ಮಂಗಳೂರು : ಫಲಾನುಭವಿಗಳಿಂದ ಸಾರಿಗೆ ಸೌಲಭ್ಯ ಪಡೆಯಬೇಡಿ ಎಂದು ಅಧಿಕಾರಿಗಳಿಗೆ ದಕ್ಷಿಣಕನ್ನಡ ಜಿಲ್ಲಾಧಿಕಾರಿ ರವಿಕುಮಾರ್ ಎಂ.ಆರ್. ಎಚ್ಚರಿಕೆ ನೀಡಿದ್ದಾರೆ.
ಗುರುವಾರ ತಮ್ಮ ಕಚೇರಿಯಲ್ಲಿ ನಡೆದ ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪರಿಶಿಷ್ಟ ಜಾತಿ ಹಾಗೂ ಪಂಗಡದ ಫಲಾನುಭವಿಗಳಿಗೆ ಸರಕಾರದಿಂದ ಸೌಲಭ್ಯ ಕಲ್ಪಿಸಿಕೊಡುವ ಸಂದರ್ಭದಲ್ಲಿ ಸ್ಥಳ ಪರಿಶೀಲನೆ ಮಾಡುವಾಗ ಸಂಬಂಧಪಟ್ಟ ಇಲಾಖೆಗಳ ವಾಹನಗಳನ್ನು ಮಾತ್ರ ಬಳಸಬೇಕು. ಫಲಾನುಭವಿಗಳೇ ವಾಹನ ಸೌಲಭ್ಯ ಕಲ್ಪಿಸಬೇಕೆಂದು ಬಯಸಬಾರದು. ಆ ರೀತಿ ಮಾಡಿದರೆ ಸಂಬಂಧಿಸಿದ ಅಧಿಕಾರಿಯ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಬಹುದಾಗಿದೆ ಎಂದು ಹೇಳಿದ್ದಾರೆ.
ಫಲಾನುಭವಿಗಳಿಗೆ ಸೌಲಭ್ಯ ಕಲ್ಪಿಸುವ ಸಂದರ್ಭ ಸಂಬಂಧಿಸಿದ ಇಲಾಖೆಯವರು ಸಾರಿಗೆ ಸೌಲಭ್ಯವನ್ನು ಫಲಾನುಭವಿಗಳಿಂದ ಅಪೇಕ್ಷಿಸುತ್ತಾರೆ ಎಂದು ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿಯ ಸದಸ್ಯರೊಬ್ಬರು ಸಭೆಯಲ್ಲಿ ತಿಳಿಸಿದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಈ ಎಚ್ಚರಿಕೆಯನ್ನು ನೀಡಿದ್ದಾರೆ.