ಪಠ್ಯ ಪರಿಷ್ಕರಣೆ ನೆಪದಲ್ಲಿ ಬಿಜೆಪಿ ಸರಕಾರದಿಂದ ಸಾಂಸ್ಕೃತಿಕ ಅತ್ಯಾಚಾರ: ಡಿ.ಕೆ. ಶಿವಕುಮಾರ್ ಆಕ್ರೋಶ

Prasthutha|

ಇದೇ ಜು.9ರಂದು ವಿಧಾನಸೌಧ ಆವರಣದ ಗಾಂಧಿ ಪ್ರತಿಮೆ ಎದುರು ಧರಣಿ

- Advertisement -

ಬಿಜೆಪಿಯ ಧರ್ಮ ದ್ವೇಷ ಮನಸ್ಥಿತಿಯಿಂದ ದೇಶಕ್ಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಅಪಮಾನ

ಬೆಂಗಳೂರು: ಪಠ್ಯಪುಸ್ತಕ ಪರಿಷ್ಕರಣೆ ನೆಪದಲ್ಲಿ ರಾಜ್ಯ ಬಿಜೆಪಿ ಸರಕಾರವು ಸಾಂಸ್ಕೃತಿಕ ಅತ್ಯಾಚಾರ ನಡೆಸುತ್ತಿದ್ದು, ಪರಿಸ್ಕೃತ ಪುಸ್ತಕಗಳನ್ನು ಕಸದ ಬುಟ್ಟಿಗೆ ಎಸೆಯಬೇಕೆಂದು ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪಠ್ಯಪುಸ್ತಕ ಪರಿಷ್ಕರಣೆಯಲ್ಲಿ ನಾಡಿನ ದಾರ್ಶನಿಕರು, ಮಹಾನ್ ಚೇತನಗಳಿಗೆ ಅಪಮಾನ ಮಾಡಿರುವುದನ್ನು, ಇತಿಹಾಸ ತಿರುಚಿರುವುದರ ಬಗ್ಗೆ ಕೆಪಿಸಿಸಿ ಕಚೇರಿಯಲ್ಲಿ ಮಂಗಳವಾರ ಮಾಧ್ಯಮಗೋಷ್ಠಿ ನಡೆಸಿದ ಅವರು ರಾಜ್ಯ ಬಿಜೆಪಿ ಸರಕಾರದ ಮೇಲೆ ವಾಗ್ದಾಳಿ ನಡೆಸಿದರು.

- Advertisement -

ಸರಕಾರದ ಈ ನಡೆ ವಿರುದ್ಧ ಧ್ವನಿ ಎತ್ತಿರುವ ಮಠಾಧೀಶರು, ಸಾಹಿತಿಗಳು, ಚಿಂತಕರು, ನಾನಾ ಸಂಘಟನೆಗಳಿಗೆ ಬೆಂಬಲಿಸಿ ಇದೇ ಜು. 9 ರಂದು ಬೆಳಗ್ಗೆ 10 ಗಂಟೆಗೆ ವಿಧಾನಸೌಧ ಆವರಣದಲ್ಲಿ ಗಾಂಧಿ ಪ್ರತಿಮೆ ಎದುರು ಧರಣಿ ನಡೆಸುವುದಾಗಿ ಪ್ರಕಟಿಸಿದರು.
‘ಜ್ಞಾನಪೀಠ ಪ್ರಶಸ್ತಿ ಪಡೆದ ರಾಷ್ಟ್ರಕವಿ ಕುವೆಂಪು ಅವರು ಪ್ರಪಂಚಕ್ಕೆ ವಿಶ್ವಮಾನವ ಸಂದೇಶವನ್ನು ಸಾರಿ, ಈ ರಾಜ್ಯವನ್ನು ಸರ್ವ ಜನಾಂಗದ ಶಾಂತಿಯ ತೋಟ ಎಂದಿದ್ದಾರೆ. ಆದರೆ ಬಿಜೆಪಿ ಸರ್ಕಾರ ಮಕ್ಕಳ ಪಠ್ಯಪುಸ್ತಕದಲ್ಲಿ ಕುವೆಂಪು ಅವರು ಸೇರಿದಂತೆ ಅನೇಕ ಮಹಾನುಭಾವರ ವಿಚಾರಗಳನ್ನು ತಿರುಚಿ ಸಾಂಸ್ಕೃತಿಕ ಅತ್ಯಾಚಾರ ನಡೆಸುತ್ತಿದೆ ಎಂದು ಹೇಳಿದರು.

