ಅಭಿಮಾನಿಯ ಮೊಬೈಲ್‌ ನೆಲಕ್ಕೆಸೆದ ರೊನಾಲ್ಡೊ | ಕ್ಷಮೆಯಾಚನೆ

Prasthutha|

ಲಿವರ್‌ಪೂಲ್: ಅಭಿಮಾನಿಯ ಕೈಯಲ್ಲಿದ್ದ ಮೊಬೈಲ್‌ ಫೋನ್‌ಅನ್ನು ನೆಲಕ್ಕೆಸೆದು ಆಕ್ರೋಷ ವ್ಯಕ್ತಪಡಿಸಿದ್ದ ಖ್ಯಾತ ಫುಟ್ಬಾಲ್‌ ಆಟಗಾರ ಕ್ರಿಸ್ಟಿಯಾನೋ ರೊನಾಲ್ಡೊ, ಘಟನೆ ವಿವಾದವಾಗುತ್ತಲೇ ಕ್ಷಮೆಯಾಚಿಸಿದ್ದಾರೆ.
ಇಂಗ್ಲಿಷ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯ ಮಹತ್ವದ ಪಂದ್ಯದಲ್ಲಿ ರೊನಾಲ್ಡೊ ಪ್ರತಿನಿಧಿಸುತ್ತಿರುವ ಮ್ಯಾಂಚೆಸ್ಟರ್‌ ಯುನೈಟೆಡ್‌ ತಂಡ, ದುರ್ಬಲ ಎವರ್ಟನ್ ವಿರುದ್ಧ 0-1 ಗೋಲುಗಳ ಅಂತರದಲ್ಲಿ ಸೋಲು ಅನುಭವಿಸಿತ್ತು. ಎವರ್ಟನ್ ತವರು ಮೈದಾನ ಗೂಡಿಸನ್‌ ಮೈದಾನದಲ್ಲಿ ನಡೆದ ಪಂದ್ಯದಲ್ಲಿ, ಪೂರ್ಣಾವಧಿ ಮೈದಾನದಲ್ಲಿದ್ದರೂ ಗೋಲು ಗಳಿಸುವಲ್ಲಿ ರೊನಾಲ್ಡೊ ವಿಫಲರಾಗಿದ್ದರು.

- Advertisement -


ಸೋತ ನಿರಾಸೆಯಲ್ಲಿ ಡ್ರೆಸ್ಸಿಂಗ್‌ ರೂಮ್‌ಗೆ ಹಿಂತಿರುಗುವ ವೇಳೆ ಅಭಿಮಾನಿಯ ಕೈಯಲ್ಲಿದ್ದ ಮೊಬೈಲ್‌ ಫೋನ್‌ಅನ್ನು ರೊನಾಲ್ಡೊ ನೆಲಕ್ಕೆ ಎಸೆದಿದ್ದರು. ಘಟನೆಯ ವೀಡಿಯೋ ಸಾಕಷ್ಟು ವೈರಲ್‌ ಆಗಿತ್ತು. ರೊನಾಲ್ಡೊ ವರ್ತನೆಗೆ ಅಭಿಮಾನಿಗಳಿಂದ ವ್ಯಾಪಕ ಅಕ್ರೋಶ ವ್ಯಕ್ತವಾಗಿತ್ತು.


“ನಾವು ಎದುರಿಸುತ್ತಿರುವಂತಹ ಕಷ್ಟದ ಕ್ಷಣಗಳಲ್ಲಿ ಭಾವನೆಗಳನ್ನು ನಿಭಾಯಿಸುವುದು ಎಂದಿಗೂ ಸುಲಭವಲ್ಲ. ಆದಾಗಿಯೂ, ನಾವು ಯಾವಾಗಲೂ ಗೌರವಯುತವಾಗಿರಬೇಕು, ತಾಳ್ಮೆಯಿಂದಿರಬೇಕು ಹಾಗೂ ಸುಂದರವಾದ ಆಟವನ್ನು ಪ್ರೀತಿಸುವ ಎಲ್ಲಾ ಯುವಕರಿಗೆ ಮಾದರಿಯಾಗಬೇಕು. ನನ್ನ ವರ್ತನೆಗೆ ನಾನು ಕ್ಷಮೆಯಾಚಿಸಲು ಬಯಸುತ್ತೇನೆ ಹಾಗೂ ಸಾಧ್ಯವಾದರೆ ಓಲ್ಡ್ ಟ್ರಾಫರ್ಡ್‌ನಲ್ಲಿ ಕ್ರೀಡಾ ಮನೋಭಾವದ ಸಂಕೇತವಾಗಿ ಪಂದ್ಯವನ್ನು ವೀಕ್ಷಿಸಲು ನಾನು ಈ ಬೆಂಬಲಿಗನನ್ನು ಆಹ್ವಾನಿಸಲು ಬಯಸುತ್ತೇನೆ” ಎಂದು 37ರ ವಯಸ್ಸಿನ ರೊನಾಲ್ಡೊ ಇನ್ಸ್ಟಗ್ರಾಂ ನಲ್ಲಿ ಬರೆದಿದ್ದಾರೆ.
ಇಂಗ್ಲಿಷ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯ ಅಗ್ರ ನಾಲ್ಕರಲ್ಲಿ ಸ್ಥಾನ ಗಳಿಸಿ, ಚಾಂಪಿಯನ್ಸ್‌ ಲೀಗ್‌ ಟೂರ್ನಿಗೆ ಅರ್ಹತೆ ಪಡೆಯಲು ಮ್ಯಾಂಚೆಸ್ಟರ್ ಯುನೈಟೆಡ್ ತೀವ್ರ ಕಸರತ್ತು ನಡೆಸುತ್ತಿದೆ. ಶನಿವಾರದ ಪಂದ್ಯದ 27ನೇ ನಿಮಿಷದಲ್ಲಿ ಆ್ಯಂಟನಿ ಗಾ‌ರ್ಡಾನ್ ಗಳಿಸಿದ ಏಕೈಕ ಗೋಲಿನ ಬಲದಿಂದ ಎವರ್ಟನ್, ಬಲಿಷ್ಠ ಯುನೈಟೆಡ್‌ ತಂಡವನ್ನು ರೋಚಕವಾಗಿ ಮಣಿಸಿತ್ತು.
ಸೈಂಟ್‌ ಮೇರಿಸ್‌ ಮೈದಾನದಲ್ಲಿ ನಡೆದ ಮತ್ತೊಂದು ಪಂದ್ಯದಲ್ಲಿ ಚೆಲ್ಸಿಯಾ ತಂಡ 6–0 ಗೋಲುಗಳ ಅಂತರದಲ್ಲಿ ಸೌಥಾಂಪ್ಟನ್ ಎದುರು ಗೆಲುವು ಸಾಧಿಸಿದೆ. 8ನೇ ನಿಮಿಷದಲ್ಲಿ ಮಾರ್ಕೋಸ್ ಅಲೊನ್ಸೊ ಗಳಿಸಿದ ಗೋಲಿನ ಮೂಲಕ ಚೆಲ್ಸಿಯಾ ಮುನ್ನಡೆ ಗಳಿಸಿತ್ತು. ಮೇಸನ್ ಮೌಂಟ್ (16, 54ನೇ ನಿ) ಟಿನೊ ವಾರ್ನರ್ (21, 49ನೇ ನಿ) ಹಾಗೂ ಕಾಯ್ ಹವೆಟ್ಸ್‌ 31ನೇ ನಿಮಿಷದಲ್ಲಿ ಗೋಲು ಗಳಿಸಿದರು.

Join Whatsapp