ಚೆನ್ನೈ: ಮಾಂಡೌಸ್ ಚಂಡಮಾರುತದ ಹೊಡೆತಕ್ಕೆ ತಮಿಳುನಾಡಿನಲ್ಲಿ ನಾಲ್ವರು ಜೀವ ತೆತ್ತಿದ್ದು, ಅಪಾರ ಹಾನಿಯಾದ ಬಗ್ಗೆ ವರದಿಯಾಗಿದೆ.
ಶುಕ್ರವಾರ ಮಧ್ಯರಾತ್ರಿ ಗಂಟೆಗೆ 75 ಕಿ.ಮೀ. ವೇಗದಲ್ಲಿ ಗಾಳಿ ಮಳೆ ತಮಿಳುನಾಡನ್ನು ಆವರಿಸಿಕೊಂಡಿತ್ತು. ಚೆನ್ನೈನಲ್ಲಿ ಗಾಳಿ ಮಳೆಗೆ 400 ಮರಗಳು ನೆಲಕ್ಕುರುಳಿವೆ. ಇಲ್ಲಿ 115 ಎಂಎಂ ಮಳೆಯಾಗಿದೆ.
ವಿಪತ್ತು ನಿರ್ವಹಣಾ ಪಡೆಯು ಮೊದಲೇ ಎಚ್ಚರಿಕೆ ವಹಿಸಿ ಕೆಲಸ ಮಾಡಿದ್ದರಿಂದ ಹಾನಿ ಕಡಿಮೆ ಆಗಿದೆ ಎಂದು ಮುಖ್ಯಮಂತ್ರಿ ಎಂ. ಕೆ. ಸ್ಟಾಲಿನ್ ಹೇಳಿದ್ದಾರೆ.
ಮಹಾಬಲಿಪುರದ ಬಳಿ ತಮಿಳುನಾಡು ಪ್ರವವೇಶಿಸಿದ ಮಾಂಡೌಸ್, ಚೆಂಗಲಪಟ್ಟು ಮತ್ತು ನೆರೆಯ ಜಿಲ್ಲೆಗಳಲ್ಲಿ ಹಾನಿ ಮಾಡಿದೆ. ಕೋವಲಂನಲ್ಲಿ ಮೀನುಗಾರರ ಬೋಟುಗಳು ಮತ್ತು ಕಡಲ ತಡಿಯ ಅಂಗಡಿಗಳು ಹಾನಿಗೊಂಡವು.
ಚೆನ್ನೈ ವಿಮಾನ ನಿಲ್ದಾಣದ ಬಳಿ ಭೂಕುಸಿತ ಉಂಟಾದುದರಿಂದ 13 ದೇಶೀಯ ಮತ್ತು 3 ಅಂತಾರಾಷ್ಟ್ರೀಯ ವಿಮಾನ ಯಾನಗಳನ್ನು ನಿಲ್ಲಿಸಲಾಯಿತು.
ಚೆಂಗಲಪಟ್ಟು ಜಿಲ್ಲೆಯ 1,058 ಕುಟುಂಬಗಳನ್ನು 28 ಪರಿಹಾರ ಕೇಂದ್ರಗಳಿಗೆ ಸಾಗಿಸಲಾಗಿದೆ. ರಾಜ್ಯದಲ್ಲಿ ಒಟ್ಟು 5,000 ಪರಿಹಾರ ಕೇಂದ್ರಗಳನ್ನು ರಾಜ್ಯ ಸರಕಾರ ಸ್ಥಾಪಿಸಿದೆ.
ಆಂಧ್ರ ಪ್ರದೇಶದ ರಾಯಲ ಸೀಮ ಪ್ರದೇಶವು ಈ ಚಂಡಮಾರುತದಿಂದ ಭಾರೀ ಹಾನಿ ಕಂಡಿದೆ. ತಿರುಪತಿ ಜಿಲ್ಲೆಯ ನಾಯ್ಡುಪೇಟದಲ್ಲಿ ಕಳೆದ 24 ಗಂಟೆಗಳಲ್ಲಿ 281.5 ಎಂಎಂ ಮಳೆಯಾಗಿದೆ. ಡಬ್ಲ್ಯುಎಂಓ- ಜಾಗತಿಕ ಹವಾಮಾನ ಒಕ್ಕೂಟದ ಸದಸ್ಯ ರಾಷ್ಟ್ರವಾದ ಯುಎಇ- ಅರಬ್ ಅಮೀರರ ರಾಜ್ಯಗಳ ಒಕ್ಕೂಟವು ಈ ಸೈಕ್ಲೋನಿಗೆ ಮಾನ್ ಡೌಸ್ ಎಂದು ಹೆಸರು ನೀಡಿದೆ. ಮಾನ್ ಡೌಸ್ ಎಂದರೆ ಖಜಾನೆ ಪೆಟ್ಟಿಗೆ ಎಂದರ್ಥ.