ಏಷ್ಯಾಕಪ್‌ನಲ್ಲಿ ಭಾನುವಾರ ನಡೆದಿದ್ದ ಭಾರತ- ಪಾಕಿಸ್ತಾನ ನಡುವಿನ ರೋಚಕ ಪಂದ್ಯದಲ್ಲಿ, ಕೇವಲ ಒಂದು ಎಸೆತ ಬಾಕಿ ಇರುವಂತೆ ಪಾಕ್ 5 ವಿಕೆಟ್‌ಗಳ ಸ್ಮರಣೀಯ ಗೆಲುವು ದಾಖಲಿಸಿತ್ತು. ಪಂದ್ಯದ ಮಹತ್ವದ ಘಟ್ಟದಲ್ಲಿ ಕ್ಯಾಚ್ ಕೈಚೆಲ್ಲಿದ್ದ ಅರ್ಷ್‌ದೀಪ್ ಸಿಂಗ್, ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
ರವಿ ಬಿಷ್ಣೋಯ್ ಎಸೆದ 18ನೇ ಓವರ್‌ನ ಮೂರನೇ ಎಸೆತದಲ್ಲಿ ಅರ್ಷ್‌ದೀಪ್ ಸಿಂಗ್, 1 ರನ್ ಗಳಿಸಿದ್ದ ಆಸಿಫ್ ಅಲಿಯ ಸುಲಭ ಕ್ಯಾಚ್ ಚೆಲ್ಲಿದ್ದರು. ಇದರ ಲಾಭ ಪಡೆದ ಅಲಿ, ಆ ಬಳಿಕ 1 ಬೌಂಡರಿ ಮತ್ತು 2 ಸಿಕ್ಸರ್ ಸಿಡಿಸಿ ಪಾಕಿಸ್ತಾ ತಂಡದ ಗೆಲುವಿನ ಹಾದಿಯನ್ನು ಸುಗಮಗೊಳಿಸಿದ್ದರು.
ಅರ್ಷ್‌ದೀಪ್ ವಿರುದ್ಧ ಮೈದಾನದಲ್ಲೇ ರೋಹಿತ್ ಶರ್ಮಾ ಅಸಮಾಧಾನ ವ್ಯಕ್ತಪಡಿಸಿದ್ದರು. ಇದೀಗ ವಿಕಿಪೀಡಿಯಾದಲ್ಲಿ ಅರ್ಷದೀಪ್ ಸಿಂಗ್ ಕುರಿತಾದ ಸುಳ್ಳು ಮಾಹಿತಿಗಳನ್ನು ಹಾಕಿರುವ ಕಿಡಿಗೇಡಿಗಳು, ಪಂಜಾಬ್ನ ಅರ್ಷದೀಪ್ ಪ್ರತ್ಯೇಕತಾವಾದ ಬಯಸುವ ಗುಂಪಾದ ಖಲಿಸ್ಥಾನಿಗಳಿಗೆ ಬೆಂಬಲ ನೀಡುತ್ತಿದ್ದಾರೆ ಎಂದು ಬಿಂಬಿಸಿದ್ದರು.
ಅರ್ಷ್‌ದೀಪ್ ಸಿಂಗ್ ಅವರ ಮಾಹಿತಿಯನ್ನು ಒಳಗೊಂಡ ಪುಟದಲ್ಲಿ ಭಾರತ ಎಂದಿದ್ದ ಜಾಗದಲ್ಲಿ ಪಂಜಾಬ್ ಪ್ರತ್ಯೇಕತೆಯನ್ನು ಬಯಸುವ, ಅಸ್ತಿತ್ವದಲ್ಲೇ ಇಲ್ಲದ ಖಲಿಸ್ಥಾನ್ ಎಂದು ಬರೆಯಲಾಗಿದೆ. ಹೀಗೆ ತಿದ್ದಲ್ಪಟ್ಟ ಅರ್ಷ್‌ದೀಪ್ ಸಿಂಗ್ ವಿಕಿಪಿಡಿಯಾ ಪುಟ ಸಾಮಾಜಿಕ ಜಾಲತಾಣದಲ್ಲಿ ವಿವಾದ ಹುಟ್ಟುಹಾಕಿತ್ತು. ಭಾರತದ ಬದಲಿಗೆ ಖಲಿಸ್ಥಾನ್ ಎಂದು ಬರೆದ ಪದವನ್ನು ಗುರುತಿಸಿದ ವಿಕಿಪೀಡಿಯಾ 15 ನಿಮಿಷದಲ್ಲಿ ಅಳಿಸಿ ಹಾಕಿದೆ.
ಆದರೆ ಈ ವಿಷಯವನ್ನು ಕೇಂದ್ರ ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, ಈ ಕುರಿತು ಖುದ್ದು ಹಾಜರಾಗಿ ವಿವರಣೆ ನೀಡುವಂತೆ, ಕೇಂದ್ರ ಐಟಿ ಸಚಿವಾಲಯ, ವಿಕಿಡಿಯಾ ಕಾರ್ಯನಿರ್ವಾಹಕರಿಗೆ ಶೋಕಾಸ್ ನೋಟಿಸ್ ಜಾರಿ ಮಾಡಿದೆ.
ಅರ್ಷ್‌ದೀಪ್‌ಗೆ ಕೊಹ್ಲಿ ಬೆಂಬಲ: ಭಾರತದ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿರುವ ಯುವ ಬೌಲರ್, ಅರ್ಷದೀಪ್ ಸಿಂಗ್ ಬೆಂಬಲಕ್ಕೆ ನಿಂತಿರುವ ವಿರಾಟ್ ಕೊಹ್ಲಿ, ಒತ್ತಡದಲ್ಲಿ ತಪ್ಪು ಮಾಡುವುದು ಸಹಜ ಎಂದು ಬೆನ್ನು ತಟ್ಟಿದ್ದಾರೆ.