ರಾಜ್ಯದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ರಾಜಕೀಯ ನಾಯಕರನ್ನು ಹೊರತುಪಡಿಸಿ ಎಲ್ಲ ಮಠಗಳ ಪೀಠಾಧ್ಯಕ್ಷರು, ಸಾಹಿತಿಗಳು, ಸಂಘಟನೆಗಳು ಒಟ್ಟಾಗಿ ಪಠ್ಯ ಪರಿಷ್ಕರಣೆಯಲ್ಲಿ ಸರ್ಕಾರದ ಮನಸ್ಥಿತಿ ಹಾಗೂ ಧೋರಣೆಯನ್ನು ತೀವ್ರವಾಗಿ ಖಂಡಿಸುತ್ತಿದ್ದಾರೆ. ಸರ್ಕಾರದ ನಿಲುವಿನ ವಿರುದ್ಧ ಧೈರ್ಯವಾಗಿ ಧ್ವನಿ ಎತ್ತಿದ್ದಾರೆ. ನಮ್ಮ ಸಮಾಜವನ್ನು ಶಾಂತಿಯ ತೋಟವಾಗಿ ಕಾಪಾಡಲು ಪ್ರತಿಭಟನೆ ಮಾಡುತ್ತಿರುವ ಸಿದ್ದಗಂಗಾ ಶ್ರೀಗಳು, ಮುರುಘಾ ಮಠದ ಶ್ರೀಗಳು, ಆದಿಚುಂಚನಗಿರಿ ಶ್ರೀಗಳಿಗೆ, ಪಂಚಮಸಾಲಿ ಪೀಠದ ಶ್ರೀಗಳಿಗೆ, ಸಾಣೆ ಮಠದ ಶ್ರೀಗಳು ಸೇರಿದಂತೆ ಎಲ್ಲರ ಪಾದಗಳಿಗೆ ನಮಸ್ಕರಿಸುತ್ತಾ ಕಾಂಗ್ರೆಸ್ ಪಕ್ಷದ ಪರವಾಗಿ ಅಭಿನಂದನೆ ಸಲ್ಲಿಸುತ್ತೇನೆ ಎಂದು ಹೇಳಿದರು.

ಶಿಕ್ಷಣ ನೀತಿ ಎಂಬುದು ರಾಜ್ಯಕ್ಕೆ ಸಂಬಂಧಿಸಿದ ವಿಚಾರ. ಆರ್ ಎಸ್ ಎಸ್ ಚಿಂತನೆಗಳನ್ನು ನೀವೇ ಇಟ್ಟುಕೊಳ್ಳಿ, ನಾವು ಬೇಡ ಎನ್ನುವುದಿಲ್ಲ. ಆದರೆ ಅದು ರಾಷ್ಟ್ರೀಯ ಶಿಕ್ಷಣ ನೀತಿ ಆಗಲು ಸಾಧ್ಯವಿಲ್ಲ. ಇಷ್ಟು ದಿನಗಳ ಕಾಲ ಶಿಕ್ಷಣ ನೀತಿಯಲ್ಲಿ ಓದಿದ ನಮ್ಮ ಇಂಜಿನಿಯರ್ ಗಳು, ವೈದ್ಯರು, ಐಎಎಸ್, ಐಪಿಎಸ್ ಅಧಿಕಾರಿಗಳು ಉತ್ತಮ ಸಾಧನೆ ಮಾಡಿಲ್ಲವೇ? ಈ ಸರ್ಕಾರ ಲಿಂಗಾಯತ ಧರ್ಮದ ವಿಚಾರವನ್ನೇ ತಿರುಚಲು ಮುಂದಾಗಿದೆ.

ಕುವೆಂಪು ಕನ್ನಡಕ್ಕೆ ಜ್ಞಾನಪೀಠ ಪ್ರಶಸ್ತಿ ತಂದುಕೊಟ್ಟ ಮೊದಲ ಕವಿ. ಅವರ ಬಗ್ಗೆ ಲಘುವಾಗಿ ಮಾತನಾಡುವುದು, ಪಠ್ಯದಲ್ಲಿ ಅವರನ್ನು ಲಘುವಾಗಿ ಕಾಣುವುದು, ಅವರ ಭಾವಚಿತ್ರವನ್ನು ಪಠ್ಯಪುಸ್ತಕದಿಂದ ತೆಗೆದು ಅವರಿಗೆ ಈ ಸರ್ಕಾರ ಅಪಮಾನ ಮಾಡಿದೆ. ಬಿಜೆಪಿಯವರ ಕೆಟ್ಟ ಮನಸ್ಥಿತಿ ಸರಿಯಲ್ಲ ಎಂದು ಡಿ.ಕೆ.ಶಿವಕುಮಾರ್ ಹೇಳಿದರು.

