ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಾರದಲ್ಲಿ ಎರಡು ದಿನ ಮಾತ್ರ ದಿನಸಿ ವಸ್ತುಗಳ ಖರೀದಿಗೆ ಅವಕಾಶ ನೀಡಿದ್ದಾರೆ ಎನ್ನುವ ಸುದ್ದಿಯೊಂದು ಜಿಲ್ಲೆಯಲ್ಲಿ ಇಂದು ಹರಿದಾಡುತ್ತಿದ್ದು, ಇದು ಸತ್ಯಕ್ಕೆ ದೂರವಾದ ವಿಷಯ ಎಂದು ಜಿಲ್ಲಾಧಿಕಾರಿ ಡಾ. ಕೆ ವಿ ರಾಜೇಂದ್ರ ಅವರು ಸ್ಪಷ್ಟಪಡಿಸಿದ್ದಾರೆ.
ದಕ್ಷಿಣ ಜಿಲ್ಲೆಯಲ್ಲಿ ಈಗ ಹಿಂದೆಯೇ ಬಿಡುಗಡೆಗೊಳಿಸಿರುವ ಕೋವಿಡ್ ಲಾಕ್ ಡೌನ್ ಮಾರ್ಗಸೂಚಿ ಮುಂದುವರೆಯಲಿದ್ದು, ಹೊಸದಾಗಿ ಯಾವುದೇ ಮಾರ್ಗಸೂಚಿ ಪ್ರಕಟಿಸಿಲ್ಲ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ. ಮೇ 24 ರವರೆಗೂ ಈಗಿರುವ ಆದೇಶನೇ ಜಾರಿಯಲ್ಲಿದ್ದು,ಇನ್ನಷ್ಟು ಕಠಿಣ ಕ್ರಮಕ್ಕೆ ಪೊಲೀಸರಿಗೆ ಸೂಚಿಸಲಾಗುವುದು,ಮೇ 23 ರ ರಾಜ್ಯ ಸರ್ಕಾರದ ಮಾರ್ಗಸೂಚಿ ನೋಡಿಕೊಂಡು ಮುಂದಿನ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿಗಳು ಹೇಳಿದ್ದಾರೆ.
ಜಿಲ್ಲೆಯಲ್ಲಿ ಸಂಪೂರ್ಣ ಲಾಕ್ಡೌನ್ ಘೋಷಣೆಯಾಗಲಿದ್ದು, ಕೇವಲ ಎರಡು ದಿನ ಮಾತ್ರ ದಿನಸಿ ಮತ್ತು ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ನೀಡಲಾಗುತ್ತದೆ ಎಂಬ ಸುದ್ದಿ ಇಂದು ವ್ಯಾಪಕವಾಗಿ ಹರಿದಾಡುತ್ತಿತ್ತು. ಇದರಿಂದಾಗಿ ಸಾರ್ವಜನಿಕರು ಕೂಡಾ ಗೊಂದಲಕ್ಕೊಳಗಾಗಿದ್ದರು. ಆದರೆ ಜಿಲ್ಲಾಧಿಕಾರಿಗಳ ಸ್ಪಷ್ಟನೆಯೊಂದಿಗೆ ಜನರು ನಿರಾಳರಾಗಿದ್ದಾರೆ.