ಬೆಂಗಳೂರು: ದೇಶಿ ಕ್ರಿಕೆಟ್ ಫಿಕ್ಸಿಂಗ್ ಭೂತ ತಲೆ ಎತ್ತುವ ಊಹಾಪೋಹಗಳ ನಡುವೆ ಕ್ರಿಕೆಟಿಗ ಸತೀಶ್ ರಾಜಗೋಪಾಲ್ ಗೆ ಫಿಕ್ಸಿಂಗ್ ಆಮಿಷ ಒಡ್ಡಿದ ಪ್ರಕರಣದ ಸಂಬಂಧ ಆರೋಪಿಯೊಬ್ಬನನ್ನು ಜಯನಗರ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಾಗೇಪಲ್ಲಿಯ ಆನಂದ್ ಕುಮಾರ್ ಅಲಿಯಾಸ್ ಬನ್ನಿ ಆನಂದ್ ಬಂಧಿತ ಆರೋಪಿಯಾಗಿದ್ದಾನೆ. ಆರೋಪಿಯು ತಲೆಮರೆಸಿಕೊಂಡ ಆರೋಪಿಗಳ ಜೊತೆ ಸೇರಿ ತಮಿಳುನಾಡು ಕ್ರಿಕೆಟಿಗ ಸತೀಶ್ ಗೆ ಸಾಮಾಜಿಕ ಜಾಲತಾಣ ಇನ್ ಸ್ಟಾ ಗ್ರಾಂ ಮೂಲಕ ಸಂದೇಶ ಕಳಿಸಿ ಟಿಎನ್ ಪಿಎಲ್ ನಲ್ಲಿ ಫಿಕ್ಸಿಂಗ್ ನಲ್ಲಿ ಭಾಗಿಯಾಗುವಂತೆ ಆಮಿಷವೊಡ್ಡಿದ್ದರು.
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ರಚಿಸಲಾಗಿದ್ದ ಜಯನಗರ ಪೊಲೀಸ್ ಇನ್ಸ್ಪೆಕ್ಟರ್ ಮಂಜುನಾಥ್ ಮತ್ತವರ ತಂಡ ಕಾರ್ಯಾಚರಣೆ ಕೈಗೊಂಡು ಆರೋಪಿಯನ್ನು ಬಂಧಿಸಿ ಉಳಿದ ಆರೋಪಿಗಳ ಬಂಧನಕ್ಕೆ ಶೋಧ ನಡೆಸಿದೆ ಎಂದು ಡಿಸಿಪಿ ಹರೀಶ್ ಪಾಂಡೆ ತಿಳಿಸಿದ್ದಾರೆ.
ಆರೋಪಿಗಳು ಫಿಕ್ಸಿಂಗ್ ನಲ್ಲಿ ಭಾಗಿಯಾಗುವಂತೆ ಆಮಿಷವೊಡ್ಡಿ ತಮಿಳುನಾಡಿನ ಐವರು ಆಟಗಾರರಾದ
ಆ್ಯಂಟೋನಿ ದಾಸ್, ಸಂಜಯ್ ಯಾದವ್, ಅಶ್ವಿನ್ ಕ್ರಿಸ್ಟ್, ಎಂ ಸಿದ್ಧಾರ್ಥ್ ಗೆ ಸಂದೇಶ ಕಳುಹಿಸಿದ್ದರು. ಐವರ ಪೈಕಿ ಕ್ರಿಕೆಟಿಗ ಸತೀಶ್ ರಾಜಗೋಪಾಲ್ ಮಾತ್ರ ಆರೋಪಿಗಳ ಮೆಸೇಜ್ ಗೆ ಪ್ರತಿಕ್ರಿಯಿಸಿದ್ದರು. ಬಳಿಕ ಆರೋಪಿಗಳು ಫಿಕ್ಸಿಂಗ್ ಆಮೀಷವೊಡ್ಡಿದಾಗ ಸತೀಶ್ ಬಿಸಿಸಿಐ ಗಮನಕ್ಕೆ ತಂದಿದ್ದರು.
ಜಯನಗರ ಪೊಲೀಸರು ಆರೋಪಿ ಆನಂದ್ ಕುಮಾರ್ ನನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಸಾಲ ತೀರಿಸಲು ಅಡ್ಡ ದಾರಿ ಹಿಡಿದಿರುವುದಾಗಿ ಒಪ್ಪಿಕೊಂಡಿದ್ದಾರೆ.
ಡೆಲಿವರಿ ಬಾಯ್ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ಆನಂದ್, ಕ್ರಿಕೆಟ್ ಶೋಕಿಯಿಂದ 4-5 ಲಕ್ಷ ರೂ. ಸಾಲ ಮಾಡಿಕೊಂಡಿದ್ದ. ಸಾಲ ತೀರಿಸಲು ಕ್ರಿಕೆಟಿಗರ ಬ್ಲ್ಯಾಕ್ ಮೇಲ್ ಮಾಡಲು ಸಂಚು ಮಾಡಿಕೊಂಡು ಯೂಟ್ಯೂಬ್ ನಲ್ಲಿ ಕ್ರಿಕೆಟಿಗರನ್ನು ವಂಚಿಸುವ ಬಗ್ಗೆ ಹುಡುಕಾಡಿ ಮಾಹಿತಿ ಕಲೆ ಹಾಕಿ ವಂಚನೆಗೆ ಮುಂದಾಗಿದ್ದಾನೆ.
