ನವದೆಹಲಿ: ಸ್ವಾತಂತ್ರ್ಯ ಹೋರಾಟಗಾರ ಹಾಗೂ ಸ್ವತಂತ್ರ ಭಾರತದ ಮೊದಲ ಶಿಕ್ಷಣ ಸಚಿವರಾಗಿ ಸಾಧನೆ ಮಾಡಿದ್ದ ಮೌಲಾನಾ ಅಬುಲ್ ಕಲಾಂ ಆಝಾದ್ ಅವರ ಹೆಸರನ್ನು ಎನ್ ಸಿಇಆರ್ ಟಿ- ಶಿಕ್ಷಣ ಸಂಶೋಧನೆ ಮತ್ತು ತರಬೇತಿ ರಾಷ್ಟ್ರೀಯ ಪರಿಷತ್ತಿನ ಹೊಸ ಪಠ್ಯ ಪುಸ್ತಕದಲ್ಲಿ ಕತ್ತರಿ ಹಾಕಿ ಪೊಲಿಟಿಕಲ್ ಸಯನ್ಸ್ ಪಾಠದಲ್ಲಿ ಇಲ್ಲದಂತೆ ಮಾಡಲಾಗಿದೆ.
ಎನ್ ಸಿಇಆರ್ ಟಿ ಪಠ್ಯ ಪುಸ್ತಕಗಳಲ್ಲಿ ಮಾಡುತ್ತಿರುವ ವಿವಾದಾತ್ಮಕ ಬದಲಾವಣೆಗಳಲ್ಲಿ ಮೌಲಾನಾ ಆಜಾದ್ ಅವರ ಹೆಸರು ಬಿಡುತ್ತಿರುವುದು ಒಂದಾಗಿದೆ. ಎನ್ ಸಿಇಆರ್ ಟಿ ಸಾರ್ವಜನಿಕರ ಗಮನಕ್ಕೆ ತಾರದೆಯೇ ಸಿಲೆಬಸ್ ಪರಿಷ್ಕರಣೆ ಹೆಸರಿನಲ್ಲಿ ತನಗೆ ಬೇಕಾದಂತೆ ಮಾಡುತ್ತಿದೆ.
ಎನ್ ಸಿಇಆರ್ ಟಿ 11ನೇ ತರಗತಿಯ ‘ಸಂವಿಧಾನ: ಯಾಕೆ ಮತ್ತು ಹೇಗೆ’ ಎಂಬ ಅಧ್ಯಾಯದಲ್ಲಿ ಮೌಲಾನಾ ಆಜಾದ್ ಅವರ ವಿಷಯ ಈ ಹಿಂದೆ ಇತ್ತು. ಈ ಅಧ್ಯಾಯದಲ್ಲಿ ಕ್ರಾಂತಿಕಾರಿ ಬದಲಾವಣೆ ಮಾಡಿರುವುದಾಗಿ ಹೇಳಿರುವ ಎನ್ ಸಿಇಆರ್ ಟಿ ಆಜಾದ್ ರ ಹೆಸರು ತೆಗೆದಿದ್ದೇ ದೊಡ್ಡ ಕ್ರಾಂತಿ ಎಂದು ಭಾವಿಸಿದಂತಿದೆ.
“ಮೊದಲ ಕಾನ್ಸ್ಟಿಟ್ಯೂಯೆಂಟ್ ಎಸೆಂಬ್ಲಿಯು ಎಂಟು ವಿಭಿನ್ನ ಸಮಿತಿಗಳನ್ನು ಹೊಂದಿತ್ತು. ಜವಾಹರಲಾಲ್ ನೆಹರು, ರಾಜೇಂದ್ರ ಪ್ರಸಾದ್, ಸರ್ದಾರ್ ಪಟೇಲ್, ಮೌಲಾನಾ ಆಜಾದ್ ಮತ್ತು ಅಂಬೇಡ್ಕರ್ ಈ ಸಮಿತಿಗಳ ಚೇರ್ಮನ್ ಆಗಿದ್ದರು. ಇಲ್ಲಿ ಪರಸ್ಪರ ಒಪ್ಪುವ ವಿಷಯದಲ್ಲಿ ತಾಕಲಾಟ ಇತ್ತು. ದಲಿತರ ಉದ್ಧಾರಕ್ಕೆ ಗಾಂಧಿ ಮತ್ತು ಕಾಂಗ್ರೆಸ್ ಏನೂ ಮಾಡಿಲ್ಲ ಎಂದು ಅಂಬೇಡ್ಕರ್ ಅವರು ಕಾಂಗ್ರೆಸ್ಸಿನ ತೀವ್ರ ಟೀಕಾಕಾರರಾಗಿದ್ದರು. ಪಟೇಲ್ ಮತ್ತು ನೆಹರು ಸಹ ಹಲವು ವಿಷಯಗಳಲ್ಲಿ ಹೊಂದಾಣಿಕೆ ಹೊಂದಿರಲಿಲ್ಲ. ಆದರೂ ಅವರೆಲ್ಲ ಸೇರಿ ಕೆಲಸ ಮಾಡಿದರು.” ಎಂಬುದು ಹಿಂದೆ ಇದ್ದ ಪಾಠದ ಪ್ಯಾರಾ.