ಪಠ್ಯಪುಸ್ತಕ ವಿಚಾರದಲ್ಲಿ ಕಾಂಗ್ರೆಸ್ ರಾಜಕೀಯ ಮಾಡುತ್ತಿದೆ ಎಂಬ ಶಿಕ್ಷಣ ಸಚಿವ ನಾಗೇಶ್ ಆರೋಪದ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಶಿವಕುಮಾರ್ ಅವರು, ‘ ಬಸವಣ್ಣ ಅಂಬೇಡ್ಕರ್ ಕುವೆಂಪು ಅವರ ವಿಚಾರಗಳು ರಾಜಕೀಯ ಮಾಡುವ ವಿಚಾರಗಳೇ? ಸಿದ್ದಗಂಗಾ ಶ್ರೀಗಳು ರಾಜಕಾರಣಿಗಳೇ? ನಿರ್ಮಲಾನಂದ ಸ್ವಾಮೀಜಿಗಳು ರಾಜಕಾರಣಿಗಳೇ? ಮುರುಘಾ ಶರಣರು ರಾಜಕಾರಣಿಗಳೇ? ಇತರೆ ಸ್ವಾಮೀಜಿಗಳು ರಾಜಕಾರಣಿಗಳೇ? ಅವರಿಗೆ ತಿಳುವಳಿಕೆ ಇಲ್ಲವೇ? ಬಸವಣ್ಣನವರನ್ನು ರಾಜಕಾರಣಿ ಎನ್ನಲು ಸಾಧ್ಯವೇ? ಅವರ ವಿಚಾರದಲ್ಲಿ ರಾಜಕಾರಣ ಮಾಡಲು ಸಾಧ್ಯವೇ? ನಾಗೇಶ್ ಅವರು ಕೇವಲ ಸಚಿವರು. ಅವರು ಉತ್ತರ ಹೇಳಲಿ. ಇಲ್ಲಿ ನಾವು ಬಿಜೆಪಿಯ ನಿಜವಾದ ಮುಖ ಹಾಗೂ ಮನಸ್ಥಿತಿ ವಿರುದ್ಧ ಹೊರಾಡುತ್ತೇವೆ. ಸಚಿವರು ರಾಜೀನಾಮೆ ನೀಡುತ್ತಾರೋ, ಬಿಡುತ್ತಾರೋ ನಮಗೆ ಬೇಡ. ಅವರು ಪರಿಷ್ಕರಣೆ ಮಾಡಿರುವ ಪಠ್ಯಪುಸ್ತಕವನ್ನು ಕಸದ ಬುಟ್ಟಿಗೆ ಎಸೆದು ಹಳೆ ಪಠ್ಯವನ್ನು ಮಕ್ಕಳಿಗೆ ನೀಡಿ ಬೋಧಿಸಬೇಕು’ ಎಂದು ತಿಳಿಸಿದರು.

ಬರಗೂರು ರಾಮಚಂದ್ರಪ್ಪ ಅವರ ಸಮಿತಿಯು ಅನೇಕ ವಿಚಾರಗಳನ್ನು ಕೈಬಿಟ್ಟಿತ್ತು ಎಂಬ ಬಿಜೆಪಿ ಆರೋಪದ ಬಗ್ಗೆ ಕೇಳಿದ ಪ್ರಶ್ನೆಗೆ, ‘ ಅವರು ಯಾವುದಾದರು ವಿಚಾರವನ್ನು ಕೈಬಿಟ್ಟಿದ್ದರೆ ಸೇರಿಸಲಿ. ಆದರೆ ಕುವೆಂಪು ಸೇರಿದಂತೆ ಹಲವು ಮಹನೀಯರ ವಿಚಾರವನ್ನು ಕೈಬಿಟ್ಟು, ತಿರುಚಿ ಅವರಿಗೆ ಅಪಮಾನ ಮಾಡುತ್ತಿರುವುದೇಕೆ?’ ಎಂದು ಪ್ರಶ್ನಿಸಿದರು.

