ಮಂಗಳೂರು : ದಕ್ಷಿಣ ಕನ್ನಡ ಲೋಕಸಭಾ ಚುನಾವಣೆಯ ಸೋಲಿನ ಬಗ್ಗೆ ಪರಾಮರ್ಶೆ ನಡೆದಿದ್ದು, ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರಿಂದ ಸಂಗ್ರಹಿಸಿರುವ ಅಭಿಪ್ರಾಯಗಳ ವರದಿಯನ್ನು ಕೆಪಿಸಿಸಿಗೆ ಸಲ್ಲಿಸುವುದಾಗಿ ಕರಾವಳಿ ವಿಭಾಗದ ಕಾಂಗ್ರೆಸ್ ಸತ್ಯಶೋಧನಾ ಸಮಿತಿ ಮುಖ್ಯಸ್ಥ ವಿ.ಎಸ್ ಉಗ್ರಪ್ಪ ತಿಳಿಸಿದರು.
ನಗರದ ಕಾಂಗ್ರೆಸ್ ಜಿಲ್ಲಾ ಕಚೇರಿಯಲ್ಲಿ ಸತ್ಯಶೋಧನಾ ಸಮಿತಿಯ ಸರಣಿ ಸಭೆಗಳ ಬಳಿಕ ಸುದ್ದಿಗೋಷ್ಠಿ ನಡೆಸಿದ ಅವರು, ಸೋಲಿಗೆ ಕಾರಣಗಳನ್ನು ಹುಡುಕಿ ಮುಂದಿನ ದಿನಗಳಲ್ಲಿ ಪಕ್ಷವನ್ನು ತಳಮಟ್ಟದಿಂದ ಸಂಘಟಿಸಿ ಮತ್ತಷ್ಟು ಬಲಗೊಳಿಸಲು ಸತ್ಯಶೋಧನಾ ಸಮಿತಿ ರಚನೆಯಾಗಿದೆ ಎಂದು ತಿಳಿಸಿದರು. ಇಂದಿನ ಸಭೆಯಲ್ಲಿ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಸೋಲಿಗೆ ಕಾರಣಗಳನ್ನು ಹುಡುಕಲಾಗಿದೆ, ಜೊತೆಗೆ ಪಕ್ಷ ಬಲವರ್ಧನೆ ಬಗ್ಗೆ ಮುಖಂಡರು ಮತ್ತು ಕಾರ್ಯಕರ್ತರು ಅಭಿಪ್ರಾಯ ತಿಳಿಸಿದ್ದಾರೆ, ಆ ಮಾಹಿತಿಗಳನ್ನು ಬಹಿರಂಗಗೊಳಿಸುವುದಿಲ್ಲ, ಕೆಪಿಸಿಸಿಗೆ ವರದಿ ನೀಡುತ್ತೇವೆ ಎಂದರು.
ರಾಜ್ಯದಲ್ಲಿ ಕಾಂಗ್ರೆಸ್ 20 ಕ್ಷೇತ್ರಗಳನ್ನು ಗೆಲ್ಲುವ ಗುರಿ ಇತ್ತು, ದೇಶದಲ್ಲಿ ಇಂಡಿಯಾ ಒಕ್ಕೂಟ 300 ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆಯಿತ್ತು, ಆದರೆ ಮತದಾರರು ನಮ್ಮ ನಿರೀಕ್ಷೆಗೆ ತಕ್ಕಂತೆ ಸ್ಥಾನಗಳನ್ನು ಕೊಟ್ಟಿಲ್ಲ ಎಂದರು. ಈ ಸೋಲು ದೇಶದ ಪ್ರಜಾಪ್ರಭುತ್ವ ಮತ್ತು ಸಂವಿಧಾನಕ್ಕೆ ಆಗಿರುವ ಸೋಲು ಎಂದು ಅವರು ಬಣ್ಣಿಸಿದರು. ರಾಜ್ಯ ಸರಕಾರದ ಗ್ಯಾರಂಟಿ ಯೋಜನೆಗಳಿಂದಾಗಿ ಕಳೆದ ಬಾರಿಗಿಂತ ಕಾಂಗ್ರೆಸ್ 8 ಸ್ಥಾನಗಳು ಹೆಚ್ಚು ಗೆದ್ದಿದೆ ಎಂದು ಅವರು ಅಭಿಪ್ರಾಯಪಟ್ಟರು.
ಇದೇ ವೇಳೆ ಬಿಜೆಪಿ ಮತ್ತು ಆರ್‌ಎಸ್‌ಎಸ್ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಆರ್ ಎಸ್ ಎಸ್ ಮತ್ತು ಬಿಜೆಪಿ ಒಂದೇ ನಾಣ್ಯದ ಎರಡು ಮುಖ ಎಂದರು. ಮೋದಿ ದೇಶ ಕಂಡ ದುರ್ಬಲ ಪ್ರಧಾನಿಯಾಗಿದ್ದು, ಮೋದಿಯವರು ಭ್ರಷ್ಟಾಚಾರಗಳಿಗೆ ಪೂರಕವಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಅಪಾದಿಸಿದರು. ಮೋದಿ ಸರಕಾರ ಆರ್ ಎಸ್ ಎಸ್ ಚಟುವಟಿಕೆಗಳಲ್ಲಿ ಭಾಗಿಯಾಗಲು ಸರಕಾರಿ ನೌಕರರಿಗೆ ಅವಕಾಶ ಕೊಟ್ಟಿರುವುದರಿಂದ ಇನ್ಮುಂದೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಚಡ್ಡಿ ಧರಿಸಿ ಶಾಖೆ ನಡೆದರೂ ಅಚ್ಚರಿಯಿಲ್ಲ ಎಂದು ವಾಗ್ದಾಳಿ ನಡೆಸಿದರು.
ಸುದ್ದಿಗೋಷ್ಠಿಯಲ್ಲಿ ಸತ್ಯಶೋಧನಾ ಸಮಿತಿಯ ಸದಸ್ಯರಾದ ಅಜಯ್ ಕುಮಾರ್ ಸರ್ ನಾಯ್ಕ್ ಮತ್ತು ಸಯೀದ್ ಅಹ್ಮದ್, ಮಾಜಿ ಸಚಿವ ರಮಾನಾಥ ರೈ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ಸೇರಿ ಇತರೆ ಮುಖಂಡರು ಹಾಜರಿದ್ದರು.