ಕಲ್ಲು ಗಣಿಗಾರಿಕೆ ಸಮಸ್ಯೆ ಬಗೆಹರಿಸಲು ಉನ್ನತ ಮಟ್ಟದ ಸಭೆ ನಡೆಸಲು ಕ್ರಷರ್ಸ್ ಅಸೋಷಿಯೇಶನ್ ಒತ್ತಾಯ

Prasthutha|

ಬೆಂಗಳೂರು: ರಾಜ್ಯದಲ್ಲಿ ಗಣಿ ಮತ್ತು ಭೂವಿಜ್ಞಾನ ಇಲಾಖೆಯಲ್ಲಿ ಕಲ್ಲು ಗಣಿಗುತ್ತಿಗೆ ನಿಯಮ ಮತ್ತು ಜಲ್ಲಿ ಕ್ರಷರ್‍ ಗಳ ಸಮಸ್ಯೆಗಳು ಗಂಭೀರವಾಗಿದ್ದು, ಸರ್ಕಾರ ತಕ್ಷಣವೇ ಇವುಗಳನ್ನು ಬಗೆಹರಿಸದಿದ್ದರೆ ಬಂಡವಾಳ ಹೂಡಿರುವ ಮಾಲೀಕರು ತೀರಾ ಸಂಕಷ್ಟಕ್ಕೆ ಸಿಲುಕಲಿದ್ದಾರೆ. ಈ ಉದ್ಯಮ ನಂಬಿರುವವರು ಉದ್ಯೋಗ ಕಳೆದುಕೊಳ್ಳಲಿದ್ದಾರೆ ಎಂದು ಫೆಡರೇಷನ್ ಆಫ್ ಕರ್ನಾಟಕ ಸ್ಟೋನ್ಸ್ ಅಂಡ್ ಕ್ರಷರ್ಸ್ ಅಸೋಷಿಯೇಷನ್ ಎಚ್ಚರಿಕೆ ನೀಡಿದೆ.

- Advertisement -

ಸರ್ಕಾರ ವಿಳಂಬ ಧೋರಣೆ ಮುಂದುವರೆಸಿದರೆ ಸಿಮೆಂಟ್ ಮತ್ತು ಕಬ್ಬಿಣದ ಉದ್ಯಮದ ಮಾದರಿಯಲ್ಲಿ ಈ ವಲಯಗಳು ಕೂಡ ಬಹುರಾಷ್ಟ್ರೀಯರ ಪಾಲಾಗುವ ಜತೆಗೆ ಸರ್ಕಾರದ ಕಾಮಗಾರಿಗಳು, ಮನೆ ಕಟ್ಟುವ ಮಾಲೀಕರು ಸಾಧಾರಣ ಕಟ್ಟಡಕಲ್ಲನ್ನು ದುಬಾರಿ ಬೆಲೆ ನೀಡಿ ಖರೀದಿಸುವ ದುಸ್ಥಿತಿ ಎದುರಾಗಲಿದೆ ಎಂದು ಸಂಘದ ಗೌರವಾಧ್ಯಕ್ಷ ಡಿ. ಸಿದ್ಧರಾಜು, ಅಧ್ಯಕ್ಷ ರವೀಂದ್ರ ಶೆಟ್ಟಿ ಹಾಗೂ ಉಪಾಧ್ಯಕ್ಷ ಬಿ ಎಸ್ ಕಿರಣ್ ಜೈನ್, ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ್ ಕಳವಳ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಜಂಟಿ ಹೇಳಿಕೆ ಬಿಡುಗಡೆ ಮಾಡಿರುವ ಅವರು, ನಮ್ಮ ಸಮಸ್ಯೆಗಳನ್ನು ಕೇಳುವ ಕಾಳಜಿ ಅಥವಾ ಮನಸ್ಥಿತಿ ಸರ್ಕಾರ, ಅಧಿಕಾರಿ ವರ್ಗದವರಿಗೆ ಇಲ್ಲ. ಸಾವಿರಾರು ಸಮಸ್ಯೆಗಳಿಗೆ ಸಿಲುಕಿರುವ ಈ ಉದ್ಯಮ ಬೀದಿ ಪಾಲಾಗುವ ಪರಿಸ್ಥಿತಿ ಬಂದೊದಗಿದೆ. ಸಾವಿರಾರು ಮಾಲೀಕರು, ಬೋವಿ ಜನಾಂಗದವರು ಒಳಗೊಂಡಂತೆ ಲಕ್ಷಾಂತರ ಕೂಲಿ ಕಾರ್ಮಿಕರು ಉದ್ಯೋಗ ಕಳೆದುಕೊಳ್ಳಲಿದ್ದಾರೆ. ಹೀಗಾಗಿ ಸರ್ಕಾರ ತಕ್ಷಣವೇ ನಮ್ಮ ಬೇಡಿಕೆಗಳನ್ನು ಈಡೇರಿಸಲು ಮುಂದಾಗಬೇಕು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಉನ್ನತ ಮಟ್ಟದ ಸಭೆ ಕರೆದು ಸಮಸ್ಯೆಗಳನ್ನು ಬಗೆಹರಿಸಬೇಕು ಎಂದು ಒತ್ತಾಯಿಸಿದ್ದಾರೆ.

