ಬೆಳೆ ಹಾನಿ: ರೈತ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಹಣ ಜಮೆ- ಡಾ.ಕೆ.ಸುಧಾಕರ್

Prasthutha|

- Advertisement -

ಚಿಕ್ಕಬಳ್ಳಾಪುರ: ಕಳೆದ ಅಕ್ಟೋಬರ್ ಮತ್ತು ನವೆಂಬರ್ ತಿಂಗಳಲ್ಲಿ ಜಿಲ್ಲೆಯಾದ್ಯಂತ ಸುರಿದ ಭಾರೀ ಪ್ರಮಾಣದ ಮಳೆಯಿಂದಾಗಿ ಜಿಲ್ಲೆಯಲ್ಲಿ ಹಾನಿಗೊಳಗಾದ ರೈತರ ಬೆಳೆಗಳ ವಿವರವನ್ನು ಈವರೆಗೆ ಒಟ್ಟು 17 ಹಂತಗಳಲ್ಲಿ ನಮೂದಿಸಲಾಗಿದ್ದು, ಒಟ್ಟು 81,165 ರೈತ ಫಲಾನುಭವಿಗಳಿಗೆ 37,80,03,265.5 ರೂಗಳನ್ನು ನೇರ ನಗದು ವರ್ಗಾವಣೆ (ಡಿಬಿಟಿ) ಮೂಲಕ ಅವರ ಬ್ಯಾಂಕ್ ಖಾತೆಗಳಿಗೆ ಜಮೆ ಮಾಡಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.

ಈ ಕುರಿತು ಗುರುವಾರ ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಅವರು, ಮಳೆಯಿಂದ ಜಿಲ್ಲೆಯಾದ್ಯಂತ ಆಗಿರುವ ಬೆಳೆ ಹಾನಿ ವಿವರಗಳನ್ನು ಪ್ರಥಮ ಆದ್ಯತೆಯ ಮೇಲೆ ಪರಿಹಾರ್ ಪೋರ್ಟಲ್ ನಲ್ಲಿ ನಮೂದಿಸಲಾಗಿದೆ. ಜ.6 ರ ವರೆಗೆ ನಡೆದ 17 ಹಂತಗಳ ದತ್ತಾಂಶ ನಮೂದು ಭಾಗವಾಗಿ 81,165 ರೈತ ಫಲಾನುಭವಿಗಳಿಗೆ ಒಟ್ಟು 37,80,03,265.5 ರೂಪಾಯಿಯನ್ನು ನೇರ ನಗದು ವರ್ಗಾವಣೆ (ಡಿಬಿಟಿ) ಮೂಲಕ ಅವರ ಬ್ಯಾಂಕ್ ಖಾತೆಗಳಿಗೆ ಜಮೆ ಮಾಡಲಾಗಿತ್ತು. ಜ.6 ರವರೆಗೆ ಲಭ್ಯವಾಗಿರುವ ಅಂಕಿ ಅಂಶಗಳ ಪ್ರಕಾರ, ಈವರೆಗೆ ಒಟ್ಟು 17 ಹಂತಗಳಲ್ಲಿ ರೈತರ ಬೆಳೆ ಹಾನಿ ವಿವರ ನೊಂದಣಿ ಮಾಡಿ ರೈತ ಫಲಾನುಭವಿಗಳ ಹೆಸರನ್ನು ಪರಿಹಾರ್ ಪೋರ್ಟಲ್ ದತ್ತಾಂಶದಲ್ಲಿ ನಮೂದಿಸಲಾಗಿದೆ ಎಂದರು.

- Advertisement -

ಬೆಳೆಹಾನಿ ವಿವರ ಹಾಗೂ ಪರಿಹಾರ ಕೃಷಿ, ತೋಟಗಾರಿಕೆ ಮತ್ತು ರೇಷ್ಮೇ ಬೆಳೆಗಳ ಹಾನಿಗೊಳಗಾದ ದತ್ತಾಂಶವನ್ನು ತಾಲ್ಲೂಕುವಾರು ಈ ರೀತಿ ನಮೂದಿಸಲಾಗಿದೆ. ಚಿಕ್ಕಬಳ್ಳಾಪುರ ತಾಲ್ಲೂಕಿನಲ್ಲಿ ಒಟ್ಟು 10,367.6 ಹೆಕ್ಟೇರ್, ಚಿಂತಾಮಣಿಯಲ್ಲಿ 12,190.7 ಹೆಕ್ಟೇರ್, ಬಾಗೇಪಲ್ಲಿಯಲ್ಲಿ 14,811.4 ಹೆಕ್ಟೇರ್, ಗೌರಿಬಿದನೂರಿನಲ್ಲಿ 14,104.3 ಹೆಕ್ಟೇರ್, ಗುಡಿಬಂಡೆ 7,613.12 ಹೆಕ್ಟೇರ್ ಮತ್ತು ಶಿಡ್ಲಘಟ್ಟ ತಾಲ್ಲೂಕಿನಲ್ಲಿ 9,356.96 ಹೆಕ್ಟೇರ್ ಸೇರಿದಂತೆ ಒಟ್ಟಾರೆ 68,444 ಹೆಕ್ಟೇರ್ ಪ್ರದೇಶದ ವಿವಿಧ ಬೆಳೆಗಳ ಬೆಳೆ ಹಾನಿಯಾಗಿದೆ.

