ಅರಬಿ ಸಮುದ್ರದಲ್ಲಿ  ಚಂಡಮಾರುತ ಸೃಷ್ಟಿ ಸಾಧ್ಯತೆ: ಹವಾಮಾನ ಇಲಾಖೆ ಎಚ್ಚರಿಕೆ

Prasthutha|

ನವದೆಹಲಿ: ಆಗ್ನೇಯ ಹಾಗೂ ಅರಬಿ ಸಮುದ್ರದ ನೈಋತ್ಯ ಭಾಗದಲ್ಲಿ ವಾಯುಭಾರ ಕುಸಿತವಾಗಿದ್ದು, ಇದು ಚಂಡಮಾರುತವಾಗಿ ಮಾರ್ಪಡುವ ಸಾಧ್ಯತೆಯಿದೆ. ಅಕ್ಟೋಬರ್‌ 21ರಂದು ಮಹಾರಾಷ್ಟ್ರಕ್ಕೆ ಹೊಂದಿಕೊಂಡಿರುವ ಕರಾವಳಿ ಪ್ರದೇಶಕ್ಕೆ ಅಪ್ಪಳಿಸುವ ಸಾಧ್ಯತೆ ಇದೆಯೆಂದು  ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ. ಈ ಚಂಡಮಾರುತಕ್ಕೆ ‘ತೇಜ್‌’ ಎಂದು ಹೆಸರಿಡಲಾಗಿದ್ದು,  ಈ ವರ್ಷದಲ್ಲಿ ಅರಬಿ ಸಮುದ್ರದಲ್ಲಿ ಸೃಷ್ಟಿಯಾದ ಎರಡನೇ ಚಂಡಮಾರುತ ಇದಾಗಿದೆ. ಚಂಡಮಾರುತ ಸೃಷ್ಟಿಯಾದರೆ ಗಾಳಿಯ ವೇಗವು ಗಂಟೆಗೆ 62ರಿಂದ 88 ಕಿ.ಮೀ. ವೇಗದಲ್ಲಿ ಬೀಸಲಿದೆ. ಒಂದು ವೇಳೆ ತೀವ್ರತೆ ಪಡೆದರೆ ಗರಿಷ್ಠ 89ರಿಂದ 117 ಕಿ.ಮೀ. ವೇಗದಲ್ಲಿ ಬೀಸಲಿದೆ ಎಂದು ಹವಾಮಾನ ಇಲಾಖೆ ವಿವರಿಸಿದೆ.

- Advertisement -

ರವಿವಾರದ ವೇಳೆಗೆ ತೀವ್ರತೆ ಪಡೆದುಕೊಳ್ಳುವ ಈ ಚಂಡಮಾರುತವು ಒಮನ್‌ ಹಾಗೂ ಅದಕ್ಕೆ ಹೊಂದಿಕೊಂಡ ಯೆಮನ್‌ನ ದಕ್ಷಿಣ ಕರಾವಳಿ ಪ್ರದೇಶಗಳತ್ತ ಚಲಿಸಲಿದೆ ಎಂದು ಹೇಳಿದ ಹವಾಮಾನ ಇಲಾಖೆಯ ತಜ್ಞರು, ಜೂನ್‌ನಲ್ಲಿ ಅರಬಿ ಸಮುದ್ರದಲ್ಲಿ ಸೃಷ್ಟಿಯಾದ ಬಿಪೋರ್‌ ಜಾಯ್‌ ಚಂಡಮಾರುತವು ಉತ್ತರ ಮತ್ತು ವಾಯವ್ಯ ಭಾಗದ ಕಡೆಗೆ ತನ್ನ ದಿಕ್ಕು ಬದಲಿಸುವುದಕ್ಕೂ ಮೊದಲು ಗುಜರಾತ್‌ನ ಮಾಂಡವಿ ಹಾಗೂ ಪಾಕಿಸ್ತಾನದ ಕರಾಚಿ ಭಾಗದಲ್ಲಿ ಸಾಕಷ್ಟು ಹಾನಿ ಸೃಷ್ಟಿಸಿತ್ತು. ಹಾಗಾಗಿ, ‘ತೇಜ್‌’ ಕೂಡ ನಿರೀಕ್ಷಿತ ದಿಕ್ಕು ಬದಲಾಯಿಸಿ ವೇಗ ಪಡೆಯುವ ಸಾಧ್ಯತೆಯೂ ಇದೆ ಎಂದು ಎಚ್ಚರಿಕೆ ನೀಡಿದ್ದಾರೆ.‌