- Advertisement -

ತಲಾ ತಲಾಂತರದಿಂದ ಪಟ್ಟಾ ಭೂಮಿಯಲ್ಲಿ ಕಲ್ಲುಗಾರಿಕೆ ನಡೆಸುತ್ತಿರುವವರ ಮೇಲೆ ರಾಜಧನ ಸಂಗ್ರಹಿಸುವ ಜತೆಗೆ ದಂಡ ವಿಧಿಸಿ ಕಿರುಕುಳ ನೀಡಲಾಗುತ್ತಿದೆ. ಯಾವ ರಾಷ್ಟ್ರದಲ್ಲಿ ರಾಜಧನ ಜತೆಗೆ ದಂಡವನ್ನೂ ವಿಧಿಸುವ ಎರಡು ನಿಯಮಗಳು ಜಾರಿಯಲ್ಲಿದೆ?. ಬ್ರಿಟಿಷ್ ಕಾಲದಿಂದಲೂ ಸರ್ಕಾರಿ ಭೂಮಿಯಲ್ಲಿ ಗಣಿಗಾರಿಕೆ ನಡೆಸಿ ಸಾರ್ವಜನಿಕ ಆಸ್ತಿ ನಿರ್ಮಾಣ ಮಾಡಲಾಗಿದೆ. ಹಿಂದಿನಿಂದಲೂ ಇದಕ್ಕೆಲ್ಲಾ ರಾಜಧನ ವಿಧಿಸಲಾಗುತ್ತಿರಲಿಲ್ಲ. 1994 ರಲ್ಲಿ ನಿಯಮಗಳಿಗೆ ತಿದ್ದುಪಡಿ ಮಾಡಿ 2016 ರ ತನಕ ಈ ನಿಯಮಗಳನ್ನು ಜಾರಿಗೆ ತರದೇ ಇಲಾಖೆ ನಿರ್ಲಕ್ಷ್ಯ ವಹಿಸಿತ್ತು. ಈಗ ಏಕಾಏಕಿ ಕಲ್ಲುಗಣಿ ಗುತ್ತಿಗೆ ಮಾಲೀಕರ ಮೇಲೆ ಕೋಟ್ಯಾಂತರ ರೂ. ದಂಡ ವಿಧಿಸಲು ಹೊರಟಿರುವ ಔಚಿತ್ಯವೇನು? ಎಂದು ಅವರು ಪ್ರಶ್ನಿಸಿದ್ದಾರೆ.

ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ ಮತ್ತು ಮಹಾರಾಷ್ಟ್ರ ರಾಜ್ಯಗಳಿಂದ ಬರುತ್ತಿರುವ ಕಟ್ಟಡ ನಿರ್ಮಾಣ ಸಾಮಗ್ರಿಗಳ ಮೇಲೆ ಯಾವುದೇ ನಿರ್ಬಂಧ ವಿಧಿಸಿಲ್ಲ. ಇವುಗಳಿಗೆ ತೆರಿಗೆ ಹಾಕುತ್ತಿಲ್ಲ. ಹೊರ ರಾಜ್ಯಗಳ ಜಲ್ಲಿ ಮತ್ತು ಎಂ-ಸ್ಯಾಂಡ್ ಉತ್ಪನ್ನಗಳಿಗೆ ರಾಜ್ಯದಿಂದ ಪೈಪೋಟಿ ಮಾಡಲಾರದೆ ಉದ್ಯಮ ನೆಲಕಚ್ಚುವಂತಾಗಿದೆ. ಉದ್ಯಮಕ್ಕೆ 30 ವರ್ಷ ಅವಧಿಗೆ ಪರವಾನಿಗೆ ನೀಡುತ್ತಿರುವುದು ಸ್ವಾಗತಾರ್ಹವಾದರೂ ಗಣಿಗುತ್ತಿಗೆಗಳಿಗೆ ಅರ್ಜಿ ಸಲ್ಲಿಸಿ 10 ವರ್ಷಗಳಾದರೂ ಸಹ ಕಾನೂನು ತೊಡಕುಗಳನ್ನು ತಂದೊಡ್ಡಿ ಇಲಾಖೆಯ ಅಧಿಕಾರಿಗಳು ಸರ್ಕಾರಕ್ಕೆ ತಪ್ಪು ಮಾಹಿತಿ ನೀಡಿ ವಿಳಂಬ ನೀತಿಯನ್ನು ಅನುಸರಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ರಾಜ್ಯ ಸರ್ಕಾರ ಎಂ-ಸ್ಯಾಂಡ್ ಘಟಕಗಳಿಗೆ ಉತ್ತೇಜನ ಕೊಡುವುದಾಗಿ ಹೇಳಿದ್ದರೂ ಸಹ ಕಾನೂನು ತಿದ್ದುಪಡಿ ಮಾಡದೇ ಹೊರತು ಖನಿಜ ಲಭ್ಯವಿಲ್ಲದೆ ಉತ್ಪಾದನಾ ಘಟಕಗಳು ಕುಂಠಿತವಾಗಿವೆ. ಇವೆಲ್ಲದರ ಬಗ್ಗೆ ಕ್ರಷರ್ ಮಾಲೀಕರು, ಗಣಿಗುತ್ತಿಗೆದಾರರು ಮತ್ತು ಸರ್ಕಾರದ ಮಧ್ಯೆ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿಗಳು ನೀಡುತ್ತಿರುವ ತಪ್ಪು ಮಾಹಿತಿಯನ್ನು ನಿವಾರಿಸಬೇಕು. ವಿವಿಧ ಇಲಾಖೆಗಳ ನಡುವೆ ಇರುವ ಗೊಂದಲಗಳನ್ನು ಬಗೆಹರಿಸಬೇಕು. ನಮ್ಮ ರಕ್ಷಣೆಗೆ ತಕ್ಷಣವೇ ಆಗಮಿಸಬೇಕು ಎಂದು ಹೇಳಿದ್ದಾರೆ.

Join Whatsapp