ಕೋವಿಡ್ ನಿಂದ ಮೃತಪಟ್ಟ ಕುಟುಂಬಸ್ಥರಿಗೆ ಪರಿಹಾರ ಕೋವಿಡ್-19 ನಿಂದ ಮೃತಪಟ್ಟ 341 ಕುಟುಂಬಸ್ಥರಿಗೆ ಕೇಂದ್ರ ಸರ್ಕಾರದಿಂದ ನೀಡುವ 50 ಸಾವಿರ ರೂಗಳನ್ನು ನೇರವಾಗಿ ಸಂಬಂಧಪಟ್ಟವರ ಖಾತೆಗೆ ನಗದನ್ನು ಜಮೆ ಮಾಡಲಾಗಿದೆ. ರಾಜ್ಯ ಸರ್ಕಾರದಿಂದ ನೀಡುವ ಒಂದು ಲಕ್ಷ ರೂಗಳ ಪರಿಹಾರ ಮೊತ್ತವನ್ನು ಚೆಕ್ ಮೂಲಕ 246 ಕುಟುಂಬಸ್ಥರಿಗೆ ವಿತರಿಸಲಾಗುತ್ತಿದ್ದು, ಈ 246 ಕುಟುಂಬಗಳ ಪೈಕಿ ಚಿಕ್ಕಬಳ್ಳಾಪುರ ತಾಲ್ಲೂಕು 84, ಚಿಂತಾಮಣಿ ತಾಲ್ಲೂಕು 93, ಬಾಗೇಪಲ್ಲಿ ತಾಲ್ಲೂಕು 36, ಗೌರಿಬಿದನೂರು ತಾಲ್ಲೂಕು 48, ಗುಡಿಬಂಡೆ 23 ಹಾಗೂ ಶಿಡ್ಲಘಟ್ಟ ತಾಲ್ಲೂಕಿನಲ್ಲಿ 87 ಒಟ್ಟಾರೆ 341 ಕುಟುಂಬಸ್ಥರಿಗೆ ಪರಿಹಾರ ವಿತರಿಸಲು ಕ್ರಮವಹಿಸಲಾಗಿದೆ.

ಮಳೆಯಿಂದ ಹಾನಿಯಾದ ಮನೆಗಳ ವಿವರ ಹಾಗೂ ಪರಿಹಾರ
ಮಳೆಯಿಂದ ಹಾನಿಯಾದ ಮನೆಗಳಿಗೆ ಸರ್ಕಾರವು ಎ,ಬಿ,ಸಿ ವರ್ಗಗಳ ಹಾನಿಗೊಳಗಾದ ಮನೆಗಳಿಗೆ ವಿವಿಧ ಹಂತಗಳಲ್ಲಿ ಪರಿಹಾರವನ್ನು ನೀಡಲಾಗುತ್ತಿದೆ. ಅಲ್ಲದೇ ಮನೆಯಲ್ಲಿ ಮಳೆನೀರು ನುಗ್ಗಿ ದಿನಬಳಕೆ ವಸ್ತುಗಳು/ಪಾತ್ರೆ/ಬಟ್ಟೆ/ದವಸ ಧಾನ್ಯಗಳು ಹಾನಿಯಾಗಿದ್ದರೆ, ತುರ್ತು ಪರಿಹಾರಕ್ಕೆ 10 ಸಾವಿರ ರೂಗಳನ್ನು ವಿತರಿಸಲಾಗುತ್ತಿದೆ.

‘ಎ’ ವರ್ಗದ (ಶೇ. 75 ರಿಂದ ಶೇ. 100) ಪೂರ್ಣ ಪ್ರಮಾಣದ ಮನೆ ಹಾನಿ ಹಾಗೂ ‘ಬಿ 2’ (ಶೇ.25 ರಿಂದ ಶೇ.75) ತೀವ್ರ ಮನೆ ಹಾನಿ (ಕೆಡವಿ ಹೊಸದಾಗಿ ನಿರ್ಮಿಸುವುದು) ಒಟ್ಟು 5 ಲಕ್ಷ ನೀಡುತ್ತಿದ್ದು, ಮೊದಲ ಕಂತಿನಲ್ಲಿ 95,100 ರೂಗಳನ್ನು ಹಾಗೂ ಉಳಿದ ನಾಲ್ಕು ಕಂತುಗಳಲ್ಲಿ 4,04,900 ರೂಗಳನ್ನು ನೀಡಲಾಗುತ್ತದೆ. ‘ಬಿ 1’ (ಶೇ.25 ರಿಂದ ಶೇ.75) ತೀವ್ರ ಮನೆ ಹಾನಿ (ದುರಸ್ಥಿ)ಗೆ ಒಟ್ಟು 3 ಲಕ್ಷ ರೂಗಳು ಮೊದಲ ಕಂತಿನಲ್ಲಿ 95,100 ರೂಗಳು ಉಳಿದೆರಡು ಕಂತುಗಳಲ್ಲಿ 204,900 ರೂಗಳನ್ನು ವಿತರಿಸಲಾಗುತ್ತದೆ. ‘ಸಿ’ (ಶೇ.15 ರಿಂದ ಶೇ.25) ಭಾಗಶಃ ಮನೆಹಾನಿಗೆ ಒಟ್ಟು 50 ಸಾವಿರ ರೂಗಳನ್ನು ಒಂದೇ ಕಂತಿನಲ್ಲಿ ನೀಡಲಾಗುತ್ತಿದೆ ಎಂದು ಸಚಿವರು ತಿಳಿಸಿದ್ದಾರೆ.

Join Whatsapp