ಲಕ್ನೋ: ಇತ್ತೀಚೆಗೆ ಉತ್ತರ ಪ್ರದೇಶದ ಕಾಸ್ ಗಂಜ್ ನಲ್ಲಿ ನಡೆದ ಮುಸ್ಲಿಮ್ ಯುವಕ ಅಲ್ತಾಫ್ ಎಂಬಾತನ ಕಸ್ಟಡಿ ಸಾವಿಗೆ ಸಂಬಂಧಿಸಿದಂತೆ ಎರಡನೇ ಮರಣೋತ್ತರ ಶವ ಪರೀಕ್ಷೆ ನಡೆಸಲು ಅಲಹಾಬಾದ್ ಹೈಕೋರ್ಟ್, ದೆಹಲಿಯ ಆಲ್ ಇಂಡಿಯಾ ಇನ್ಸಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ನ ವೈದ್ಯರ ತಂಡಕ್ಕೆ ಸೂಚನೆ ನೀಡಿದೆ.
ಪ್ರಸಕ್ತ ಪ್ರಕರಣದಲ್ಲಿ ಸಿಬಿಐ ತನಿಖೆ ಮತ್ತು ಎರಡನೇ ಮರಣೋತ್ತರ ಪರೀಕ್ಷೆ ನಡೆಸುವಂತೆ ಕೋರಿ ಮೃತ ಅಲ್ತಾಫ್ ನ ತಂದೆ ಚಾಂದ್ ಮಿಯಾನ್ ಅವರು ಸಲ್ಲಿಸಿದ ಅರ್ಜಿಯನ್ನು ನ್ಯಾಯಾಲಯ ವಿಚಾರಣೆ ನಡೆಸುತ್ತಿದೆ.
ಸಚಿವರ ವಿಚಾರಣೆ ನಡೆಸುವುದಕ್ಕೆ ಸಂಬಂಧಿಸಿದಂತೆ ಮ್ಯಾಜಿಸ್ಟ್ರೇಟ್ ತ್ವರಿತವಾಗಿ ಮುಂದುವರಿಸಲು ಮತ್ತು ನಾಲ್ಕು ವಾರಗಳ ಅವಧಿಯಲ್ಲಿ ತೀರ್ಮಾನ ನೀಡುವಂತೆ ಅಲಹಾಬಾದ್ ಪೀಠ ನಿರ್ದೇಶಿಸಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಹಿರಿಯ ಪೊಲೀಸ್ ಅಧೀಕ್ಷಕ / ಪೊಲೀಸ್ ಅಧೀಕ್ಷಕರ ಸಮ್ಮುಖದಲ್ಲಿ ಮೃತ ಅಲ್ತಾಫ್ ಎಂಬಾತನ ಶವವನ್ನು ಹೊರತೆಗೆದು ಮತ್ತೊಮ್ಮೆ ಮರಣೋತ್ತರ ಶವ ಪರೀಕ್ಷೆ ನಡೆಸಲಾಗುವುದೆಂದು ನ್ಯಾಯಾಲಯ ತಿಳಿಸಿದೆ.
ಕಳೆದ ವರ್ಷ ನವೆಂಬರ್ ನಲ್ಲಿ ಉತ್ತರ ಪ್ರದೇಶದ ಕಾಸ್ ಗಂಜ್ ಎಂಬಲ್ಲಿ ಹಿಂದೂ ಯುವತಿಯೊಂದಿಗೆ ಪರಾರಿಯಾದ ಆರೋಪ ಹೊರಿಸಿ ಅಲ್ತಾಫ್ ಎಂಬಾತನನ್ನು ಕಸ್ಟಡಿ ಹತ್ಯೆ ನಡೆಸಲಾಗಿತ್ತು ಎಂದು ಕುಟುಂಬ ಆರೋಪಿಸಿದೆ. ಈ ಆರೋಪವನ್ನು ಪೊಲೀಸರು ನಿರಾಕರಿಸಿದ್ದು, ಆರೋಪಿ ಅಲ್ತಾಫ್ ನೇಣು ಬಿಗಿದುಕೊಂಡು ಆತ್ಮಹತ್ಯೆ ನಡೆಸಿದ್ದಾನೆ ಎಂದು ತಿಳಿಸಿದ್ದರು.