ಈಗಿನ ಪಠ್ಯ ಪುಸ್ತಕದಲ್ಲಿ ಉಳಿದ ಹೆಸರುಗಳು ಇದ್ದರೂ ಮೌಲಾನಾ ಆಜಾದ್ ಅವರ ಹೆಸರನ್ನು ಕೈಬಿಡಲಾಗಿದೆ.
2009ರಲ್ಲಿ ಮೌಲಾನಾ ಆಜಾದ್ ಫೆಲೋಶಿಪ್ ಆರಂಭಿಸಲಾಗಿತ್ತು. ಅಲ್ಪಸಂಖ್ಯಾತ ವರ್ಗದ ಬೌದ್ಧ, ಕ್ರಿಶ್ಚಿಯನ್, ಜೈನ್, ಮುಸ್ಲಿಂ, ಪಾರಸಿ ಮತ್ತು ಸಿಖ್ ಧರ್ಮಗಳ ಪಿಎಚ್.ಡಿ., ಎಂ.ಫಿಲ್. ವಿದ್ಯಾರ್ಥಿಗಳಿಗೆ ಪ್ರತಿ ವರುಷ ಐದು ವರ್ಷಗಳ ಕಾಲ ನಿಧಿ ಒದಗಿಸುವ ಈ ಯೋಜನೆಯನ್ನು ಕಳೆದ ವರ್ಷ ಬಿಜೆಪಿ ಸರಕಾರ ಕೈಬಿಟ್ಟಿತ್ತು.
ಭಾರತದ ರಾಜಕೀಯದಲ್ಲಿ ಮೌಲಾನಾ ಆಜಾದ್ ಅವರದು ಗಮನಾರ್ಹ ಹೆಸರು. 1946ರಲ್ಲಿ ಕಾನ್ಸ್ಟಿಟ್ಯೂಯೆಂಟ್ ಎಸೆಂಬ್ಲಿಯ ಕಾಂಗ್ರೆಸ್ ಗೆಲುವಿನಲ್ಲಿ, ಅದು ಒಪ್ಪಿದ ಸಂವಿಧಾನದಲ್ಲಿ ಮೌಲಾನಾರ ಪಾತ್ರವನ್ನು ಮಾತ್ರ ತೆಗೆಯುವುದು ಸಾಧ್ಯವಿಲ್ಲ. ಮೌಲಾನಾ ಆಜಾದ್ ಅವರು ಕಾಂಗ್ರೆಸ್ ಅಧ್ಯಕ್ಷರಾಗಿ ಆರು ವರ್ಷ ಇದ್ದರು. ಆಗ ಬ್ರಿಟಿಷ್ ಸಂಪುಟ ಮಿಷನ್ ಜೊತೆಗಿನ ಮಾತುಕತೆಯಲ್ಲೂ ಅವರ ಪಾತ್ರ ಪ್ರಧಾನವಾದುದಾಗಿದೆ.
ಸ್ವತಂತ್ರ ಭಾರತದ ಮೊದಲ ಶಿಕ್ಷಣ ಮಂತ್ರಿಯಾದ ಆಜಾದ್ ಅವರು 14ರ ಪ್ರಾಯದವರೆಗೆ ಎಲ್ಲರಿಗೂ ಕಡ್ಡಾಯ ಶಿಕ್ಷಣ ಮೊದಲಾದ ಕ್ರಾಂತಿಕಾರಿ ಬದಲಾವಣೆಗಳನ್ನು ತಂದರು. ಯೋಜನೆ ಮತ್ತು ವಾಸ್ತುಶಾಸ್ತ್ರ ಶಾಲೆ, ಹಲವಾರು ಬಗೆಯ ಭಾರತೀಯ ತಂತ್ರಜ್ಞಾನ ಶಿಕ್ಷಣ ಸಂಸ್ಥೆಗಳು, ಇಂಡಿಯನ್ ಇನ್ ಸ್ಟಿಟ್ಯೂಟ್ ಆಫ್ ಸಯನ್ಸ್, ಜಾಮಿಯಾ ಮಿಲಿಯಾ ಇಸ್ಲಾಮಿಯಾ ಎಂದು ಹಲವಾರು ಶಿಕ್ಷಣ ವೇದಿಕೆಗಳನ್ನು ಅವರು ಆರಂಭಿಸಿದ್ದರು.