ಬೆಂಗಳೂರು: ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಬಿಜೆಪಿ ಶಾಸಕ ಎಂ.ಪಿ. ಕುಮಾರಸ್ವಾಮಿ ಅವರು, ಸಿ.ಟಿ. ರವಿ ದೆಹಲಿಯಲ್ಲಿ ಪ್ರಾರಂಭ ಮಾಡಿ ನೆನಪಾದವರನ್ನು, ಅಡ್ಡ ಸಿಕ್ಕವರನ್ನು ಎಲ್ಲರನ್ನು ಕಚ್ಚುತ್ತಾ, ಕಚ್ಚುತ್ತಾ ಬಂದು ಇದೀಗ ನನ್ನನ್ನು ಕಚ್ಚಿದ್ದಾರೆ ಎಂದು ಕಿಡಿಕಾರಿದ್ದಾರೆ.
ವಿಧಾನಸೌಧದಲ್ಲಿ ಇಂದು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ನಾನು ಅವರು ಒಂದೇ ಪಕ್ಷ, ಒಂದೇ ಊರಿನವರು. ಹಾಗಾಗಿ, ಕೂತು ಮಾತನಾಡುವುದು ಒಳ್ಳೆಯದು ಎಂದರು.
ಸಚಿವ ಸ್ಥಾನ ವಿಚಾರ ಈಗ ಪ್ರಸ್ತುತ ಅಲ್ಲ, ಆದರೆ ನಾನು ಸಚಿವ ಸ್ಥಾನದ ಆಕಾಂಕ್ಷಿಯೇ. ಈಗ ಸಚಿವ ಸ್ಥಾನ ಕೇಳುವ ಸಮಯ ಬಂದಿಲ್ಲ. ಸಮಯ ಬಂದಾಗ ಮೊದಲೇ ನಾನು ಕೇಳುತ್ತೇನೆ. ಒತ್ತಾಯ ಮಾಡಲ್ಲ. ಈಗ ಸಮಯ ಬಂದಿಲ್ಲ. ಯಾಕೆ ಅದರ ಬಗ್ಗೆ ಮಾತನಾಡುವುದು. ಸರ್ಕಾರ ಎರಡು ವರ್ಷ ಉತ್ತಮ ಆಡಳಿತ ಕೊಡಲಿ ಮತ್ತೆ ಅಧಿಕಾರಕ್ಕೆ ಬರಲಿ ಎಂಬುವುದು ನಮ್ಮ ಆಸೆ ಎಂದರು.
ಅತಿವೃಷ್ಟಿ ಪಟ್ಟಿಗೆ ತಡವಾಗಿ ಆದರೂ ಮೂಡಿಗೆರೆ ತಾಲೂಕನ್ನು ಸೇರ್ಪಡೆ ಮಾಡಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಕಂದಾಯ ಸಚಿವ ಆರ್. ಅಶೋಕ್ ಅವರಿಗೆ ಧನ್ಯವಾದ ಸಲ್ಲಿಸುತ್ತೇನೆ ಎಂದು ಹೇಳಿದರು.
ಹೇಮಾವತಿ, ಭದ್ರಾ ನದಿಯ ಉಗಮ ಸ್ಥಾನ ಮೂಡಿಗೆರೆ. ಉಗಮ ಸ್ಥಾನದಲ್ಲಿ ಮಳೆ ಆಗಿಲ್ಲ ಎಂಬ ವರದಿ ಬೇಸರ ತರಿಸಿದೆ. ಮೂಡಿಗೆರೆ ಪೇಟೆಯಲ್ಲಿ ರೈನ್ ಗೇಜ್ ಇಡಲಾಗಿದೆ. ರೈನ್ ಗೇಜ್ ಇಟ್ಟಿದ್ದು ತಪ್ಪು ಆಗಿದೆ. ಎಲ್ಲಿ ಇಡಬೇಕು ಅಲ್ಲಿ ಇಟ್ಟಿಲ್ಲ. ಯಾವಾಗಲೂ ಅತಿವೃಷ್ಟಿ ಜಾಗವದು. ಈಗ ಕಂದಾಯ ಸಚಿವರು ಸಮಸ್ಯೆ ಅರಿತು ಪರಿಹರಿಸಿದ್ದಾರೆ. ಅವರಿಗೆ ಧನ್ಯವಾದಗಳನ್ನು ಸಲ್ಲಿಸುವುದಾಗಿ ಹೇಳಿದರು.