ ಸೂಕ್ತ ಅಭ್ಯರ್ಥಿ ಎಂಬ ಅಭಿಪ್ರಾಯಗಳು ವ್ಯಕ್ತವಾಗುತ್ತಿದೆ. ರಕ್ಷಿತ್ ಶಿವರಾಂ ಸ್ಪರ್ಧೆಗೆ ಹಿಂದೇಟು ಹಾಕಿದರೆ ಬಿಲ್ಲವ ಸಮುದಾಯದ ಆರ್, ಪದ್ಮರಾಜ್ ಅಥವಾ ವಿವೇಕ್ ರಾಜ್ ಪೂಜಾರಿ ಅವರನ್ನು ಕಣಕ್ಕಿಳಿಸಿದರೆ ಉತ್ತಮ ಎಂಬ ಚರ್ಚೆಗಳು ನಡೆಯುತ್ತಿದೆ. ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಆರ್ ಪದ್ಮರಾಜ್ ಅವರು ಮಾಜಿ ಕೇಂದ್ರ ಮಂತ್ರಿ ಜನಾರ್ದನ ಪೂಜಾರಿ ಅವರ ಆಪ್ತನಾಗಿದ್ದು, ಕುದ್ರೋಳಿ ದೇವಸ್ಥಾನದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಬಿಲ್ಲವ ಸಮುದಾಯದ ಪ್ರಭಾವಿ ಮುಖಂಡರಾಗಿ ಬೆಳೆದು ನಿಂತಿದ್ದಾರೆ. ವಿವೇಕ್ ರಾಜ್ ಪೂಜಾರಿ ಯುವ ಉದ್ಯಮಿಯಾಗಿದ್ದು, ತಮ್ಮ ಸೇವಾ ಕಾರ್ಯಗಳ ಮೂಲಕ ಬಿಲ್ಲವ ಸಮುದಾಯದಲ್ಲಿ ಮನೆಮಾತಾಗಿದ್ದಾರೆ. ಸದ್ಯಕ್ಕೆ ಬಿಲ್ಲವ ಸಮುದಾಯದ ಈ ಮೂವರ ಹೆಸರು ಕಾಂಗ್ರೆಸ್ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿಯಲ್ಲಿದೆ.


ಇನ್ನೊಂದೆಡೆ ಹೊಸ ಮುಖಗಳ ಬದಲಾಗಿ ಹಳಬರಿಗೆ ಮಣೆ ಹಾಕಬೇಕು ಎಂಬ ಆಗ್ರಹ ಕೇಳಿಬರುತ್ತಿದೆ. 2019ರ ಲೋಕಸಭಾ ಚುನಾವಣೆಯಲ್ಲಿ ಯುವ ಮುಖಂಡ ಮಿಥುನ್ ರೈ ಅವರನ್ನು ಸ್ಪರ್ಧೆಗಿಳಿಸಿದರೂ ಇತಿಹಾಸದಲ್ಲೇ ಅತಿ ಹೀನಾಯವಾದ ಸೋಲು ಎದುರಾಗಿತ್ತು. ಆ ಕಾರಣಕ್ಕೆ ಯುವ ಮತ್ತು ಹೊಸ ಮುಖಗಳ ಬದಲಾಗಿ ಅನುಭವಿ ಹಿರಿಯ ರಾಜಕಾರಣಿಗಳಿಗೆ ಟಿಕೆಟ್ ನೀಡಬೇಕು ಎಂದು ಹಿರಿಯ ಮುಖಂಡರು ಆಗ್ರಹಿಸುತ್ತಿದ್ದಾರೆ. ಹಿರಿಯ ಮುಖಂಡರಲ್ಲಿ ಮಾಜಿ ಸಚಿವ ರಮನಾಥ ರೈ ಅವರ ಹೆಸರು ಮುಂಚೂಣಿಯಲ್ಲಿದೆ.


