ಪುನೀತ್ ರಾಜಕುಮಾರ್ ಹೆಸರಲ್ಲಿ ಕಲಾವಿದರ ತರಬೇತಿ ಕೇಂದ್ರ ಸ್ಥಾಪಿಸಲು ಸಿಎಂಗೆ ಡಿ.ಕೆ. ಶಿವಕುಮಾರ್ ಆಗ್ರಹ

Prasthutha|

ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಸ್ಮರಣಾರ್ಥ ಹೊಸ ಕಲಾವಿದರ ತರಬೇತಿ ಸಂಸ್ಥೆ ಆರಂಭಿಸುವಂತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಒತ್ತಾಯಿಸಿದ್ದಾರೆ.ಬೆಂಗಳೂರು ಅರಮನೆ ಮೈದಾನದಲ್ಲಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಆಯೋಜಿಸಿದ್ದ ಪುನೀತ ನಮನ ಕಾರ್ಯಕ್ರಮದಲ್ಲಿ ಮಂಗಳವಾರ ಮಾತನಾಡಿದ ಅವರು, ಸರಕಾರ ಇದಕ್ಕೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದರು.

- Advertisement -

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪುನೀತ್ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ ಘೋಷಿಸಿರುವುದು ಸ್ವಾಗತಾರ್ಹ. ಅದೇ ರೀತಿ ಅವರು ಹೊಸ ಕಲಾವಿದರಿಗಾಗಿ ತರಬೇತಿ ಸಂಸ್ಥೆ ಆರಂಭಿಸಬೇಕು ಎಂದು ಮನವಿ ಮಾಡುತ್ತೇನೆ.

ಹಿಂದೆ ಬಂಗಾರಪ್ಪನವರ ಸರಕಾರವಿದ್ದಾಗ ಕರ್ನಾಟಕದಲ್ಲಿ ಮೊದಲ ಬಾರಿ ಡಾ. ರಾಜಕುಮಾರ್ ಅವರಿಗೆ ಕರ್ನಾಟಕ ಪ್ರಶಸ್ತಿ ಘೋಷಣೆ ಮಾಡಲಾಗಿತ್ತು. ನಾನು ಆಗ ಬಂಗಾರಪ್ಪನವರ ಸಂಪುಟದಲ್ಲಿ ಮಂತ್ರಿಯಾಗಿದ್ದೆ. ಆ ಪ್ರಶಸ್ತಿ ಪ್ರಕಟಣೆಯ ಭಾಗವಾಗಿದ್ದೆ.

- Advertisement -

ನಾನು ಆಗಾಗ ಹೇಳುತ್ತಿರುತ್ತೇನೆ. ಹುಟ್ಟು ಆಕಸ್ಮಿಕ, ಸಾವು ಖಚಿತ. ಈ ಹುಟ್ಟು ಸಾವಿನ ನಡುವೆ ಮನುಷ್ಯ ಏನು ಸಾಧನೆ ಮಾಡಿದ ಎಂಬುದು ಮುಖ್ಯವಾಗುತ್ತದೆ. ನಮ್ಮ ಪುನೀತ್ ಅವರು ಆ ಸಾಧನೆಯ ಮೂಲಕ ಈಗ ಮನೆ ಮಾತಾಗಿದ್ದಾರೆ.

ಈಗ ತಾನೇ ಹಾಡಿನ ಮೂಲಕ ಪುನೀತ್ ಅವರಿಗೆ ನಮನ ಸಲ್ಲಿಸಿದ ಮೈಸೂರಿನ ಶಕ್ತಿಧಾಮದ ಮಕ್ಕಳು ಪುನೀತ್ ಅವರ ಸಾಧನೆ ಮತ್ತು ರಾಜಕುಮಾರ್ ಕುಟುಂಬದ ಸಾಮಾಜಿಕ ಕಳಕಳಿಗೆ ಉದಾಹರಣೆಯಾಗಿ ನಮ್ಮ ಕಣ್ಣ ಮುಂದಿದೆ.

ರಾಜಕುಮಾರ್ ಅವರ ಕುಟುಂಬ ಸಾಮಾಜಿಕ ಬದ್ಧತೆಗೆ ಹೆಸರುವಾಸಿ. ರಾಜಕುಮಾರ್ ಅವರು ಹಾಕಿಕೊಟ್ಟ ದಾರಿಯಲ್ಲೇ ಪುನೀತ್ ಅವರು ನಡೆದರು. ಅವರು ಕೈಗೊಂಡಿರುವ ಸಾಮಾಜಿಕ ಸೇವಾ ಕಾರ್ಯಗಳು ಎಲ್ಲರಿಗೂ ಮಾದರಿ.

ಪುನೀತ್ ಅವರ ಸಾವಿನ ಸುದ್ದಿ ಬಂದಾಗ ನನಗೆ ನಂಬಲು ಆಗಲಿಲ್ಲ. ಪುನೀತ್ ಅವರ ಜಿಮ್ ತರಬೇತಿದಾರನೇ ನನಗೂ ತರಬೇತಿದಾರ. ಅವರೇ ಪುನೀತ್ ಅವರಿಗೆ ಏನೋ ಹೆಚ್ಚುಕಮ್ಮಿಯಾಗಿದೆ ಎಂದು ತಿಳಿಸಿ, ಅವಸರದಿಂದ ಹೊರಟ. ನಂತರ ಪುನೀತ್ ಇನ್ನಿಲ್ಲ ಎಂಬ ಸುದ್ದಿ ಖಚಿತವಾಯಿತು. ಅದನ್ನು ಅರಗಿಸಿಕೊಳ್ಳಲು ಆಗಲಿಲ್ಲ.

ಪುನೀತ್ ಅವರು ಇನ್ನಿಲ್ಲ ಎಂಬುದನ್ನು ಇಡೀ ನಾಡಿಗೇ ಅರಗಿಸಿಕೊಳ್ಳಲು ಆಗಿಲ್ಲ. ಇನ್ನೂ ಅವರ ಕುಟುಂಬದವರಿಗೆ, ಪತ್ನಿ ಅಶ್ವಿನಿ ಅವರಿಗೆ, ಅವರ ಮಕ್ಕಳಿಗೆ ಹೇಗಾಗಿರಬೇಡ. ಭಗವಂತ ಅವರಿಗೆ ನೋವು ಭರಿಸುವ ಶಕ್ತಿ ನೀಡಲಿ.

ನನಗೂ ಚಲನಚಿತ್ರರಂಗಕ್ಕೂ ಮೊದಲಿಂದಲೂ ನಂಟು. ಚಲನಚಿತ್ರ ವಾಣಿಜ್ಯ ಮಂಡಳಿ ನಿರ್ದೇಶಕನಾಗಿ ಕೆಲಸ ಮಾಡಿದ್ದೆ. ಅವರು ನನ್ನನ್ನೂ ಈ ಕಾರ್ಯಕ್ರಮದಲ್ಲಿ ಮಾತನಾಡಲು ಅವಕಾಶ ಕೊಟ್ಟಿದ್ದಕ್ಕೆ ಧನ್ಯವಾದಗಳು.

Join Whatsapp