►ಜನರನ್ನು ಗೋಳಾಡಿಸಿದ ಬಿಜೆಪಿ ಸರ್ಕಾರ ಕ್ಷಮೆ ಕೇಳಬೇಕು
ಬೆಂಗಳೂರು : ಕರ್ನಾಟಕ ಬಿಜೆಪಿ ಸರ್ಕಾರ ಐದು ಸಾವಿರ ಕೋವಿಡ್ ಪ್ರಕರಣಗಳು ವರದಿಯಾಗಿದ್ದಾಗ ವೀಕೆಂಡ್ ಕರ್ಫ್ಯೂ ಜಾರಿಗೊಳಿಸಿದ್ದು. ಇಂದು ರಾಜ್ಯದಲ್ಲಿ 50,000 ಪ್ರಕರಣಗಳಿವೆ. ಆದರೂ ವೀಕೆಂಡ್ ಕರ್ಫ್ಯೂ ವಾಪಸ್ ಪಡೆದಿದೆ. ಬೊಮ್ಮಾಯಿ ಸರಕಾರ ವಾರಾಂತ್ಯ ಕರ್ಫ್ಯೂ ಜಾರಿಗೊಳಿಸಿದ್ದು ಕೋವಿಡ್ ನಿಯಂತ್ರಿಸುವ ಉದ್ದೇಶದಿಂದಲ್ಲ. ಬದಲಾಗಿ ಕಾಂಗ್ರೆಸ್ ಪಕ್ಷದ ಪಾದಯಾತ್ರೆಯನ್ನು ತಡೆಯುವ ಉದ್ದೇಶದಿಂದ ಅಷ್ಟೇ ಎಂದು ಕಾಂಗ್ರೆಸ್ ಕಟುವಾಗಿ ಟೀಕಿಸಿದೆ.
ಪಕ್ಷದ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಈ ಕುರಿತು ಹೇಳಲಾಗಿದ್ದು, ರಾಜಕೀಯ ಹಿತಾಸಕ್ತಿಗಾಗಿ ಜನರನ್ನು ಗೋಳಾಡಿಸಿದ ಬಿಜೆಪಿ ಸರ್ಕಾರ ರಾಜ್ಯದ ಜನತೆಯ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದೆ.
ಕಾಂಗ್ರೆಸ್ ಪಕ್ಷವು ಮೇಕೆದಾಟು ಯೋಜನೆಯ ಜಾರಿಗೆ ಆಗ್ರಹಿಸಿ ಪಾದಯಾತ್ರೆ ಪ್ರಾರಂಭಿಸಿದ ಕ್ಷಣದಿಂದಲೇ ಮುಖ್ಯಮಂತ್ರಿ ಸೇರಿದಂತೆ ಬಿಜೆಪಿಯ ಎಲ್ಲಾ ಹಿರಿಯ ನಾಯಕರುಗಳು, “ಕೋವಿಡ್ ಹೆಚ್ಚಾಗಿದೆ, ಆದುದರಿಂದ ಕಾಂಗ್ರೆಸ್ ಪಕ್ಷ ಪಾದಯಾತ್ರೆಯನ್ನು ಕೈಬಿಡಬೇಕೆಂಬುವುದಾಗಿತ್ತು ಅವರೆಲ್ಲರ ಆಗ್ರಹ. ಆದರೆ ಕಾಂಗ್ರೆಸ್ ತನ್ನ ಪಾದಯಾತ್ರೆಯನ್ನು ಮುಂದುವರೆಸಿತ್ತು. ಹೆಚ್ಚಿನ ಜನಬೆಂಬಲ ವ್ಯಕ್ತವಾಗತೊಡಗಿದಾದ ಬಿಜೆಪಿಗೆ ಪಾದಯಾತ್ರೆಯನ್ನು ತಡೆಯುವುದು ಪ್ರತಿಷ್ಠೆಯ ಪ್ರಶ್ನೆಯಾಗಿತ್ತು. ಕೊನೆಗೆ ಹೈಕೋರ್ಟ್ ನಲ್ಲಿ ಈ ಕುರಿತು ಪಿಐಎಲ್ ಸಲ್ಲಿಕೆಯಾಗಿ ಅದರ ವಿಚಾರಣೆ ನಡೆಯುತ್ತಿದ್ದ ಸಂದರ್ಭದಲ್ಲೇ ಕಾಂಗ್ರೆಸ್ ತನ್ನ ಪಾದಯಾತ್ರೆಯನ್ನು ಮುಂದೂಡುವುದಾಗಿ ಘೋಷಿಸಿತ್ತು. ನಂತರ ಬಿಜೆಪಿ ಸರ್ಕಾರವೂ ನಿರಾಳವಾಗಿತ್ತು. ಈ ಮಧ್ಯೆ ಸರ್ಕಾರ ವೀಕೆಂಡ್ ಕರ್ಫ್ಯೂ ಘೋಷಿಸಿತ್ತು. ಹಿಂದೆ ಸಕಾರಣವಿಲ್ಲದೆ ಘೋಷಿಸಿದ್ದ ಕರ್ಫ್ಯೂವನ್ನು ಕೊನೆಗೂ ಯಾವುದೇ ಕಾರಣವಿಲ್ಲದೆ ವಾಪಾಸ್ ಪಡೆದಿದೆ.