ಬೆಂಗಳೂರು: ಡಿಸೆಂಬರ್ 19ರಂದು ನಗರದ ಬೇಗೂರಿನಲ್ಲಿ ಸಂಭವಿಸಿದ ಸಿಲಿಂಡರ್ ಸ್ಫೋಟದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ತಂದೆ ಹಾಗೂ ಮಗು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದ ವರದಿಯಾಗಿದೆ.
ಸಂದೇಶ್ (30) ಹಾಗೂ ರೋಹನ್ (2.5) ಮೃತರು. ಘಟನೆಯಲ್ಲಿ ಸಿಲಿಂಡರ್ ಸ್ಫೋಟದಿಂದ ಗಂಭೀರವಾಗಿ ಗಾಯಗೊಂಡಿದ್ದವರಲ್ಲಿ ಮೂವರ ಸ್ಥಿತಿ ಚಿಂತಾಜನಕವಾಗಿದ್ದು, ಚಿಕಿತ್ಸೆ ಮುಂದುವರೆಸಲಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಡಿಸೆಂಬರ್19ರಂದು ಬೇಗೂರು ಠಾಣಾ ವ್ಯಾಪ್ತಿಯ ಗಾರ್ವೆಬಾವಿಪಾಳ್ಯದ ಲಕ್ಷ್ಮೀ ಲೇಔಟ್ನಲ್ಲಿ ಸುಬ್ರಮಣಿ ಎಂಬುವವರಿಗೆ ಸೇರಿದ ಕಟ್ಟಡದಲ್ಲಿ ಅಡುಗೆಗೆ ಬಳಸುತ್ತಿದ್ದ ಅನಿಲ ಸಿಲಿಂಡರ್ ಸ್ಫೋಟಗೊಂಡು ಒಂದೇ ಕುಟುಂಬದ ಐವರು ಗಾಯಗೊಂಡಿದ್ದರು. ಘಟನೆಯಲ್ಲಿ ಉತ್ತರ ಪ್ರದೇಶ ಮೂಲದ ಸಂದೇಶ್(30), ಆತನ ನಾದಿನಿ ನಿಖಿಲಾ(26) ಮತ್ತು ಮೂವರು ಮಕ್ಕಳಾದ ರೋಷಿಣಿ, ರೋಹನ್ ಹಾಗೂ ರೋಷನ್ ಎಂಬುವರು ಗಾಯಗೊಂಡಿದ್ದರು. ಆದರೆ ಈಗ ಸಂದೇಶ್ ಹಾಗೂ ರೋಹನ್ ಮೃತಪಟ್ಟಿದ್ದಾರೆ.