ಮೊದಲಿಗೆ ಕ್ರಿಕೆಟಿಗರಿಗೆ ಇನ್ಸ್ ಸ್ಟಾಗ್ರಾಂ ಮೂಲಕ ಫಿಕ್ಸಿಂಗ್ ಆಮಿಷವೊಡ್ಡಿ ಬಳಿಕ ಅವರು ಪ್ರತಿಕ್ರಿಯಿಸಿದರೆ ಸ್ಕ್ರೀನ್ ಶಾಟ್ ತೆಗೆದುಕೊಂಡು ಅದರಿಂದ ಬ್ಲ್ಯಾಕ್ ಮೇಲ್ ಮಾಡಿ ಹಣ ವಸೂಲಿ ಮಾಡಲು ಆರೋಪಿ ಆನಂದ್ ಪ್ಲ್ಯಾನ್ ಮಾಡಿದ್ದ. ಅದರಂತೆಯೇ 4-5 ಆಟಗಾರರಿಗೆ ಇನ್ ಸ್ಟಾಗ್ರಾಂ ಮೂಲಕ ಮೆಸೇಜ್ ಕಳುಹಿಸಿದ್ದ. ಆದರೆ ಅವನ ಯೋಜನೆ ಉಲ್ಟಾ ಹೊಡೆದಿದೆ.
ಕ್ರಿಕೆಟಿಗ ರಾಜಗೋಪಾಲ್ ಸತೀಶ್ ಘಟನೆ ಸಂಬಂಧ ದೂರು ನೀಡಿ ಕೃತ್ಯಕ್ಕೆ ಅಂತ್ಯ ಹಾಡಿದ್ದಾರೆ.
ಘಟನೆ ವಿವರ:
ಆರೋಪಿ ಬನ್ನಿ ಆನಂದ್ ತಮಿಳುನಾಡಿನ ಆಲ್ ರೌಂಡರ್ ಆಟಗಾರ ಸತೀಶ್ ರಾಜಗೋಪಾಲ್ ಗೆ ಫಿಕ್ಸಿಂಗ್ ಮಾಡಿಕೊಳ್ಳಲು ಇನ್ ಸ್ಟಾಗ್ರಾಂನಲ್ಲಿ ಮೆಸೇಜ್ ಮಾಡಿದ್ದ. ಐಪಿಎಲ್ ನಲ್ಲಿ ಮುಂಬೈ, ಪಂಜಾಬ್, ಕೋಲ್ಕತ್ತಾ ಪರ ಆಡಿದ್ದ ತಮಿಳುನಾಡು ರಣಜಿ ತಂಡದ ಸದಸ್ಯನಾಗಿರುವ ಸತೀಶ್, ಮುಂಬರುವ ಟಿಎನ್ ಪಿಎಲ್ ನಲ್ಲಿ ಚೆಪಾಕ್ ಸೂಪರ್ ಗಿಲ್ಲೀಸ್ ಪರ ಕಣಕ್ಕಿಳಿಯುತ್ತಿದ್ದಾರೆ. ಹೀಗಾಗಿ ಸ್ಪಾಟ್ ಫಿಕ್ಸಿಂಗ್ ಮಾಡಿಕೊಳ್ಳುವಂತೆ ಬನ್ನಿ ಆನಂದ್ ಇನ್ ಸ್ಟಾಗ್ರಾಂನಲ್ಲಿ ಮೆಸೇಜ್ ಮಾಡಿ ಆಫರ್ ನೀಡಿದ್ದ.
ಮುಂಬರುವ ಟಿಎನ್ ಪಿಎಲ್ ನಲ್ಲಿ ಫಿಕ್ಸಿಂಗ್ ನಲ್ಲಿ ಭಾಗಿಯಾಗಬೇಕು. ಈಗಾಗಲೇ ಇಬ್ಬರು ಆಟಗಾರರು ಫಿಕ್ಸಿಂಗ್ ಗೆ ಒಪ್ಪಿದ್ದಾರೆ. ನೀವು ಭಾಗಿಯಾದರೆ ಪ್ರತಿ ಪಂದ್ಯಕ್ಕೆ 40 ಲಕ್ಷ ಆಫರ್ ಕೊಡ್ತೀವಿ ಎಂದು ಮೆಸೇಜ್ ಮಾಡಿದ್ದಾರೆ. ಆಟಗಾರ ಸತೀಶ್ ಆಫರ್ ತಿರಸ್ಕರಿಸಿ ಬಿಸಿಸಿಐ ಭ್ರಷ್ಟಾಚಾರ ನಿಗ್ರಹ ಘಟಕಕ್ಕೆ ಮಾಹಿತಿ ನೀಡಿದ್ದರು. ಸತೀಶ್ ಮಾಹಿತಿ ಆಧರಿಸಿ ನಗರ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು ಘಟನೆ ಸಂಬಂಧ ಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.