ಸಚಿವ ನಾಗೇಶ್ ಅರೆಸ್ಸೆಸ್ ಕಚೇರಿಗೆ ಭೇಟಿ ನೀಡಿ ಪಠ್ಯಪುಸ್ತಕ ವಿಚಾರವಾಗಿ ವರದಿ ನೀಡಿರುವ ಬಗ್ಗೆ ಕೇಳಿದ ಪ್ರಶ್ನೆಗೆ, ‘ ಅವರು ಆರೆಸ್ಸೆಸ್ ಕಚೇರಿಗಾದರೂ ಭೇಟಿ ನೀಡಲಿ, ದೆಹಲಿಗಾದರೂ ಭೇಟಿ ನೀಡಲಿ. ಅವರು ರಾಜ್ಯವನ್ನು ಯಾವ ರೀತಿ ನಡೆಸುತ್ತಿದ್ದಾರೆ, ಮಕ್ಕಳ ಭವಿಷ್ಯ ಮುಖ್ಯವಾಗುತ್ತದೆ. ನಾವೆಲ್ಲರೂ ವಿದ್ಯಾಭ್ಯಾಸ ಮಾಡಿದ ವ್ಯವಸ್ಥೆ ಸರಿ ಇರಲಿಲ್ಲವೇ? ಈ ಸರ್ಕಾರ ಅಂಬೇಡ್ಕರ್ ಅವರು ಕೊಟ್ಟ ಧ್ವನಿ ಕಿತ್ತುಕೊಳ್ಳುವ ಪ್ರಯತ್ನ ಮಾಡುತ್ತಿದೇ. ಈ ಬಗ್ಗೆ ಯಾಕೆ ಪ್ರಶ್ನೆ ಮಾಡುತ್ತಿಲ್ಲ?’ ಎಂದು ಕೇಳಿದರು.

ರೋಹಿತ್ ಚಕ್ರತೀರ್ಥ ಅವರಿಗೆ ಪೊಲೀಸ್ ಭದ್ರತೆ ನೀಡಿರುವ ಬಗ್ಗೆ ಕೇಳಿದ ಪ್ರಶ್ನೆಗೆ, ‘ ಅವರಿಗೆ ಪೊಲೀಸ್ ಭದ್ರತೆಯನ್ನಾದರೂ ನೀಡಲಿ, ಪ್ಯಾರಾ ಮಿಲಿಟರಿ ಭದ್ರತೆಯನ್ನಾದರೂ ನೀಡಲಿ. ನಾವು ಆ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ನಮ್ಮ ಹೋರಾಟ ಸರ್ಕಾರದ ಮನಸ್ಥಿತಿಯ ಬಗ್ಗೆ. ಅವರು ಮಾಡಿದ್ದೆಲ್ಲ ಸರಿ ಎಂದು ಮುಖ್ಯಮಂತ್ರಿ ಬೊಮ್ಮಾಯಿಯವರು ಅಧಿಕೃತ ಮುದ್ರೆ ಒತ್ತಿದ್ದಾರೆ. ನಾವು ಯಾರ ಬಗ್ಗೆಯೂ ವೈಯಕ್ತಿಕ ವಿಚಾರವಾಗಿ ಮಾತನಾಡುತ್ತಿಲ್ಲ. ಯಾರ ಸಲಹೆಯನ್ನಾದರೂ ತೆಗೆದುಕೊಳ್ಳಲಿ. ಅದ್ಯಾವುದನ್ನು ಪ್ರಶ್ನಿಸುತ್ತಿಲ್ಲ. ಆದರೆ ಅವರು ಜನರಿಗೆ ಏನು ನೀಡುತ್ತಾರೆ ಎಂಬುದು ಮುಖ್ಯವಾಗುತ್ತದೆ’ ಎಂದರು.