ರಮನಾಥ ರೈ ಕರಾವಳಿ ಭಾಗದ ಪ್ರಭಾವಿ ಮತ್ತು ಅನುಭವಿ ರಾಜಕಾರಣಿಯಾಗಿದ್ದು, 6 ಬಾರಿ ಶಾಸಕರಾಗಿ, ಮೂರು ಬಾರಿ ಸಚಿವರಾಗಿ, ಎರಡು ಅವಧಿಗೆ ದಕ್ಷಿಣ ಕನ್ನಡ ಜಿಲ್ಲೆಯ ಉಸ್ತುವಾರಿ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ. ರಮನಾಥ ರೈ ಅವರು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಜಿಲ್ಲೆಯಲ್ಲಿ ಕಾಂಗ್ರೆಸ್ ಉತ್ತಮ ಸಾಧನೆ ಮಾಡಿತ್ತು. ಜಿಲ್ಲೆಯ ಪ್ರತಿ ವಿಧಾನಸಭಾ ಕ್ಷೇತ್ರಗಳಲ್ಲಿ, ಬ್ಲಾಕ್ ಮಟ್ಟದಲ್ಲಿ ರಮನಾಥ ರೈ ಅವರ ಬೆಂಬಲಿಗರಿದ್ದು, ಅವರ ಜೊತೆ ರೈ ಅವರಿಗೆ ಈಗಲೂ ಸಂಪರ್ಕ ಇದೆ. ಇದೆಲ್ಲ ಚುನಾವಣೆಯಲ್ಲಿ ಪ್ರಯೋಜನ ತರಬಹುದು ಎಂಬ ಲೆಕ್ಕಾಚಾರ ಕೂಡ ಇದೆ.


ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರ ಬಿಜೆಪಿಯ ಭದ್ರಕೋಟೆ ಆಗಿರುವುದರಿಂದ ಕಾಂಗ್ರೆಸ್ ಪಕ್ಷದಲ್ಲಿ ಟಿಕೆಟ್ ಪಡೆಯಲು ತುರುಸಿನ ಪೈಪೋಟಿ ನಡೆಯುತ್ತಿಲ್ಲ. ಆದರೆ ಒಂದಷ್ಟು ಆಗ್ರಹಗಳು ಕೇಳಿಬರುತ್ತಿದೆ. ಒಂದಷ್ಟು ಲೆಕ್ಕಾಚಾರಗಳು ಓಡಾಡಲು ಆರಂಭಿಸಿವೆ. ಈ ಬಾರಿ ಮುಸ್ಲಿಮರಿಗೆ ಟಿಕೆಟ್ ನೀಡಬೇಕು ಎಂಬ ಆಗ್ರಹಕ್ಕೆ ಹೈಕಮಾಂಡ್ ಮನ್ನಣೆ ನೀಡಿದರೆ ಇನಾಯತ್ ಅಲಿ ಕಾಂಗ್ರೆಸ್ ಅಭ್ಯರ್ಥಿಯಾಗುವ ಸಾಧ್ಯತೆ ಇದೆ. ಬಿಲ್ಲವರನ್ನು ಕಣಕ್ಕಿಳಿಸುವ ತೀರ್ಮಾನ ತೆಗೆದುಕೊಂಡರೆ ರಕ್ಷಿತ್ ಶಿವರಾಂ ಅಥವಾ ವಿವೇಕ್ ರಾಜ್ ಪೂಜಾರಿ ಇಬ್ಬರಲ್ಲಿ ಒಬ್ಬರು ಅಭ್ಯರ್ಥಿಯಾಗಬಹುದು. ಹಿರಿಯ ಮುಖಂಡರಿಗೆ ಮಣೆ ಹಾಕಿದರೆ ರಮನಾಥ ರೈ ಸ್ಪರ್ಧೆ ಮಾಡುತ್ತಾರೆ ಎಂಬ ಮಾತುಗಳು ಕೇಳಿಬರ್ತಿದೆ.


ಅಂತಿಮವಾಗಿ ಕಾಂಗ್ರೆಸ್ ಹೈಕಮಾಂಡ್ ಅಭ್ಯರ್ಥಿ ಯಾರೆಂಬ ತೀರ್ಮಾನ ತೆಗೆದುಕೊಳ್ಳಲಿದೆ. ಈ ಐವರಲ್ಲಿ ಒಬ್ಬರು ಲೋಕಸಭಾ ಚುನಾವಣೆಯಲ್ಲಿ ದಕ್ಷಿಣ ಕನ್ನಡ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗುವುದು ಖಚಿತ ಎನ್ನಲಾಗುತ್ತಿದೆ.



Join Whatsapp