ಪ್ರವಾದಿ ಮುಹಮ್ಮದ್ ಅವರಿಗೆ ಅಪಮಾನ ಹಾಗೂ ಇಸ್ಲಾಂ ರಾಷ್ಟ್ರಗಳಲ್ಲಿ ಭಾರತದ ವಿರುದ್ಧದ ಅಭಿಯಾನದ ಬಗ್ಗೆ ಕೇಳಿದ ಪ್ರಶ್ನೆಗೆ, ‘ ಈ ವಿಚಾರವಾಗಿ ನಾನು ಈ ಹಿಂದೆಯೇ ಹಲವು ಬಾರಿ ಎಚ್ಚರಿಕೆ ನೀಡಿದ್ದೆ. ಬಿಜೆಪಿಯ ಧರ್ಮ ದ್ವೇಷ ಮನಸ್ಥಿತಿಯಿಂದ ದೇಶಕ್ಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಅಪಮಾನವಾಗುತ್ತಿದೆ. ಈ ದೇಶದ ಪ್ರತಿಭಾವಂತ ಯುವ ಸಮುದಾಯ ಬೇರೆ ದೇಶಗಳತ್ತ ಮುಖ ಮಾಡಿದೆ. ನಮಗೆ ಜಾಗತಿಕ ಕರ್ನಾಟಕ, ಬಸವಣ್ಣನವರ ಕರ್ನಾಟಕ, ಶಿಶುನಾಳ ಶರೀಫರ ಕರ್ನಾಟಕ, ಕನಕದಾಸರ ಕರ್ನಾಟಕ ನಮಗೆ ಬೇಕು. ಮಹನೀಯರು ಕನಸು ಕಂಡಿದ್ದ ಕರ್ನಾಟಕ ರೂಪಿಸಬೇಕು. ಇಡೀ ವಿಶ್ವ ಭಾರತವನ್ನು ಬೆಂಗಳೂರಿನ ಮೂಲಕ ನೋಡುತ್ತಿದೆ. ಬಿಜೆಪಿಯ ಈ ನಿಲುವುಗಳಿಂದ ವ್ಯಾಪಾರ ಕ್ಷೇತ್ರ ಸೇರಿದಂತೆ ಎಲ್ಲ ವರ್ಗಕ್ಕೆ ನಷ್ಟವಾಗಿದೆ. ಬೆಂಗಳೂರಿನ ಘನತೆ ಉಳಿಸುವ ವಿಚಾರವಾಗಿ ಎಸ್.ಎಂ. ಕೃಷ್ಣ ಅವರು ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದರು. ಆ ರಾಷ್ಟ್ರಗಳಲ್ಲಿ ಹಲವು ಭಾರತೀಯರು ಕೆಲಸ ಮಾಡುತ್ತಿದ್ದು, ಅವರಿಗೆ ಇಲ್ಲೇ ಕೆಲಸ ನೀಡಲಿ’ ಎಂದರು.

ಕಾಂಗ್ರೆಸ್ ನಾಯಕರಿಗೆ ಕೆಲಸ ಇಲ್ಲ ಎಂಬ ಸಿಎಂ ಹೇಳಿಕೆ ಬಗ್ಗೆ ಉತ್ತರಿಸಿದ ಅವರು, ‘ ಅವರಿಗೆ ಕೆಲಸ ಇಲ್ಲದೆ ಇಂತಹ ವಿಚಾರಗಳಿಗೆ ಕೈ ಹಾಕುತ್ತಿದ್ದಾರೆ. ಕೇಂದ್ರ ಸರ್ಕಾರದಿಂದ ಹಣ ತಂದು ಡಬಲ್ ಇಂಜಿನ್ ಸರ್ಕಾರ ಅಭಿವೃದ್ಧಿ ಕೆಲಸ ಮಾಡುವುದನ್ನು ಬಿಟ್ಟು ಕೇವಲ ಭಾವನಾತ್ಮಕ ವಿಚಾರ ತೆಗೆದು ಜನರ ಗಮನ ಬೇರೆಡೆ ಸೆಳೆಯಲಾಗುತ್ತಿದೆ’ ಎಂದು ಉತ್ತರಿಸಿದರು.

ರಾಜ್ಯಸಭೆ ಚುನಾವಣೆ ವಿಚಾರವಾಗಿ ಕೇಳಿದ ಪ್ರಶ್ನೆಗೆ, ‘ ಎಲ್ಲಾ ಪಕ್ಷದ ನಾಯಕರುಗಳು ತಮ್ಮ ಆತ್ಮಸಾಕ್ಷಿ ಮತವನ್ನು ಕಾಂಗ್ರೆಸ್ ಪಕ್ಷದ ಎರಡನೇ ಅಭ್ಯರ್ಥಿಗೆ ನೀಡಬೇಕು ಎಂದು ಮನವಿ ಮಾಡಿಕೊಳ್ಳುತ್ತೇನೆ. ಅವನರಿಗೆ ಬೇರೆ ಸಂದರ್ಭಗಳಲ್ಲಿ ಸಾಕಷ್ಟು ಸಹಾಯ ಮಾಡಿದ್ದೇವೆ. ಹೀಗಾಗಿ ಈ ಬಾರಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗೆ ನಿಮ್ಮ ಮತವನ್ನು ನೀಡಿ. ಯಾರೆಲ್ಲ ಜಾತ್ಯತೀತ ತತ್ವದಲ್ಲಿ ನಂಬಿಕೆ ಇಟ್ಟಿದ್ದೀರಾ ನೀವು ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ’ ಎಂದು ಡಿ.ಕೆ.ಶಿವಕುಮಾರ್ ಹೇಳಿದರು.



Join Whatsapp